ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;        ಲೋಕದ ಚೇಷ್ಟೆಗೆ ರವಿ ಬೀಜ

ವಚನ ಬೆಳಕು; ಲೋಕದ ಚೇಷ್ಟೆಗೆ ರವಿ ಬೀಜ

ಲೋಕದ ಚೇಷ್ಟೆಗೆ ರವಿ ಬೀಜ

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ.
-ಅಕ್ಕ ಮಹಾದೇವಿ

ಸೂರ್ಯ ಇಲ್ಲದೆ ಈ ಜಗತ್ತನ್ನು ಕಲ್ಪಿಸಲಿಕ್ಕಾಗದು. ಸೂರ್ಯ ಇದ್ದಾನೆಂದೇ ಸಸ್ಯಲೋಕ, ಪ್ರಾಣಿಲೋಕ ಮತ್ತು ಮಾನವಲೋಕಗಳು ಜೀವಂತವಾಗಿವೆ. ಜಗತ್ತಿನ ಎಲ್ಲ ಪ್ರಕ್ರಿಯೆಗಳಿಗೆ ಸೂರ್ಯನೇ ಮೂಲಕಾರಣವಾಗಿದ್ದಾನೆ ಎಂಬುದು ವೈಜ್ಞಾನಿಕ ಸತ್ಯ. ಪ್ರತಿಯೊಂದು ಜೀವಿಯ ಬದುಕಿಗೂ ಸೂರ್ಯ ಬೇಕೇಬೇಕು. ಅಂತೆಯೆ ಜಗತ್ತಿನ ಎಲ್ಲ ಚಟುವಟಿಕೆಗಳಿಗೆ ಸೂರ್ಯನೇ ಮೂಲವಾಗುತ್ತಾನೆ. ಅದೇ ರೀತಿ ಕರಣಗಳ ವರ್ತನೆಗೆ ಮನವೇ ಮೂಲಕಾರಣವಾಗುತ್ತದೆ.
ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಜ್ಞಾನ ಕೊಡುವ ಕಿವಿ, ಚರ್ಮ, ಕಣ್ಣು, ನಾಲಗೆ ಮತ್ತು ಮೂಗು ಎಂಬ ಪಂಚಜ್ಞಾನೇಂದ್ರಿಯಗಳೇ ಪಂಚಕರಣೇಂದ್ರಿಯಗಳು. ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ಈ ನಾಲ್ಕು ಅಂತರಿಂದ್ರಿಯಗಳಿಗೆ ಅಂತಃಕರಣ ಚತುಷ್ಟಯ ಎನ್ನುತ್ತಾರೆ. ಕಾಯ, ವಾಕ್ಕು (ನುಡಿ) ಮತ್ತು ಮನಸ್ಸಿಗೆ ತ್ರಿಕರಣಗಳೆನ್ನುತ್ತಾರೆ. ಕಾಯವಿಕಾರ ಮತ್ತು ಮನೋವಿಕಾರಗಳಿಗೆ ಕರಣೇಂದ್ರಿಯಗಳೇ ಕಾರಣವಾಗಿವೆ. ಇದು ಮನೋವೈಜ್ಞಾನಿಕ ಸತ್ಯ. ಕರಣೇಂದ್ರಿಯಗಳನ್ನೆಲ್ಲ ಹತೋಟಿಯಲ್ಲಿಡದೆ ಮನಸ್ಸು ಪರಿಶುದ್ಧವಾಗದು. ಕರಣೇಂದ್ರಿಯಗಳನ್ನು ಜಾಗೃತಗೊಳಿಸದಂತೆ ಮನಸ್ಸನ್ನು ನಿಯಂತ್ರಿಸಬೇಕು. ಮನಸ್ಸನ್ನು ದೇವರಲ್ಲಿ ಸಿಲುಕಿಸಿದಾಗ ಕರಣವೃತ್ತಿಗಳು ಅಡಗುವವು. ಹಾಗೆ ಮನಸ್ಸನ್ನು ಸಿಲುಕಿಸುವುದರ ಮೂಲಕ ಕರಣಗಳನ್ನೆಲ್ಲ ಲಿಂಗಾರ್ಪಿತ ಮಾಡಿದಾಗ ಮನಸ್ಸು ನಿರಾಳವಾಗುವುದು. ಹೀಗೆ ದೇವರಿಗೆ ಮನವನ್ನು ಅರ್ಪಿಸುವುದಕ್ಕೆ ಕರಣಾರ್ಪಣ ಎನ್ನುತ್ತಾರೆ.
ಮನಸ್ಸನ್ನು ದೇವರಲ್ಲಿ ಸಿಲಿಕಿಸಿದ ಬಳಿಕ ಭವವಿಲ್ಲ ಎಂದು ಅಕ್ಕ ಹೇಳುತ್ತಾಳೆ. ಭವವೆಂದರೆ ಪ್ರಾಪಂಚಿಕ ವ್ಯವಹಾರ. ಭವಪಾಶವೆಂದರೆ ಸಂಸಾರ ಬಂಧನ. ಸಂಸಾರ ಬಂಧನಕ್ಕೊಳಗಾದವನೇ ಭವಿ. ಲೌಕಿಕದಲ್ಲೇ ತೊಳಲಾಡುವವನು. ಇಷ್ಟಲಿಂಗ ದೀಕ್ಷೆ ಪಡೆಯದೆ ಇರುವವನಿಗೆ ಭವಿ ಎನ್ನುತ್ತಾರೆ. ಅಂದರೆ ಇಷ್ಟಲಿಂಗ ದೀಕ್ಷೆ ಪಡೆದ ಭಕ್ತನು ಲೌಕಿಕ ವಸ್ತುಗಳಿಗೆ ಆಸೆ ಪಡದೆ ಮತ್ತು ಪರಾವಲಂಬಿಯಾಗದೆ ಬದುಕುವವನು. ಇಹಲೋಕ ಯಾತ್ರೆ ಮುಗಿಯುವವರೆಗೂ ದಾಸೋಹಂ ಭಾವದಿಂದ ಪರೋಪಕಾರಿಯಾಗಿಯೇ ಇರುವವನು. ಇಷ್ಟಲಿಂಗ ಧಾರಣೆ ಮಾಡಿಯೂ ಬದಲಾಗದವರ ತನು ಮಾತ್ರ ಭಕ್ತನದಾಗಿದ್ದು ಮನ ಭವಿ ಆಗಿರುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಇಷ್ಟಲಿಂಗ ಧರಿಸಿಯೂ ಸಂಸಾರದ ಜಂಜಾಟದಲ್ಲಿ ಸಿಲುಕಿಕೊಂಡವರು ಭವಭಾರಿಗಳು. ಭವಗೆಡುವುದೆಂದರೆ ಸಂಸಾರ ಬಂಧನದಿಂದ ಮುಕ್ತವಾಗುವುದು. ಸಂಸಾರದ ಜಂಜಾಟದಿಂದ ದೂರಾಗುವುದೆಂದರೆ ಸಂಸಾರ ತ್ಯಾಗ ಮಾಡುವುದೆಂದಲ್ಲ. ಕಾಯಕನಿಷ್ಠೆ, ದೇವಪ್ರೇಮ ಮತ್ತು ನಿಸ್ವಾರ್ಥದಿಂದ ಸರ್ವರಿಗೂ ಒಳ್ಳೆಯದನ್ನೇ ಬಯಸುತ್ತ ಸಂಸಾರವನ್ನು ಅರ್ಥಪೂರ್ಣವಾಗಿಸಿ ಬದುಕುವುದು. ಸಂಸಾರದಲ್ಲಿ ಇದ್ದೂ ದೇವಸನ್ನಿಧಿಯಲ್ಲೇ ಇದ್ದಂತೆ ಬದುಕುವುದು.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *