ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ಭಂಡವ ತುಂಬಿದ ಬಳಿಕ

ವಚನ ಬೆಳಕು; ಭಂಡವ ತುಂಬಿದ ಬಳಿಕ

ಭಂಡವ ತುಂಬಿದ ಬಳಿಕ

ಭಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು.
ಲಿಂಗಸಂಬಂಧಿಯಾದಡೆ ಜಂಗಮಪ್ರೇಮಿ ನೀನಾಗು,
ಅಲ್ಲದಿದ್ದಡೆ ಪರುಷ ದೊರೆಕೊಳ್ಳದಯ್ಯಾ,
ಜಂಗಮದಲ್ಲಿ ನಿರುತ ಭರಿತ,
ಕೂಡಲಸಂಗಮದೇವ.
                                    -ಬಸವಣ್ಣ
ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಸರ್ವ ಸಮಾನತೆಯ ಶರಣಸಮಾಜ ನಿರ್ಮಾಣದ ಮುಂದಾಳು ಕೂಡ ಆಗಿದ್ದರು. ಅವರ ತತ್ತ್ವನಿಷ್ಠೆ, ಕಾಯಕ ನಿಷ್ಠೆ ಮತ್ತು ನವಸಮಾಜನಿಷ್ಠೆ ಅನನ್ಯವಾದುದು. ಈ ವಚನ ಅವರ ಈ ಮೂರೂ ನಿಷ್ಠೆಗಳನ್ನು ಒಳಗೊಂಡಿದೆ. ಪ್ರತಿಯೊಬ್ಬರಿಗೆ ತತ್ತ್ವ (ದೇವರು), ಕಾಯಕ (ವ್ಯವಸ್ಥೆ) ಮತ್ತು ಸಮಾಜ (ಜಂಗಮ)ದ ಪ್ರಜ್ಞೆ ಇರದಿದ್ದರೆ ಅರಾಜಕತೆ ತಲೆದೋರುತ್ತದೆ. ಬಸವಣ್ಣನವರು ಏಕದೇವೋಪಾಸಕರಾಗಿ ತತ್ತ್ವನಿಷ್ಠರಾಗಿದ್ದರು. ಕಾಯಕ ಮಾಡುತ್ತ ವ್ಯವಸ್ಥೆಗೆ ಸಲ್ಲಿಸಬೇಕಾದುದನ್ನು ಸಲ್ಲಿಸಲು ಜನರಿಗೆ ಪ್ರಧಾನಿಯಾಗಿ ಕಲಿಸಿದರು. ಸಮೃದ್ಧ ಉತ್ಪಾದನೆ ಮೂಲಕ ಕಲ್ಯಾಣದಲ್ಲಿ ಅರಾಜಕತೆ ಉಂಟಾಗದಂತೆ ನೋಡಿಕೊಂಡರು. ಅವರ ಕಾಲದಲ್ಲಿ ಕಲ್ಯಾಣದ ಆರ್ಥಿಕ ಸ್ಥಿತಿ ಎಷ್ಟೊಂದು ಉಚ್ಛ್ರಾಯ ಸ್ಥಿತಿ ತಲುಪಿತ್ತೆಂದರೆ ಅಲ್ಲಿ ಕೊಡುವವರಿದ್ದರು ಹೊರತಾಗಿ ಬೇಡುವವರಿರಲಿಲ್ಲ.
ಸರಕನ್ನು ತುಂಬಿದ ಬಂಡಿಯನ್ನು ಸುಂಕದ ಕಟ್ಟೆಯ ಮುಂದಿನ ದಾರಿಯಲ್ಲೇ ಹಾಯಿಸಿಕೊಂಡು ಸುಂಕವನ್ನು ಕೊಟ್ಟು ಹೋಗಬೇಕು. ಅಡ್ಡದಾರಿ ಹಿಡಿದು ಕಳ್ಳತನದಿಂದ ಸುಮ್ಮನೆ ಹೋಗಬಾರದು. ಏಕೆಂದರೆ ಒಂದು ದೇಶದಲ್ಲಿ ಬದುಕುವಾಗ ಆ ದೇಶದ ನಿಯಮವನ್ನು ಪಾಲಿಸಬೇಕು. ಕಲ್ಯಾಣದ ಪ್ರಧಾನಿಯಾಗಿ ಬಸವಣ್ಣನವರು ಕೊಡುವ ಈ ಎಚ್ಚರಿಕೆ ಪ್ರಭುಸಮ್ಮಿತವಾಗಿದೆ. ಅಂದರೆ ಆಜ್ಞಾರೂಪದಲ್ಲಿದೆ. ಈ ವಚನದ ಮುಂದಿನ ಸಾಲುಗಳಲ್ಲಿ ಇದೇ ವಿಚಾರವನ್ನು ಆಧ್ಯಾತ್ಮಿಕ ಮತ್ತು ಸಾಮಾಜಿಕವಾಗಿ ಹೇಳುತ್ತಾರೆ. ಇಲ್ಲಿ ಹೇಳುವ ಕ್ರಮ ಕಾಂತಾಸಮ್ಮಿತವಾಗಿದೆ. ಅಂದರೆ ಸತಿಯು ಪತಿಗೆ ಸೂಕ್ಷ್ಮದಲ್ಲಿ ತಿಳಿಹೇಳುವ ರೀತಿಯಲ್ಲಿದೆ. ಬಸವಣ್ಣನವರು ಹೀಗೆ ಹೇಳುತ್ತಾರೆ: ನೀನು ಏಕದೇವನ ಕುರುಹಾದ ಇಷ್ಟಲಿಂಗದಲ್ಲಿ ನಿಷ್ಠೆಯನ್ನಿಟ್ಟಿದ್ದರೆ ಸಮಾಜವನ್ನು ಪ್ರೀತಿಸುವವನಾಗು. ಇಲ್ಲದಿದ್ದರೆ ಪರುಷ ಪ್ರಾಪ್ತವಾಗುವುದಿಲ್ಲ. ಲೋಹವನ್ನು ಚಿನ್ನವಾಗಿಸುವ ಸ್ಪರ್ಶಮಣಿಯಾದ ಪರುಷದಂತೆ ದೇವರಿದ್ದಾನೆ. ನಾವು ಮಾನವರು ಲೋಹದಂತೆ ಇದ್ದೇವೆ. ಪರುಷ ತಾಗದೆ ಲೋಹವು ಚಿನ್ನವಾಗದು. ಅದೇರೀತಿ ನಮ್ಮೊಳಗಿನ ಪರಮಾತ್ಮನೆಂಬ ಪರುಷ ನಮ್ಮನ್ನು ತಟ್ಟದಿದ್ದರೆ ನಮ್ಮ ಅರಿವು ಮತ್ತು ಅಂತಃಕರಣಗಳು ಅಶುದ್ಧವಾಗೇ ಉಳಿದು ನಾವು ಬಂಗಾರದ ಮನುಷ್ಯರಾಗುವುದಿಲ್ಲ. ಅಂದರೆ ನಿಜಮಾನವರಾಗುವುದಿಲ್ಲ. (ಶರಣರು, ಸೂಫಿಗಳು, ಸಂತರು, ದಾಸರು, ಅನುಭಾವಿಗಳು, ಮಾನವತಾವಾದಿಗಳು ಮುಂತಾದವರೇ ನಿಜಮಾನವರು.) ದೇವರು ನಿಶ್ಚಿತವಾಗಿಯೂ ಸಮಾಜದಲ್ಲಿ ತುಂಬಿ ಕೊಂಡಿದ್ದಾನೆ. ಆದ್ದರಿಂದ ದೇವರನ್ನು ಪ್ರೀತಿ ಸಬೇಕೆಂಬುವವರು ಸಮಾಜವನ್ನು ಪ್ರೀತಿಸಬೇಕು ಎಂದು ಬಸವಣ್ಣನವರು ಹೇಳಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *