ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;        ಕಾಯಕದಲ್ಲಿ ನಿರತ

ವಚನ ಬೆಳಕು; ಕಾಯಕದಲ್ಲಿ ನಿರತ

ಕಾಯಕದಲ್ಲಿ ನಿರತ

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
-ಆಯ್ದಕ್ಕಿ ಮಾರಯ್ಯ

ಶರಣದರ್ಶನದಲ್ಲಿ ದಾಸೋಹಂಭಾವದ ಕಾಯಕಕ್ಕೆ ಹೆಚ್ಚಿನ ಮಹತ್ವವಿದೆ. ಬೆಳಕು ಕೊಡುವುದು ಸೂರ್ಯನ ಕಾಯಕ, ಬೆಳದಿಂಗಳನ್ನು ತರುವುದು ಚಂದ್ರನ ಕಾಯಕ, ಹೊಳೆಯುವುದು ತಾರೆಗಳ ಕಾಯಕ, ಸೃಷ್ಟಿಕ್ರಿಯೆ ಭೂಮಿಯ ಕಾಯಕ, ಜೀವಜಾಲದ ಕೊಂಡಿಗಳಾಗುವುದು ಪಶು ಪಕ್ಷಿಗಳ ಕಾಯಕ. ಪರಾಗಸ್ಪರ್ಶ ಕೀಟಗಳ ಕಾಯಕ. ಈ ಎಲ್ಲವುಗಳ ಕಾಯಕದ ಪರಿಣಾಮ ನಮಗೆ ದಾಸೋಹ ರೂಪದಲ್ಲಿ ಸಿಗುತ್ತದೆ. ಇವು ನಿಷ್ಕ್ರಿಯವಾದರೆ ಲೋಕ ನಿರ್ನಾಮವಾಗುವುದು. ಕಾಯಕ ದಾಸೋಹ ನಿಸರ್ಗತತ್ತ್ವಗಳಾಗಿವೆ. ಮಾನವನು ನಿಸರ್ಗದ ಭಾಗವಾಗಿದ್ದಾನೆ. ಆದ್ದರಿಂದ ಆತ ಕಾಯಕ ಮತ್ತು ದಾಸೋಹ ಬಿಟ್ಟು ಬದುಕುವಂತಿಲ್ಲ ಎಂದು ಬಸವಧರ್ಮ ಸಾರುತ್ತದೆ.
ಸತಿ ಆಯ್ದಕ್ಕಿ ಲಕ್ಕಮ್ಮಳಿಂದ ಆಯ್ದಕ್ಕಿ ಮಾರಯ್ಯನವರು ಕಾಯಕದ ಮಹತ್ವ ಅರಿತರು. ಈ ಕಡುಬಡವ ದಂಪತಿಯ ಮಧ್ಯೆ ಅನ್ಯೋನ್ಯತೆ, ವೈಚಾರಿಕ ಸ್ವಾತಂತ್ರ್ಯ, ನ್ಯಾಯನಿಷ್ಠುರತೆ, ಸಾಮರಸ್ಯ ಮತ್ತು ಏಕೋಭಾವವಿತ್ತು. ಸತಿ ಲಕ್ಕಮ್ಮನ ಜ್ಞಾನಕ್ಕೆ ಪತಿ ಮಾರಯ್ಯ ಬೆಲೆ ಕೊಟ್ಟರು. ಆ ಜ್ಞಾನವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು. ಅಂತೆಯೆ ಅವರಿಗೆ ಇಂಥ ಮಹತ್ವದ ವಚನವನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಇಡೀ ಶರಣಸಂಕುಲದ ಹೆಮ್ಮೆಯ ವಚನ ಇದಾಗಿದೆ.
ನಿಸರ್ಗಪರವಾದ ಕಾಯಕದ ಮೇಲೆ ನಿಂತ ಬಸವದರ್ಶನವನ್ನು ಮಾರಯ್ಯನವರು ಅಪ್ಪಿಕೊಂಡರು. ಕಾಯಕವೇ ಎಲ್ಲದಕ್ಕೂ ಆಧಾರ. ಕಾಯಕವಿಲ್ಲದಿದ್ದರೆ ಇಡೀ ಲೋಕ ನಿಷ್ಕ್ರಿಯವಾಗುವುದರಿಂದ ಗುರು, ಲಿಂಗ ಮತ್ತು ಜಂಗಮರು ಆಧಾರವಿಲ್ಲದಂತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇದೊಂದು ವಿಶಿಷ್ಟ ವಚನವಾಗಿದೆ. ಅವರು ಗುರು, ಲಿಂಗ ಮತ್ತು ಜಂಗಮರ ಅವಹೇಳನ ಮಾಡುವುದಿಲ್ಲ. ಸರ್ವರ ಸಂರಕ್ಷಣೆಗಾಗಿ ಕಾಯಕ ಎಷ್ಟೊಂದು ಮಹತ್ವದ್ದಾಗಿದೆ ಎಂಬುದನ್ನು ತಿಳಿಸುವುದಕ್ಕಾಗಿ ಮಾತ್ರ ಅವರು ಈ ಸ್ಪಷ್ಟವಾದವನ್ನು ಮುಂದಿಡುತ್ತಾರೆ.
ನಾವು ಕಾಯಕದಲ್ಲಿ ಮಗ್ನವಾದಾಗ ದೇವರಿಗೆ ಪ್ರಿಯವಾದುದನ್ನೇ ಮಾಡುತ್ತ ಸ್ವಾವಲಂಬಿಯಾಗುತ್ತೇವೆ. ನಂತರ ದಾಸೋಹದ ಮೂಲಕ ಅಳಿಲುಸೇವೆ ಸಲ್ಲಿಸುತ್ತೇವೆ. ಕಾಯಕ ನಿರತರಾದಾಗ ಗುರುದರ್ಶನ, ಲಿಂಗಪೂಜೆ ಮತ್ತು ಜಂಗಮಸೇವೆಯ ಯೋಚನೆ ಮಾಡಬಾರದು. ಏಕೆಂದರೆ ಕಾಯಕದ ಪರಿಣಾಮವು ಗುರು ಲಿಂಗ ಜಂಗಮಕ್ಕಾಗಿಯೇ ಇದೆ ಎಂಬ ಸೂಕ್ಷ್ಮತೆ ಈ ವಚನ ಹೊಂದಿದೆ. ಗುರು ಲಿಂಗ ಜಂಗಮ ಮತ್ತು ಸ್ವರ್ಗಸಮಾನವಾದ ಬದುಕಿನ ಒಳ್ಳೆಯದೆಲ್ಲ ಆ ಕಾಯಕದೊಳಗೇ ಇದೆ ಎಂಬ ಭಾವವನ್ನು ಈ ವಚನ ಸೂಸುತ್ತದೆ. ಅಂತೆಯೆ ‘ಕಾಯಕವೇ ಕೈಲಾಸ’ ಎಂಬುದು ಬಸವಧರ್ಮದ ಘೋಷವಾಕ್ಯವಾಗಿ ಜನಮನದಲ್ಲಿ ಅಚ್ಚೊತ್ತಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *