ಮೂರೂ ಕುಟುಂಬಗಳಿಗೆ ತಲಾ 5 ಲಕ್ಷದ ಚೆಕ್ ಹಸ್ತಾಂತರ
ಕೊಟ್ಟ ಮಾತು ಉಳಿಸಿಕೊಂಡ ರಾಮಾಚಾರಿ
ಗದಗ: ರಾಕಿಂಗ್ ಸ್ಟಾರ್ ಯಶ್ ಜನ್ಮದಿನಂಗವಾಗಿ ಅವರ ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಮೂವರು ಯುವಕರ ಕುಟುಂಬದವರಿಗೆ ತಲಾ ಐದು ಲಕ್ಷ ರೂ ನೆರವಿನ ಹಸ್ತವನ್ನು ನೀಡುವ ಮೂಲಕ ಅಭಿಮಾನಿಗಳ ಪಾಲಿನ ನೆಚ್ಚಿನ ’ರಾಮಾಚಾರಿ’ ಮಾನವೀಯತೆ ಮೆರೆದಿದ್ದಾರೆ.
ಹನುಮಂತ ಹರಿಜನ((21), ಮುರಳಿ ನಡುವಿನಮನಿ(20) ಮತ್ತು ನವೀನ ಗಾಜಿ(19) ಇವರುಗಳ ಕುಟುಂಬದ ಸದಸ್ಯರಿಗೆ ಯಶ್ ಆಪ್ತ ವಲಯದ ರಾಕೇಶ, ಚೇತನ ಇವರುಗಳು ಹುಬ್ಬಳ್ಳಿಯ ಉದ್ಯಮಿ ಮನೀಷ ನಾಯಕ ಜತೆ ಇಂದು ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿ ಚೆಕ್ ಹಸ್ತಾಂತರಿಸಿದರು.
ಘಟನೆ ನಡೆದ ಮರುದಿನವೇ ದಿ. 8ರಂದು ತಮ್ಮ ಜನ್ಮದಿನವನ್ನು ಲೆಕ್ಕಿಸದೇ ಗ್ರಾಮಕ್ಕೆ ಆಗಮಿಸಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಲ್ಲದೇ ತಾವು ಎಲ್ಲ ಕುಟುಂಬಗಳಿಗೆ ನೆರವಾಗುವ ಭರವಸೆ ನೀಡಿ ತೆರಳಿದ್ದರು.
ಇಂದು ಯಶ್ ಆಪ್ತವಲಯದ ರಾಕೇಶ,ಚೇತನ ಮನಿಷ ನಾಯಕರೊಂದಿಗೆ ಕಾರಿನಲ್ಲಿ ತೆರಳಿ ಚೆಕ್ ಹಸ್ತಾಂತರಿಸಿ ಗಾಯಗೊಂಡ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಸಹಿತ ನಾಲ್ವರಿಗೆ ಇನ್ನೆರಡು ದಿನದಲ್ಲಿ ಅವರ ಅಕೌಂಟ್‌ಗೆ ನೆರವಿನ ಮೊತ್ತ ತಲುಪಿಸುವುದಾಗಿ ಹೇಳಿದ್ದಾರೆ.
ಸಂತ್ರಸ್ಥರ ಕುಟುಂಬಕ್ಕೆ ಸಾಂತ್ವನ ಹೇಳುವ ವೇಳೆ ಕಣ್ಣೀರಿಟ್ಟಿದ್ದ ಯಶ್ ನನಗೆ ನನ್ನ ಜನ್ಮದಿನ ಎಂದರೆ ಭಯ ಆರಂಭವಾಗಿದೆ.ಅಲ್ಲದೇ ಅಭಿಮಾನಿಗಳು ಇನ್ನು ಮುಂದೆ ದಯವಿಟ್ಟು ಬ್ಯಾನರ್‌ಗಳನ್ನು ಕಟ್ಟಬೇಡಿ ಅಲ್ಲದೇ ನನ್ನ ಕಾರನ್ನು ಬೈಕ್‌ನಲ್ಲಿ ಚೇಸ್ ಮಾಡಿಕೊಂಡು ಬರಬೇಡಿ ಎಂದು ಮನವಿ ಮಾಡಿದ್ದರು.
ಪ್ರತಿ ಚಿತ್ರದ ಮೂಲಕವೂ ತನ್ನ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಿರುವ ಯಶ್ ನುಡಿದಂತೆ ನಡೆದಿದ್ದಾರಲ್ಲದೇ ಕೂಲಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದ ಮೂವರು ಅಭಿಮಾನಿಗಳ ಕುಟುಂಬದ ದುಃಖದಲ್ಲಿ ಭಾಗಿಯಾಗಿ ನೆರವು ನೀಡಿ ಕಣ್ಣಿರೊರೆಸುವ ಕೆಲಸ ಮಾಡಿದ್ದಾರೆ.ಈಗಾಗಲೇ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ನೀಡಿದೆ.
ಕಣ್ಣಿರಿಟ್ಟ ಮೃತನ ತಾಯಿ
ಯಶ್ ಅಭಿಮಾನಿಯಾಗಿರುವ ಮೃತ ಮುರುಳಿ ತಾಯಿ, ನಟ ಯಶ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ತಾಯಿ ಕಣ್ಣೀರು ಸುರಿಸುತ್ತಾ ಯಶ್ ನನ್ನ ಮಗ ನನ್ನ ಮನೆಯಲ್ಲಿಯೇ ಇರಬೇಕು ಎಂದು ಭಾವಿಸಿದ್ದಾರೆ. ಕೂಲಿಗೆ ಹೋದ ಮಗನಿಗೆ ಪೇಮೆಂಟ್ ಕೊಟ್ಟು ಕಳುಹಿಸಿದ್ದಾರೆ ಅನ್ನಲಾ. ದೊಡ್ಡ ಮನಸು ಮಾಡಿರೋ ಯಶ್ ಅನ್ನೇ ದೇವರು ಅಂತಾ ಕರೆಯಲಾ.. ನನ್ನ ಮಗ ಸತ್ತ ದುಡ್ಡಿನಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲಾ.. ಅವನು ಹೊಸ ಗಾಡಿ ತಗೊಬೇಕು ಅಂತ ಹೇಳಿದ್ದ. ಅದರಲ್ಲಿ ಹಿಂದೆ ಕುಳಿತುಕೊಳ್ಳಲಾ ಎಂದು ಗೋಳಾಡಿದ್ದಾರೆ.