ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;         ಪರಮಪದವಿ

ವಚನ ಬೆಳಕು; ಪರಮಪದವಿ

ಪರಮಪದವಿ

ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು.
ಮಹಾಲಿಂಗ ಗಜೇಶ್ವರದೇವಾ,
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.
                                                     -ಗಜೇಶಮಸಣಯ್ಯ

ಗಜೇಶಮಸಣಯ್ಯ ಸೋಲಾಪುರ ಜಿಯ ಅಕ್ಕಲಕೋಟೆ ತಾಲ್ಲೂಕಿನ ನೀಲಗಾರ ಕರಜಗಿ ಗ್ರಾಮದವರು. ಗಜೇಶಮಸಣಯ್ಯಗಳ ಪುಣ್ಯಸ್ತ್ರೀ ಕೂಡ ವಚನಕಾರ್ತಿ. ಆಕೆಯ ಹೆಸರು ತಿಳಿದುಬಂದಿಲ್ಲ. ಕೆಲವರು ಮಸಣಮ್ಮ ಎಂದು ಬರೆಯುವರು. ಕಲ್ಯಾಣದ ಪ್ರಧಾನಿ ಬಸವಣ್ಣನವರ ಮಾನವೀಯ ಸ್ಪಂದನದ ಕೀರ್ತಿ ಎಲ್ಲೆಡೆ ಹಬ್ಬಿತ್ತು. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋದ ಮಸಣಯ್ಯ ದಂಪತಿ ಕಲ್ಯಾಣಕ್ಕೆ ಬಂದರು. ಬಿಜ್ಜಳನ ಸೈನ್ಯದಿಂದ ಕಲ್ಯಾಣದಲ್ಲಿ ಶರಣರ ಮೇಲೆ ದೌರ್ಜನ್ಯ ನಡೆದ ನಂತರ ಮಸಣಯ್ಯನವರು ಮುನೋಳಿಯಲ್ಲಿ ಬಂದು ನೆಲೆಸಿದರು. ಗುಲ್ಬರ್ಗ ಜಿ ಆಳಂದ ತಾಲ್ಲೂಕಿನ ಮುನೋಳಿಯಲ್ಲಿ ಮಸಣಯ್ಯ ದಂಪತಿಯ ಸಮಾಧಿಗಳಿವೆ. ಇವರ ಅನೇಕ ವಚನಗಳು ‘ಶರಣಸತಿ ಲಿಂಗಪತಿ’ ಭಾವದ ಮಧುರಭಕ್ತಿಯ ಪ್ರತೀಕವಾಗಿವೆ.
ಜೀವಾತ್ಮ ಮತ್ತು ಪರಮಾತ್ಮನ ಮಧ್ಯದ ಸತಿಪತಿ ಭಾವದಲ್ಲಿ ಜೀವಾತ್ಮನಾದವನು ಪರಮಾತ್ಮನಿಂದ ಏನನ್ನೂ ಬಯಸುವುದಿಲ್ಲ. ‘ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ’ ಎಂದು ಪರಮಾತ್ಮನಾದ ಮಹಾಲಿಂಗ ಗಜೇಶ್ವರದೇವರಿಗೆ ಜೀವಾತ್ಮನಾದ ಮಸಣಯ್ಯ ಹೇಳುತ್ತಿದ್ದಾರೆ. ಈ ವಚನದಲ್ಲಿ ‘ಪರಮಪದವಿ’ ಮತ್ತೆ ಮತ್ತೆ ಬರುತ್ತದೆ.
ಪರಮತ್ಮನು ಏಕಮೇವಾದ್ವಿತೀಯ, ಅತ್ಯುನ್ನತ, ಪರಮಾತ್ಮನೇ ಜಗತ್ತಿನ ರಹಸ್ಯವನ್ನು ತಿಳಿಸಬಲ್ಲವ, ಆದ್ದರಿಂದಲೇ ಗಜೇಶಮಸಣಯ್ಯನವರು ರಹಸ್ಯಭೇದದ ಅತ್ಯುನ್ನತ ಪದವಿಯನ್ನು ಪರಮಾತ್ಮನ ಕೊರಳಿಗೆ ಕಟ್ಟುತ್ತಾರೆ. ಪರಮಾತ್ಮನೇ ಮಹಾಜ್ಞಾನಿ. ಅಂತೆಯೆ ಪರಮಪದವಿಯನ್ನು ಆತನ ತಲೆಗೆ ಸುತ್ತುತ್ತಾರೆ. ಪರಮಾತ್ಮನೇ ಮಹಾಕರುಣಾಳು ಈ ಕಾರಣದಿಂದ ಪರಮಪದವಿಯನ್ನು ಅವನ ಎದೆಯಲ್ಲಿಡುತ್ತಾರೆ.
ಜೀವಾತ್ಮ ಸತಿಗೆ ತನ್ನ ಪರಮಾತ್ಮ ಪತಿಯೇ ಎಲ್ಲದರಲ್ಲೂ ಶ್ರೇಷ್ಠ ಎಂದು ಹೇಳಬೇಕಾಗಿದೆ. ಗಜೇಶ ಮಸಣಯ್ಯನವರು ಅದನ್ನಿಲ್ಲಿ ಅನ್ಯೋಕ್ತಿಯ ಮೂಲಕ ಹೇಳುತ್ತಾರೆ. ಹಳ್ಳಿಗಾಡಿನ ಸಂಸ್ಕೃತಿಯಲ್ಲಿ ಹೆಂಡತಿಯಾದವಳು ಗಂಡನನ್ನು ಹೊಗಳುವ ಕ್ರಮ ಅನೇಕಬಾರಿ ಅನ್ಯೋಕ್ತಿಯಿಂದ ಕೂಡಿರುತ್ತದೆ. ನಿಂದಾಸ್ತುತಿ ರೂಪದಲ್ಲಿರುತ್ತದೆ. ಹೆಂಡತಿಯಾದವಳು ತೋರಿಕೆಗೆ ಸಿಡುಕು ವ್ಯಕ್ತಪಡಿಸುತ್ತ ಒಳಗೆ ಭಾರೀ ಅಭಿಮನ ಇಟ್ಟುಕೊಂಡಿರುತ್ತಾಳೆ. ಮಸಣಯ್ಯನವರ ವಚನಗಳ ಮೇಲೆ ಗ್ರಾಮೀಣ ಮುಗ್ಧತೆ ಮತ್ತು ಮಾಧುರ್ಯದ ಪ್ರಭಾವ ದಟ್ಟವಾಗಿದೆ. ‘ನನಗೆ ಯಾವ ಪದವಿಯೂ ಬೇಡ ನಿಮ್ಮ ತೊತ್ತುಸೇವೆಯೇ ಸಾಕು’ ಎಂಬುದು ಮುಗ್ಧತೆಯ ಪ್ರತೀಕ. ಇದು ಗರತಿಯ ಅರ್ಪಣಾ ಮನೋಭಾವದ ಮಾತು ಕೂಡ ಆಗಿದೆ. ಗಜೇಶಮಸಣಯ್ಯನವರು ಅಂಥ ಗರತಿಯ ಸರಳ ಮತ್ತು ನಿರಾಳ ವ್ಯಕ್ತಿತ್ವವನ್ನು ಅರಿತುಕೊಂಡಿದ್ದರಿಂದಲೇ ಈ ವಿಶಿಷ್ಟವಾದ ಸಲುಗೆಯಿಂದ ಕೂಡಿದ ಮಧುರಭಾವದ ವಚನ ಬರೆಯಲು ಸಾಧ್ಯವಾಯಿತು.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *