ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;    ಮಾಡಿ ನೀಡಿ ಲಿಂಗವ ಪೂಜಿಸಿ

ವಚನ ಬೆಳಕು; ಮಾಡಿ ನೀಡಿ ಲಿಂಗವ ಪೂಜಿಸಿ

ಮಾಡಿ ನೀಡಿ ಲಿಂಗವ ಪೂಜಿಸಿ

ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲ ಕೇಳಿರಣ್ಣಾ:
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ.
ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪದು.
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.
                                                             -ಬಸವಣ್ಣ

ಗುಡಿಗುಂಡಾರಗಳಿಗೆ ಅಲ್ಪಸ್ವಲ್ಪ ಧನಸಹಾಯ ಮಾಡುತ್ತ, ಒಂದಿಷ್ಟು ದಾನ ನೀಡುತ್ತ ‘ಸ್ಥಾವರಲಿಂಗವನ್ನು ಪೂಜಿಸುತ್ತಿದ್ದೇವೆ’ ಎಂದು ಹೇಳುವ ನೀವೆಲ್ಲ ಕೇಳಿರಣ್ಣಾ ಎಂದು ಬಸವಣ್ಣನವರು ಸದುವಿನಯದಿಂದ ಹೇಳುತ್ತ ನಿಜದ ನಿಲುವನ್ನು ತಾಳಿದ್ದಾರೆ.
ಅಗ್ಗದ ಚಪ್ಪಲಿಗಳನ್ನು ಹೊರಗೆ ಕಳೆದು ದೇವಾಲಯದ ಒಳಗೆ ಹೋಗಿ ಲಿಂಗಕ್ಕೆ ಕೈಮುಗಿದು ಧ್ಯಾನಸ್ಥ ಸ್ಥಿತಿಯಲ್ಲಿ ನಿಂತಾಗ ಮನಸ್ಸಿನಲ್ಲಿ ದೇವಸ್ವರೂಪದ ಚಿತ್ಕಳೆ ಮೂಡದೆ ಹೊರಗೆ ಬಿಟ್ಟ ಚಪ್ಪಲಿಗಳೇ ಕಣ್ಣಿಗೆ ಕಟ್ಟಿದಂತಾಗುತ್ತದೆ. ಚಪ್ಪಲಿಗಳ್ಳರು ಬಂದಿರಬಹುದು; ಚಪ್ಪಲಿಗಳನ್ನು ಒಯ್ದಿರಬಹುದು ಎಂಬ ವಿಚಾರಗಳು ಮನದಲ್ಲಿ ಹೊಳೆಯತೊಡಗುತ್ತವೆ. ಬೇಗ ಹೋಗಿ ಚಪ್ಪಲಿಗಳು ಇವೆಯೊ ಇಲ್ಲವೊ ಎಂಬುದನ್ನು ನೋಡಬೇಕು ಎಂಬ ತೀವ್ರತೆ ಉಂಟಾಗುತ್ತದೆ. ಹೀಗೆ ಧ್ಯಾನವು ಚಪ್ಪಲಿಮಯವಾಗುತ್ತದೆ. ಅಗ್ಗದ ಚಪ್ಪಲಿಗಳಿಗೆ ಇಷ್ಟೊಂದು ಯೋಚನೆ ಮಾಡುವವರು ಕಷ್ಟದಲ್ಲಿರುವವರ ಬಗ್ಗೆ ಏನು ಕಾಳಜಿ ಮಾಡಬಲ್ಲರು! ಹೀಗೆ ಜಿಪುಣತನದಿಂದ ಬದುಕುತ್ತ ಧನಸಂಗ್ರಹಿಸುವುದರಲ್ಲೇ ಇಡೀ ಆಯುಷ್ಯ ಕಳೆಯುವವರಿಗೆ ದೇವರ ಧ್ಯಾನವೆಂಬುದು ಭ್ರಮೆಯಾಗಿ ಉಳಿಯುತ್ತದೆ. ಇಂಥವರು ವಸ್ತುಮೋಹಿಗಳಾಗಿ ವಸ್ತುವಿನ ಧ್ಯಾನದಲ್ಲೇ ಜೀವಸವೆಸುವರು. ಭವಭಾರಿಗಳಾಗಿ ಭೌತಿಕ ಜಗತ್ತಿನಲ್ಲೇ ತೊಳಲಾಡುವರು.
ಬಸವಣ್ಣನವರು ಹೀಗೆಲ್ಲ ಹೇಳುತ್ತಲೇ ಸಾಮಾಜಿಕ ಅರ್ಥಶಾಸ್ತ್ರದ ರಹಸ್ಯವನ್ನು ಬಿಚ್ಚಿಡುವರು. ಒಂದು ದೇಶದ ಶಾಂತಿ ಮತ್ತು ಸುವ್ಯವಸ್ಥೆ ಅಲ್ಲಿನ ನ್ಯಾಯಬದ್ಧ ಸಾಮಾಜಿಕ ಅರ್ಥವ್ಯವಸ್ಥೆಯ ಮೇಲೆ ನಿಂತಿರುತ್ತದೆ. ಹಣದ ಚಲನಶೀಲತೆ ಇಡೀ ಸಮಾಜದಲ್ಲಿ ಏಕಪ್ರಕಾರವಾಗಿರಬೇಕು. ಆದರೆ ಸುಲಿಗೆ ವ್ಯವಸ್ಥೆಯಲ್ಲಿ ಹಣವು ಬಡವರ ಮಧ್ಯೆ ಚಲನಶೀಲತೆಯ ತೀವ್ರತೆಯನ್ನು ಕಳೆದುಕೊಂಡಿರುತ್ತದೆ. ಹಣವು ಶ್ರೀಮಂತರ ಮಧ್ಯೆ ಮಾತ್ರ ಹೆಚ್ಚು ಚಲನಶೀಲವಾದಾಗ ಸಮಾಜದಲ್ಲಿ ಆರ್ಥಿಕ ಅಸಮತೋಲನ ಉದ್ಭವವಾಗುತ್ತದೆ. ಆಗ ಸಾಮಾಜಿಕ ಅಶಾಂತಿ ತಲೆದೋರುತ್ತದೆ. ಅರ್ಥಶಾಸ್ತ್ರಜ್ಞರೂ ಆಗಿದ್ದ ಬಸವಣ್ಣನವರು ದಾಸೋಹ ತತ್ತ್ವದ ಮೂಲಕ ಹಣದ ಚಲನಶೀಲತೆಯಲ್ಲಿ ಸಮತೋಲನ ಕಾಪಾಡುವುದನ್ನು ಕಲಿಸಿಕೊಟ್ಟರು.
ಹಣವನ್ನು ಕೂಡಿಡದೆ ಕೂಡಲಸಂಗನ ಶರಣರಿಗೆ ಸವೆಸಲೇಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಅಂದರೆ ದಾಸೋಹ ರೂಪದಲ್ಲಿ ಸಮಾಜಸೇವೆ ಮಾಡಬೇಕು. ಹೀಗೆ ಮಾಡುವುದರಿಂದ ಸಮಾಜದಲ್ಲಿ ಆರ್ಥಿಕ ಅಸಮತೋಲನ ಉಂಟಾಗದು. ಆತ್ಮಶೋಧನೆ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಅರಿವು ಮೂಡಲು ಬೇಕಾದ ಧ್ಯಾನಕ್ಕಾಗಿ ಇಷ್ಟಲಿಂಗವಿದೆ ಎಂಬ ವಿಚಾರವನ್ನು ಕೂಡ ಬಸವಣ್ಣನವರು ಇಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಹೀಗೆ ಬಸವಣ್ಣನವರು ಸರ್ವಸಮತ್ವದ ದೇವರು ಮತ್ತು ಸುಲಿಗೆ ಇಲ್ಲದ ಸಮಜದ ಕುರಿತು ಮಾಡುವ ಚಿಂತನೆ ವಿನೂತನವಾಗಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *