ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;          ಭೇರುಂಡನ ಪಕ್ಷಿ

ವಚನ ಬೆಳಕು; ಭೇರುಂಡನ ಪಕ್ಷಿ

ಭೇರುಂಡನ ಪಕ್ಷಿ

ಭೇರುಂಡನ ಪಕ್ಷಿಗೆ ದೇಹ ಒಂದೇ,
ತಲೆಯೆರಡರ ನಡುವೆ ಕನ್ನವಡ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ?
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾ ಬೆಂದೆ ಕಾಣಾ, ಕೂಡಲಸಂಗಮದೇವಾ.
-ಬಸವಣ್ಣ

ಗಂಡಭೇರುಂಡವೆಂಬುದು ಒಂದು ದೇಹ ಮತ್ತು ಎರಡು ತಲೆಗಳುಳ್ಳ ಒಂದು (ಕಾಲ್ಪನಿಕ) ಪಕ್ಷಿ. ಕವಿಸಮಯದ ಈ ಪಕ್ಷಿಯ ಮೂಲಕ ಬಸವಣ್ಣನವರು ದೇವರ ಸ್ವರೂಪವನ್ನು ಕಲ್ಪಿಸಿದ ಕ್ರಮ ಅನುಪಮವಾಗಿದೆ. ಗಂಡಭೇರುಂಡ ಪಕ್ಷಿಯ ಎರಡೂ ತಲೆಗಳ ಮಧ್ಯೆ ಕನ್ನವಡ (ಪರದೆ) ಕಟ್ಟಿರಿ. ನಂತರ ಅದರ ಒಂದು ಬಾಯಿಗೆ ಹಾಲನ್ನು ಹಾಕಿರಿ. ಇನ್ನೊಂದು ಬಾಯಿಗೆ ವಿಷವನ್ನು ಹಾಕಿರಿ. ಆಗ ಹಾಲು ಮತ್ತು ವಿಷ ಆ ಪಕ್ಷಿಯ ಜಠರ ಸೇರಿದಾಗ ಎಲ್ಲವೂ ವಿಷಮಯವಾಗುವುದು. ಆ ಪಕ್ಷಿ ಇಂಥ ಪರಿಸ್ಥಿತಿಯಲ್ಲಿ ಬದುಕುಳಿಯಲು ಸಾಧ್ಯವೆ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಆ ಪಕ್ಷಿ ಸಾಯದೆ ಗತ್ಯಂತರವಿಲ್ಲ. ಒಂದುವೇಳೆ ಆ ಗಂಡಭೇರುಂಡ ಪಕ್ಷಿಯ ಎರಡೂ ಬಾಯಲ್ಲಿ ಹಾಲೇ ಎರೆದಿದ್ದರೆ ಅದು ಆರೋಗ್ಯಪೂರ್ಣವಾಗಿ ಲವಲವಿಕೆಯಿಂದ ಇರುತ್ತಿತ್ತು.
ಹೀಗೆ ಮಾನವನು ಆರೋಗ್ಯಪೂರ್ಣ ವ್ಯಕ್ತಿತ್ವಕ್ಕಾಗಿ ಲಿಂಗಭಕ್ತಿ ಮತ್ತು ಜಂಗಮಭಕ್ತಿಯನ್ನು ಒಟ್ಟಾಗಿಯೇ ಮಾಡುತ್ತಿರಬೇಕು. ಜಂಗಮಭಕ್ತಿ ಎಂದರೆ ಸಮಾಜಸೇವೆ. ಕಷ್ಟದಲ್ಲಿದ್ದವರಿಗೆ ಸಾಧ್ಯವಾದಷ್ಟು ನೆರವಾಗಬೇಕು. ದಯವೇ ಧರ್ಮದ ಮೂಲ ಎಂದು ತಿಳಿಯಬೇಕು. ಸಮಜವೇ ದೇವರು ಎಂದು ಭಾವಿಸಬೇಕು. ನಮ್ಮ ನೆರೆಹೊರೆಯ ಎಲ್ಲ ಜೀವಗಳು ನಮ್ಮ ನಡೆನುಡಿಗಳಿಂದ ಆನಂದಮಯವಾಗಿ ಇರುವಹಾಗೆ ನೋಡಿಕೊಳ್ಳಬೇಕು. ದಾಸೋಹಂ ಭಾವದಿಂದ ಸಹಾಯಹಸ್ತ ಚಾಚುವುದರಲ್ಲಿ ಉತ್ಸುಕರಾಗಿರಬೇಕು.
ಲಿಂಗ ಮತ್ತು ಜಂಗಮಜಗತ್ತು ಒಂದೇ ದೇವರ ಎರಡು ಮುಖಗಳು. ಬರಿ ಲಿಂಗಪೂಜೆಯಿಂದ ದೇವರು ಸಂತೃಪ್ತನಾಗುವುದಿಲ್ಲ, ಆತ ಸಂತೃಪ್ತನಾಗಲು ಸಮಾಜವೆಂಬ ಜಂಗಮದ ಸೇವೆ ಬಹಳ ಅವಶ್ಯವಾಗಿದೆ. ಈ ಜೀವಜಗತ್ತನ್ನು ಬಸವಣ್ಣನವರು ಜಂಗಮಲಿಂಗ ಎಂದು ಕರೆದಿದ್ದಾರೆ. ಇಷ್ಟಲಿಂಗ ಪೂಜೆ ಎಂಬುದು ಒಳಗಿನ ಘನವನ್ನು ಅರಿತುಕೊಳ್ಳುವುದಕ್ಕಾಗಿ. ಅದರ ಜೊತೆ ತಾದಾತ್ಮ್ಯ ಭಾವ ತಾಳುವುದಕ್ಕಾಗಿ. ಒಳಗಿನ ಘನವು ಹೊರಗಿನ ಘನವೂ ಆಗಿದೆ ಎಂಬುದನ್ನು ಅನುಭಾವಿಸಲು ಜಂಗಮಲಿಂಗ ಪೂಜೆ ಅವಶ್ಯವಾಗಿದೆ. ಕಾಯಕ ಮತ್ತು ದಾಸೋಹದಿಂದ ಮಾತ್ರ ಜಂಗಮಲಿಂಗ ಪೂಜೆ ಮಾಡಲು ಸಾಧ್ಯ. ಅಂದರೆ ಸಮಾಜಸೇವೆಯಿಂದ ಮಾತ್ರ ಸಮಾಜವೆಂಬ ದೇವರ ಪೂಜೆ ನೆರವೇರುತ್ತದೆ. ಬರಿ ಲಿಂಗಪೂಜೆ ಮಾಡುತ್ತ, ಸಮಾಜಕ್ಕೆ ಸೇವೆ ಸಲ್ಲಿಸದೆ ನಿಂದನೆ ಮಾಡುತ್ತ ಕಾಲಕಳೆಯುವವರನ್ನು ಕಂಡಾಗ ನನಗೆ ತಾಪವಾಗುತ್ತದೆ ಎಂದು ಬಸವಣ್ಣನವರು ದೇವರಲ್ಲಿ ತೋಡಿಕೊಳ್ಳುತ್ತಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *