ಹುಬ್ಬಳ್ಳಿ-ಧಾರವಾಡ ಸುದ್ದಿ
(8) ವಚನ ಬೆಳಕು;     ಗುರೂಪದೇಶ ಮಂತ್ರವೈದ್ಯ

(8) ವಚನ ಬೆಳಕು; ಗುರೂಪದೇಶ ಮಂತ್ರವೈದ್ಯ

ಗುರೂಪದೇಶ ಮಂತ್ರವೈದ್ಯ; ಜಂಗಮೋಪದೇಶ
ಶಸ್ತ್ರವೈದ್ಯ ನೋಡಾ.
ಭವರೋಗವ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.

-ಬಸವಣ್ಣ

ಭವರೋಗವೆಂದರೆ ಐಹಿಕ ವಸ್ತುಗಳಲ್ಲೇ ತಲ್ಲೀನವಾಗುವುದು. ವಸ್ತುಮೋಹಿಯಗಿಯೇ ಬದುಕುವುದು; ‘ಇಡೀ ಮಾನವಕುಲಕ್ಕೆ ಹಾನಿಯದರೂ ಪರವಾಗಿಲ್ಲ ನನಗೆ ಮತ್ರ ಲಾಭವಾಗಬೇಕು’ ಎಂಬ ಮನೋಭಾವವನ್ನು ಹೊಂದುವುದು; ಅಂಥ ಲಾಭಕ್ಕಾಗಿ ಏನನ್ನಾದರೂ ಮಡಲು ಸಿದ್ಧವಾಗಿರುವುದು; ಸ್ವಾರ್ಥವೇ ಜೀವನವಿಧಾನವಾಗುವುದು ಮತ್ತು ಹೆಣ್ಣು-ಹೊನ್ನು-ಮಣ್ಣು ಎಂಬ ತೀವ್ರತೆಯ ಬದುಕುವುದು.
ಬಸವಣ್ಣನವರು ಇಂಥ ಭವರೋಗವನ್ನು ಕಳೆಯುವ ವಿಧಾನವನ್ನು ತಿಳಿಸುತ್ತಾರೆ. ಈ ಭವರೋಗದ ಕಾರಣವನ್ನು ಕಂಡುಹಿಡಿಯುವವನು ಗುರು. ಆತನ ಉಪದೇಶ ಮಂತ್ರವೈದ್ಯನ ಕೆಲಸ ಮಡುತ್ತದೆ. ಅಂದರೆ ಭವರೋಗದ ಮೂಲಗಳನ್ನು ತಿಳಿಸುತ್ತದೆ. ರೋಗದ ಮೂಲ ತಿಳಿಯದೆ ಶಸ್ತ್ರಚಿಕಿತ್ಸೆ ಮಡಲಿಕ್ಕಾಗದು. ಹಾಗೆಯೆ ಭವರೋಗ ನಿವಾರಣೆಗೆ ಕಾರ್ಯೋನ್ಮುಖರಾಗುವ ಮೊದಲು ಜಂಗಮರು ಗುರೂಪದೇಶವನ್ನು ಮನನ ಮಾಡಿಕೊಳ್ಳಬೇಕಾಗುತ್ತದೆ. ‘ಜಂಗಮ’ ಎಂಬುದು ಜಾತಿ ಅಲ್ಲ. ಜಂಗಮರು ಅಂದರೆ ಶರಣರ ತತ್ತ್ವಗಳನ್ನು ಜನಮನದಲ್ಲಿ ಬೇರೂರುವಂತೆ ಪ್ರಚಾರ ಮಾಡುವವರು. ಇವರು ಗುರೂಪದೇಶದ ಮೂಲಕ ಸಮತಾ ಸಮಜ ನಿರ್ಮಾಣಕ್ಕಾಗಿ ಇಡೀ ಬದುಕನ್ನು ಸವೆಸುವವರು.
ಸಮಜದ ಹೊಲಸನ್ನು ತೊಳೆಯುವಲ್ಲಿ ಶರಣರ ವಚನಗಳು ಮಹತ್ವದ ಪಾತ್ರ ವಹಿಸಿದವು. ಅಂತೆಯೆ ‘ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ’ ಎಂದು ಬಸವಣ್ಣನವರು ಹೇಳುತ್ತಾರೆ. ಸಮಾಜದ ಹೊಲಸೆಂಬುದು ಅಸಮಾನತೆಯನ್ನು ಸಾರುವ ಜನರ ಮನಸ್ಸಿನಲ್ಲಿ ಇರುತ್ತದೆ. ಎಲ್ಲ ತೆರನಾದ ಭೇದಭಾವವೆಂಬ ಹೊಲಸಿಗೆ ಮಾನವನ ಮನಸ್ಸಿನಲ್ಲಿರುವ ಕೊಳಕೇ ಕಾರಣವಾಗಿದೆ. ಜನರ ಮನಸ್ಸು ಸ್ವಚ್ಛವಾಗುವವರೆಗೆ ಸಮಜದಲ್ಲಿ ಸ್ವಚ್ಛತೆ ಎಂಬುದು ಇರುವುದಿಲ್ಲ. ಆದ್ದರಿಂದ ಸಮಾಜವನ್ನು ಸುಧಾರಿಸುವುದು ಎಂದರೆ ಸಮಾಜದೊಳಗಿನ ಜನರನ್ನು ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸುಧಾರಿಸುವುದು ಎಂಬುದನ್ನು ಬಸವಣ್ಣನವರು ಕಂಡುಹಿಡಿದರು. ಗುರುವಾದವನು ವ್ಯಕ್ತಿ ಮತ್ತು ಸಮಾಜದ ಸ್ವಚ್ಛತೆಯ ಮಂತ್ರಗಳನ್ನು ನುಡಿಯುತ್ತಾನೆ. ಜಂಗಮ ಅವುಗಳನ್ನು ಕಾರ್ಯಗತಗೊಳಿಸುತ್ತಾನೆ. ಹೀಗೆ ಪ್ರತಿಯೊಬ್ಬರು ತಮ್ಮನ್ನು ಮತ್ತು ಸಮಾಜವನ್ನು ಸ್ವಚ್ಛಗೊಳಿಸುತ್ತ ಆತ್ಮಗೌರವದೊಂದಿಗೆ ಬದುಕುವಂಥ ವಾತಾವರಣವನ್ನು ಸೃಷ್ಟಿಸುವುದೇ ಶರಣರ ಬಹುದೊಡ್ಡ ಗುರಿಯಾಗಿತ್ತು. ಜೀವಿಸಲು ಎಷ್ಟು ಬೇಕೋ ಅಷ್ಟೇ ಐಹಿಕ ವಸ್ತುಗಳನ್ನು ಪ್ರಸಾದದ ಹಾಗೆ ಸ್ವೀಕರಿಸಿ ಬಳಸಬೇಕು. ಅದಕ್ಕಿಂತಲೂ ಹೆಚ್ಚಿನ ಐಹಿಕ ವಸ್ತುಗಳು ಪ್ರಸಾದವಾಗಿ ಉಳಿಯದೆ ವಿಷವಸ್ತುಗಳಾಗಿ ಪರಿಣಮಿಸುವವು. ಅವುಗಳ ಬಳಕೆಯಿಂದ ಭವರೋಗ ಬರುವುದು. ಆದ್ದರಿಂದ ಅವಶ್ಯಕತೆಗಿಂತ ಹೆಚ್ಚಿನ ವಸ್ತುಗಳನ್ನು ವಿಷವಸ್ತುವಾಗಿಸದೆ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದೇ ಭವರೋಗದಿಂದ ಮುಕ್ತವಾಗುವ ಕ್ರಮವಾಗಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *