ಹುಬ್ಬಳ್ಳಿ-ಧಾರವಾಡ ಸುದ್ದಿ
(7) ವಚನ ಬೆಳಕು;  ದೇಹಾರವ ಮಾಡುವ ಅಣ್ಣಗಳಿರಾ

(7) ವಚನ ಬೆಳಕು; ದೇಹಾರವ ಮಾಡುವ ಅಣ್ಣಗಳಿರಾ

ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
ದೇಹಾರಕ್ಕೆ ಆಹಾರವೆ ನಿಚ್ಚಣಿಗೆ.
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ,
ಆ ಹರನಿಲ್ಲೆಂದನಂಬಿಗ ಚೌಡಯ್ಯ.
-ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯನವರು ನಿಷ್ಠುರ ವಚನಕಾರರು. ಇದ್ದದ್ದನ್ನು ಇದ್ದಹಾಗೆ ಹೇಳುವ ನಿರಂಕುಶಮತಿಗಳು. ಕೆಳವರ್ಗದ ಜನರ ಕಷ್ಟನಷ್ಟಗಳನ್ನು ಅನುಭವಿಸಿದ ಅನುಭಾವಿಗಳು. ಇಹ ಪರಗಳ ಮಧ್ಯೆ ವೈಚಾರಿಕತೆ ತುಂಬಿದವರು. ಏಕದೇವೋಪಾಸನೆಯಲ್ಲಿ ಪರಮನಿಷ್ಠರು. ಆಚಾರ ಹೇಳುತ್ತ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದವರು. ‘ಭವಸಾಗರವನ್ನು ದಾಟಿಸುವ ಅಂಬಿಗ’ ಎಂಬ ಹೆಗ್ಗಳಿಕೆಯುಳ್ಳವರು.
ಮೇಲಿನ ವಚನ ಅವರ ಜೀವಕಾರುಣ್ಯದ ಪ್ರತೀಕವಾಗಿದೆ. ಕರುಣಾಹೀನ ಬದುಕುಳ್ಳವರಿಗೆ ದೇವರ ಸಂಬಂಧವಿರಲಾರದು ಎಂದು ಅಂಬಿಗರ ಚೌಡಯ್ಯನವರು ಈ ವಚನದಲ್ಲಿ ತಿಳಿಸಿದ್ದಾರೆ. ಬಡಜನರ ಬಗ್ಗೆ ಕಾಳಜಿ ಇಲ್ಲದವರ ದೇವಪೂಜೆ ಡಂಬಾಚಾರದಿಂದ ಕೂಡಿರುತ್ತದೆ. ಅಂತಃಕರಣದಿಂದ ಕೂಡಿದ ಪೂಜೆಯೇ ನಿಜವಾದ ಪೂಜೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ನಿಜವಾದ ಪೂಜೆ. ಅಂತೆಯೆ ಬಡವರಿಗೆ ಸಹಾಯ ಮಾಡಿರಿ ಎಂದು ದೇಹಾರ ಮಾಡುವವರಿಗೆ ಚೌಡಯ್ಯನವರು ಕಳಕಳಿಯಿಂದ ಕೇಳುತ್ತಾರೆ. ಈ ವಚನದಲ್ಲಿ ಮನವೊಲಿಸುವ ರೀತಿ ಹೃದಯಸ್ಪರ್ಶಿಯಗಿದೆ. ‘ದೇಹಾರ ಮಾಡುವ ಅಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರೆ’ ಎನ್ನುವಲ್ಲಿ ಭಕ್ತರ ಮೇಲಿರುವ ನೈತಿಕ ಜವಾಬ್ದಾರಿಯನ್ನು ಸೂಚಿಸಲಾಗಿದೆ. ‘ಅಣ್ಣಗಳಿರಾ’ ಮತ್ತು ‘ಒಂದುತುತ್ತು’ ಪದಗಳು ಇಲ್ಲಿ ಬಡವರ ಮೇಲಿರುವ ಕಾಳಜಿಯ ದ್ಯೋತಕವಾಗಿವೆ. ಹಸಿದವರಿಗೆ ಸಹಾಯ ಮಾಡುವುದರ ಮೂಲಕವೇ ಪೂಜೆಯ ತೃಪ್ತಿಯನ್ನು ಪಡೆಯಲು ಸಾಧ್ಯ. ಪರೋಪಕಾರಕ್ಕಾಗಿ ಹಂಬಲಿಸದೆ ಕೇವಲ ಪೂಜೆ ಮಾಡುವವರಿಗೆ ದೇವರೇ ಇಲ್ಲ ಎಂದು ಹೇಳುತ್ತ ಬಡವರ ಪಕ್ಷಪಾತಿಯಾಗುತ್ತಾರೆ. ವಜ್ರದಷ್ಟು ಕಠಿಣ ನಿಲುವಿನ ಅಂಬಿಗರ ಚೌಡಯ್ಯನವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.
ದೀನದಲಿತರ ಬಗ್ಗೆ ಕರಗದ ಮನಸ್ಸುಗಳ ವಿರುದ್ಧ ಚೌಡಯ್ಯನವರು ದನಿ ಎತ್ತಿದ್ದಾರೆ. ದ್ವಿಮುಖ ನೀತಿಯನ್ನು ವಿರೋಧಿಸಿದ್ದಾರೆ. ‘ಲಿಂಗವೆಂಬೆನೆ ಕಲುಕುಟಿಕನ ಮಗ… ತನ್ನೊಳಗ ನೋಡೆಂದನಂಬಿಗ ಚೌಡಯ್ಯ’ ಎಂದು ಅವರು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ತಮ್ಮೊಳಗಿನ ದೇವರನ್ನು ಕಾಣುವ ಶರಣರು ಸಕಲ ಜೀವಾತ್ಮರಲ್ಲಿ ದೇವರನ್ನು ಕಾಣುತ್ತಾರೆ. ಯಾವುದೇ ಜೀವಿ ಹಸಿವಿನಿಂದ ಬಳಲಬಾರದು ಎಂದು ಆಶಿಸುತ್ತಾರೆ.
‘ದೇಹಾರ’ ಎಂದರೆ ಇಷ್ಟಲಿಂಗ ಪೂಜೆ. ಇಷ್ಟಲಿಂಗವು ನಮ್ಮೊಳಗಿನ ದೇವರ ಪ್ರತೀಕವಾಗಿದೆ. ಈ ತತ್ತ್ವವನ್ನು ಬಲವಾಗಿ ನಂಬಿದ್ದರಿಂದಲೇ ಚೌಡಯ್ಯನವರು ತಮ್ಮೊಳಗಿನ ದೇವರ ಬಗ್ಗೆ ಅಚಲವಾದ ನಂಬಿಕೆಯುಳ್ಳವರಾಗಿದ್ದಾರೆ. ಹಾಗೆಯೆ ಕಷ್ಟಕ್ಕೊಳಗಾಗುವ ಕಾಯಕಜೀವಿಗಳಲ್ಲಿಯೂ ನಂಬಿಕೆಯುಳ್ಳವರಾಗಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *