ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;     ವೇದಶಾಸ್ತ್ರ ಆಗಮ

ವಚನ ಬೆಳಕು; ವೇದಶಾಸ್ತ್ರ ಆಗಮ

ವೇದಶಾಸ್ತ್ರ ಆಗಮ

ವೇದಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ?
ಕವಿ, ಗಮಕಿ, ವಾದಿ, ವಾಗ್ಮಿಗಳು ಹಿರಿಯರೆ?
ನಟಿನಿ, ಬಾಣ, ವಿಲಾಸಿ, ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?
ಹಿರಿಯತನವಾವುದೆಂದಡೆ ಗುಣಜ್ಞಾನ
ಆಚಾರಧರ್ಮ ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ.
-ಬಸವಣ್ಣ

ಮಾನವನು ಭೂಮಿಯ ಮೇಲೆ ಬದುಕಲು ಸಾಧ್ಯವಾಗುವಂಥ ಕೆಲಸ ಕಾರ್ಯಗಳನ್ನು ಕಾಯಕಜೀವಿಗಳು ಮಾಡುತ್ತಾರೆ. ಆದರೆ ಅವರ ಜ್ಞಾನಕ್ಕೆ ಬೆಲೆ ಸಿಗುತ್ತಿಲ್ಲ. ಜ್ಞಾನವನ್ನು ಕ್ರಿಯೆಗೆ ಇಳಿಸುವವರಿಗಿಂತ ಜ್ಞಾನದ ಕುರಿತು ಮಾತನಾಡುವವರೇ ಈ ಸಮಾಜದಲ್ಲಿ ಸಕಲ ಸೌಲಭ್ಯಗಳನ್ನು ಪಡೆಯುತ್ತಾರೆ. ಸೂಕ್ಷ್ಮ ಮತಿಗಳಾದ ಬಸವಣ್ಣನವರು ಈ ಬೌದ್ಧಿಕ ಮತ್ತು ದೈಹಿಕ ತಾರತಮ್ಯವನ್ನು ಗಮನಿಸಿದರು. ಬೀದಿಯಲ್ಲಿ ಅದ್ಭುತವಾಗಿ ನರ್ತಿಸುತ್ತ ಜನಮನವನ್ನು ಸೂರೆಗೊಳ್ಳುವ ನರ್ತಕಿ, ಬಾಣವನ್ನು ಪ್ರಯೋಗಿಸುವ ಗುರಿಕಾರ, ವಾಕ್ಚಾತುರ್ಯದಿಂದ ಜನರನ್ನು ನಗೆಗಡಲಲ್ಲಿ ಮುಳುಗಿಸುವ ಹಾಸ್ಯಗಾರ ಮತ್ತು ದೈಹಿಕ ಕಸರತ್ತಿನೊಂದಿಗೆ ಜಾಣ್ಮೆಯನ್ನು ಪ್ರದರ್ಶಿಸುತ್ತ ಬದುಕಿನ ಸಮತೋಲನ ತತ್ತ್ವವನ್ನು ಸಾರುವ ಡೊಂಬ ಅದು ಹೇಗೆ ಕಿರಿಯರಾಗುತ್ತಾರೆ ಎಂಬುದು ಬಸವಣ್ಣನವರ ಸವಾಲಾಗಿದೆ.
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಓದಿದವರು ಮತ್ತು ಶಿವನ ಆರಾಧನೆಗೆ ಸಂಬಂಧಿಸಿದ ಕಾಮಿಕ, ಯೋಗಜ, ಚಿಂತ್ಯ, ಕಾರಣ, ಅಜಿತ, ದೀಪ್ತ, ಸೂಕ್ಷ್ಮ, ಸಹಸ್ರ, ಅಂಶುಮಾನ್, ಸುಪ್ರಭೇದ, ವಿಜಯ, ನಿಶ್ವಾಸ, ಸ್ವಾಯಂಭುವ, ಅನಲ, ವೀರ, ರೌರವ, ಮಕುಟ, ವಿಮಲ, ಚಂದ್ರಜ್ಞಾನ, ಬಿಂಬ, ಪ್ರೋದ್ಗೀತ, ಲಲಿತ, ಸಿದ್ಧ, ಶಾಂತ, ಸರ್ವೋಕ್ತ, ಪಾರಮೇಶ್ವರ, ಕಿರಣ ಮತ್ತು ವಾತೂಲ ಎಂಬ ೨೮ ಆಗಮಗಳನ್ನು ಓದಿದವರು ಅದು ಹೇಗೆ ದೊಡ್ಡವರಾಗುತ್ತಾರೆ? ಕವಿಗಳು, ಕಾವ್ಯವನ್ನು ರಾಗಬದ್ಧವಾಗಿ ಓದುವ ಗಮಕಿಗಳು, ವ್ಯಾಖ್ಯಾನಕಾರರು ಮತ್ತು ವಾಕ್ಪಟುಗಳು ಅದು ಹೇಗೆ ದೊಡ್ಡವರಾಗುತ್ತಾರೆ? ಬದುಕುವ ಕಲೆಯನ್ನು ಕಲಿತ ಡೊಂಬರು ಮುಂತಾದ ಕಾಯಕಜೀವಿಗಳು ಅದು ಹೇಗೆ ಸಣ್ಣವರಾಗುತ್ತಾರೆ? ಎಂಬುವು ಬಸವಣ್ಣನವರು ಸಮಾಜದ ಮುಂದೆ ಇಟ್ಟ ಪ್ರಶ್ನೆಗಳಾಗಿವೆ.
ಗರ್ವ, ಕ್ರೋಧ, ಅಹಂಕಾರ, ಕಾಮನೆಗಳು, ಅಪ್ರಿಯ ವಚನ, ಮೋಸ, ಮತ್ಸರ ಎಂಬ ಎಂಟು ರಜೋಗುಣಗಳಿವೆ. ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ, ಪಾಪಕೃತ್ಯ, ಪರನಿಂದೆ, ಪರಹಿಂಸೆ ಎಂಬ ಎಂಟು ತಮೋಗುಣಗಳಿವೆ. ಈ ರಾಜಸ ಮತ್ತು ತಾಮಸ ಗುಣಗಳಿಗೆ ಅಂಟಿಕೊಳ್ಳದಂಥ ಸಾತ್ವಿಕ ಗುಣಜ್ಞಾನದೊಂದಿಗೆ ಶರಣರು ಆಚಾರಧರ್ಮದ ಸಾಧನೆ ಮಾಡಿದ್ದಾರೆ ಎಂದು ಬಸವಣ್ಣನವರು ಹೆಮ್ಮೆಯಿಂದ ಹೇಳುತ್ತಾರೆ. ಸದಾಚಾರ, ನಿಯತಾಚಾರ ಹಾಗೂ ಗಣಾಚಾರಗಳು ಆಚಾರಧರ್ಮದ ಮೂರು ಅಂಗಗಳಾಗಿವೆ. ಎಲ್ಲ ಜನ ಅಹುದೆಂಬುದೇ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿಹುದೇ ನಿಯತಾಚಾರ, ಶಿವನಿಂದೆಯ ಕೇಳದಿಹುದೇ ಗಣಾಚಾರ. ಇಂಥ ಗುಣಜ್ಞಾನ ಮತ್ತು ಆಚಾರಧರ್ಮದ ಶರಣರು ಯಾವುದೇ ಕಾಯಕ ಮಾಡಿದರೂ ಶ್ರೇಷ್ಠರೇ ಆಗಿರುತ್ತಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *