ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;            ಹೊನ್ನ ಬಿಟ್ಟು ಲಿಂಗ

ವಚನ ಬೆಳಕು; ಹೊನ್ನ ಬಿಟ್ಟು ಲಿಂಗ

ಹೊನ್ನ ಬಿಟ್ಟು ಲಿಂಗ

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು,
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು,
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ?
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು,
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?
ಇದು ಕಾರಣ, ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು, ಮರೆದಡೆ ಕಾಣಬಾರದು.
ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ.
-ಗಜೇಶಮಸಣಯ್ಯಗಳ ಪುಣ್ಯಸ್ತ್ರೀ

ಗಜೇಶಮಸಣಯ್ಯಗಳ ಪುಣ್ಯಸ್ತ್ರೀ ಹೆಸರು ಹಸ್ತಪ್ರತಿಗಳಲ್ಲಿ ಇಲ್ಲ. ಮಸಣಮ್ಮ ಎಂದು ರೂಢಿಯಲ್ಲಿದೆ. ಮಸಣಮ್ಮನ ಈ ವಚನ ಅನುಭಾವದ ನೆಲೆಯ ಮೇಲೆಯೇ ಜೀವನ್ಮುಖಿಯಾಗಿದೆ. ನಿರ್ಭಯ ಮತ್ತು ಸಂಯಮದಿಂದ ಕೂಡಿದ ತರ್ಕಪ್ರಧಾನ ವಚನವಿದು. ಸರಳ ಸಹಜ ಶಬ್ದಗಳ ಮೂಲಕ ಮಸಣಮ್ಮ ಶಕ್ತಿಶಾಲಿಯಾದ ವಚನ ರಚಿಸಿದ್ದಾಳೆ. ದೈನಂದಿನ ಬದುಕಿಗೆ ಅವಶ್ಯವಾಗಿ ಬೇಕಾಗಿರುವಂಥ ಎಲ್ಲವನ್ನೂ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಮಸಣಮ್ಮ ವಾದಿಸುತ್ತಾಳೆ. ದೇವರು ಕೂಡ ಅವುಗಳ ಬಳಕೆಯನ್ನು ವಿರೋಧಿಸಲಾರ ಎಂಬುದು ಅವಳ ನಿಲುವಾಗಿದೆ.
ಅವಳ ವಿಚಾರ ವಾಸ್ತವದ ತಳಹದಿಯ ಮೇಲೆ ನಿಂತಿದೆ. ಬಸವಧರ್ಮವು ಸಂಸಾರಧರ್ಮ ಆಗಿರುವ ಕಾರಣ ಮಸಣಮ್ಮ ಯಾವುದನ್ನೂ ನಿರಾಕರಿಸಲಿಲ್ಲ. ದೇಹಕ್ಕೆ ಮತ್ತು ಜೀವಕ್ಕೆ ಬೇಕೆನಿಸಿದ್ದನ್ನು ಪಡೆಯುವುದರಲ್ಲಿ ತಪ್ಪೇನಿದೆ? ದೇವರನ್ನು ಒಲಿಸಿಕೊಳ್ಳಲು ಹೊನ್ನು, ಹೆಣ್ಣು, ಮಣ್ಣು ಮತ್ತು ಇಂದ್ರಿಯ ಸುಖಗಳನ್ನು ತ್ಯಜಿಸಬೇಕಾಗಿಲ್ಲ. ಜಗತ್ತಿಗೆ ವಿಮುಖವಾಗಿ ಹಿಮಾಲಯ ಸೇರಬೇಕಿಲ್ಲ. ವಚನದಲ್ಲಿ ತಿಳಿಸಿದ ವಸ್ತುಗಳಿಗೆ ಮತ್ತು ಸಂಬಂಧಗಳಿಗೆ ದೇವರ ವಿರೋಧವಿಲ್ಲ ಎಂದು ಮಸಣಮ್ಮ ಪ್ರತಿಪಾದಿಸುತ್ತಾಳೆ. ಪ್ರಶ್ನಿಸುವುದರ ಮೂಲಕವೇ ತಿಳಿಸುವ ಕ್ರಮ ಅವಳ ಜೀವನಾನುಭವಕ್ಕೆ ಸಾಕ್ಷಿಯಾಗಿದೆ. ಮಸಣಮ್ಮ ಇದಿಷ್ಟೇ ಹೇಳಲಿಲ್ಲ. ತಾನು ಹೇಳಿದ ವಸ್ತುಗಳ ಬಳಕೆ ಮತ್ತು ಸಂಬಂಧಗಳು ದೇವಸಮ್ಮತವಾಗಿರಬೇಕು ಎಂದು ಎಚ್ಚರಿಸುತ್ತಾಳೆ.
ಪರಂಜ್ಯೋತಿ, ಪರಮಕರುಣಾಳು ಮತ್ತು ಪರಮಶಾಂತ ದೇವರು ಹೊನ್ನು ಹೆಣ್ಣು ಮತ್ತು ಮಣ್ಣನ್ನು ವಿರೋಧಿಸುವುದಿಲ್ಲ. ಆದರೆ ಅವುಗಳ ಜೊತೆಗಿನ ನಮ್ಮ ಸಂಬಂಧ ಅಪವಿತ್ರವಾಗಿದ್ದರೆ ಆತನಿಗೆ ಕೋಪ ಬರುವುದು. ಆತನ ಕೋಪಕ್ಕೆ ಕಾರಣವಾದುದನ್ನು ಅರಿತು ನಮ್ಮ ಬದುಕನ್ನು ಸರಿಪಡಿಸಿಕೊಂಡರೆ, ಅಂದರೆ ಆತ್ಮಸಾಕ್ಷಿಯಂತೆ ನಡೆದುಕೊಂಡರೆ ದೇವರ ದರ್ಶನವಾದಂತೆಯೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *