ಕಿಚ್ಚು ದೈವವೆಂದು ಹವಿಯನಿಕ್ಕುವ
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರು ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ
ಕೂಡಲಸಂಗಮದೇವಾ
ವಂದನೆಯ ಮರೆದು ನಿಂದಿಸುತ್ತಿದ್ದರು.
. -ಬಸವಣ್ಣ
ಬಸವಣ್ಣನವರು ಮಾನವ ಜನಾಂಗವನ್ನು ಒಂದುಗೂಡಿಸುವ ಮಹಾಕನಸುಗಾರರಾಗಿದ್ದರು. ಅದಕ್ಕಾಗಿ ’ಒಬ್ಬನೇ ದೇವರು ಮತ್ತು ಒಂದೇ ಭೂಮಿ’ ಎಂಬ ಸತ್ಯವನ್ನು ಸಾರುವುದು ಅವರ ಉದ್ದೇಶವಾಗಿತ್ತು. ಅಗಣಿತ ದೇವಾನುದೇವತೆಗಳಿಂದ ಮಾನವಜನಾಂಗ ಛಿದ್ರವಿಚ್ಛಿದ್ರವಾಗಿದೆ. ‘ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣನವರು ಹೇಳಿದ್ದಾರೆ. ಪಂಚಮಹಾಭೂತಗಳಾದ ಪೃಥ್ವಿ, ಆಪ್, ತೇಜ್, ವಾಯು ಮತ್ತು ಆಕಾಶವನ್ನು ದೇವರೆಂದು ಹೇಳಲಿಕ್ಕಾಗದು. ಹೀಗೆ ಕಂಡದ್ದೆಲ್ಲ ದೇವರಾದಾಗ ಧ್ಯಾನ ಸಾಧಿಸದು. ನೀರು, ಪಾನಿ, ತಣ್ಣಿ, ವಾಟರ್, ಜಲ, ಉದಕ, ಉದಾ, ಆಪ್ ಹೀಗೆ ಈ ಶಬ್ದಗಳು ವಿವಿಧ ಭಾಷೆಗಳಲ್ಲಿ ನೀರಿಗಾಗಿ ಇರುವ ಶಬ್ದಗಳೇ ಆಗಿವೆ. ಹಾಗೆಯೆ ಎಲ್ಲ ಧರ್ಮಗಳ ದೇವರುಗಳು ಒಬ್ಬನೇ ದೇವರ ಪ್ರತೀಕಗಳಾಗಿವೆ.
ಹೋಮಾಗ್ನಿಯನ್ನು ದೇವರು ಎಂದು ಕರೆಯುವ ಬ್ರಾಹ್ಮಣರು ಅದಕ್ಕೆ ತುಪ್ಪ, ಹಾಲು, ಧಾನ್ಯ, ರೇಷ್ಮೆಬಟ್ಟೆ ಮುಂತಾದುವುಗಳನ್ನು ಆಹುತಿ ಕೊಡುತ್ತಾರೆ. ಆದರೆ ಅದೇ ಅಗ್ನಿಯಿಂದ ಮನೆಗೆ ಬೆಂಕಿ ಹತ್ತಿದರೆ ಗಾಬರಿಗೊಂಡು ಅದನ್ನು ಆರಿಸುವುದಕ್ಕಾಗಿ ಬಚ್ಚಲ ನೀರನ್ನೂ ಬೀದಿಯ ಮಣ್ಣನ್ನೂ ಬಳಸುತ್ತಾರೆ. ಜೋರಾಗಿ ಕೂಗಿ, ಬೆಂಕಿ ಆರಿಸಲು ಎಲ್ಲ ಜಾತಿಮತಗಳವರ ಸಹಾಯ ಬಯಸುತ್ತಾರೆ. ಆಗ ಆ ಬೆಂಕಿಯನ್ನು ‘ಅಗ್ನಿದೇವ’ ಎಂದು ಗೌರವದಿಂದ ಕರೆಯದೆ ನಿಂದಿಸುತ್ತಾರೆ ಎಂದು ಬಸವಣ್ಣನವರು ಹೇಳಿದ್ದಾರೆ. ‘ಕಿಚ್ಚು’ ಎಂದು ಕರೆಯುವುದರ ಮೂಲಕ ಅದು ಅಗ್ನಿದೇವ ಎಂಬ ವೇದಸತ್ಯವನ್ನು ಅಲ್ಲಗಳೆಯುತ್ತಾರೆ.
ಬೇರೊಂದು ವಚನದಲ್ಲಿ ‘ಭೂದೇವಿ’ ಎಂದು ಕರೆಯುವ ಬದಲು ಅದಕ್ಕೆ ‘ನೆಲ’ ಎಂದು ಸಾಮಾನ್ಯ ಶಬ್ದವನ್ನೇ ಬಳಸುತ್ತಾರೆ. ‘ಜಲದೇವತೆ’ ಎನ್ನದೆ ‘ಜಲ’ ಎನ್ನುತ್ತಾರೆ. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ’ ಎಂದು ಹೇಳುವ ಮೂಲಕ ಅವುಗಳಿಗೆ ಆರೋಪಿಸಿದ ದೈವತ್ವವನ್ನು ಅಲ್ಲಗಳೆದು ಅವೆಲ್ಲ ಕಟ್ಟುಕಥೆ (ಮಿಥ್) ಎನ್ನುತ್ತಾರೆ. ಈ ಮಿಥ್ಗಳ ರಹಸ್ಯವನ್ನು ಭೇದಿಸುತ್ತಾರೆ. ಹೊಲಗೇರಿಯ ನೆಲ ಮತ್ತು ಶಿವಾಲಯದ ನೆಲ ಒಂದೇ. ಶೌಚಕ್ಕಾಗಿ ಬಳಸುವ ನೀರು ಮತ್ತು ಸಂಧ್ಯಾವಂದನೆ ಮುಂತಾದ ವೈದಿಕ ಕರ್ಮಗಳನ್ನು ಮಾಡುವ ಸಂದರ್ಭದಲ್ಲಿ ಶುದ್ಧಿಗಾಗಿ ಅಂಗೈ ಗುಳಿಯಲ್ಲಿ ಮಂತ್ರಪೂರ್ವಕವಾಗಿ ಕುಡಿಯುವ ಶುದ್ಧೋದಕದ ಮೂಲ ಒಂದೇ. ವಸ್ತುಗಳಿಗೆ ಅವುಗಳದ್ದೇ ಆದ ಗುಣಧರ್ಮಗಳಿವೆ. ಅವುಗಳನ್ನು ಹಿತಮಿತವಾಗಿ ದೇವರು ಕೊಟ್ಟ ಪ್ರಸಾದವೆಂದು ಬಳಸಬೇಕು. ಏಕದೇವೋಪಾಸನೆಯ ಮೂಲಕ ದೇವರು ಮತ್ತು ಮಾನವಕುಲದ ಜೊತೆ ಏಕತೆ ಸಾಧಿಸಬೇಕು ಎಂಬುದು ಬಸವಣ್ಣನವರ ಆಶಯವಾಗಿದೆ.