ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ದುಕೂಲ

ವಚನ ಬೆಳಕು; ದುಕೂಲ

ದುಕೂಲ

ದುಕೂಲ ಮುಂತಾದ ವಸ್ತ್ರಂಗಳಲ್ಲಿ,
ಹೇಮ ಮುಂತಾದ ಆಭರಣಂಗಳಲ್ಲಿ,
ಮೌಕ್ತಿಕ ರತ್ನ ಮುಂತಾದ ಪಾಷಾಣಂಗಳಲ್ಲಿ,
ಚಂದನ ಗಂಧ ಮುಂತಾದ ಸುವಾಸನೆಯಲ್ಲಿ,
ಅಂದಳ ಛತ್ರ ಚಾಮರ ಕರಿ ತುರಗಂಗಗಳು ಮುಂತಾದ,
ತಾನು ಸೋಂಕುವ ವೈಭವ ಮುಂತಾದ
ಸಕಲಸುಖಂಗಳು ಲಿಂಗಕ್ಕೆಂದು ಕಲ್ಪಿಸಿ,ಅಂಗೀಕರಿಸುವವನಿರವು ವಾರಿಶಿಲೆ ನೋಡನೋಡಲಿಕ್ಕೆ ನೀರಾದ ತೆರದಂತೆ,ಅಂಬರದ ವರ್ಣ ನಾನಾ ಚಿತ್ರದಲ್ಲಿ ಸಂಭ್ರಮಿಸಿ ಕಂಗಳು ಮುಚ್ಚಿ ತೆರೆವುದಕ್ಕೆ ಮುನ್ನವೆ ಅದರಂದದ ಕಳೆ ಅಳಿದಂತಿರಬೇಕು.ಇದು ಲಿಂಗಭೋಗೋಪಭೋಗಿಯ ಸಂಗದ ಸುಖ, ನಿರಂಗದ ನಿಶ್ಚಯ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗದಲ್ಲಿ ವಿರಳವಿಲ್ಲದ ಪರಮಸುಖ.
                                                                                                                                     -ಮೋಳಿಗೆ ಮಹಾದೇವಿ

ರೇಷ್ಮೆವಸ್ತ್ರ ಮುಂತಾದ ಬೆಲೆಬಾಳುವ ವಸ್ತ್ರಗಳು, ಚಿನ್ನಬೆಳ್ಳಿ ಮುಂತಾದವುಗಳಿಂದ ಮಾಡಿದ ಆಭರಣಗಳು, ಮುಕ್ತಾ, ಮಾಣಿಕ್ಯ, ವೈಡೂರ್ಯ, ಗೋಮೇದ, ವಜ್ರ, ವಿದ್ರುಮ, ಪದ್ಮರಾಗ, ಮರಕತ, ನೀಲ ಎಂಬ ನವರತ್ನಗಳು, ಚಂದನ, ಗಂಧ ಮುಂತಾದ ಸುವಾಸನಾ ವಸ್ತುಗಳು, ಪಲ್ಲಕ್ಕಿ, ಛತ್ರ, ಚಾಮರ, ಆನೆ, ಕುದುರೆ ಮುಂತಾದ ರಾಜವೈಭವ, ಇಂದ್ರಿಯಾನುಭವದ ಶೃಂಗಾರವೈಭವ ಮುಂತಾದ ಸಕಲ ಸುಖವೆಲ್ಲವೂ ಇಷ್ಟಲಿಂಗಕ್ಕೆ ಸಲ್ಲತಕ್ಕದ್ದೆಂದು ಭಾವಿಸುವವನ ಮಾನಸಿಕ ಸ್ಥಿತಿ ನೋಡುನೋಡುತ್ತಿರುವಂತೆಯೆ ನೀರಾಗುವ ಆಲಿಕಲ್ಲಿನಂತೆ ಇರಬೇಕು. ಆಕಾಶದ ಬಣ್ಣಗಳು ನಾನಾ ಪ್ರಕಾರದ ಚಿತ್ರಗಳನ್ನು ರೂಪಿಸಿ ಕಣ್ಣು ಪಿಳುಕಿಸುವುದರೊಳಗಾಗಿ ಆ ಚಿತ್ರಗಳ ಸೌಂದರ್ಯ ಮಾಯವಾಗುವ ಹಾಗೆ ಇರಬೇಕು. ಅಂದರೆ ಎಲ್ಲ ರೀತಿಯ ಐಹಿಕ ಸುಖಗಳನ್ನು ಅನುಭವಿಸುವವನು ಅವು ಕ್ಷಣಿಕವೆಂಬ ಸತ್ಯವನ್ನು ಅರಿಯಬೇಕು. (ಸಂಸಾರವೆಂಬುದು ಹುಲ್ಲಿನ ಮೇಲಿನ ಇಬ್ಬನಿ ಇದ್ದಹಾಗೆ. ಈ ಇಬ್ಬನಿಯನ್ನು ಎಷ್ಟೇ ನೆಕ್ಕಿದರೂ ದಾಹ ಅಡಗುವುದಿಲ್ಲ ಎಂದು ಮಹಾಕವಿ ಪಂಪ ಹೇಳಿದ್ದಾನೆ.) ಲಿಂಗಾಂಗಸಾಮರಸ್ಯದ ಸುಖವನ್ನು ಅರಿತವನು ಈ ಸತ್ಯದ ಪ್ರತಿಪಾದಕನಾಗಿರುತ್ತಾನೆ. ಇದು ಭೌತಿಕ ಸುಖವನ್ನು ಮೀರಿದ ಅನುಭಾವದ ನಿಜಾನಂದ.
ಮೋಳಿಗೆ ಮಾರಯ್ಯನವರ ಸತಿ ಮೋಳಿಗೆ ಮಹಾದೇವಿ ಹೀಗೆ ಜೀವಾತ್ಮ ಮತ್ತು ಪರಮಾತ್ಮ ಸಂಬಂಧದಿಂದ ಲಭ್ಯವಾಗುವ ಪರಮಾನಂದ, ಜಗತ್ತಿನ ಯಾವುದೇ ವಸ್ತುಗಳಿಂದ ಸಿಗುವ ಆನಂದಕ್ಕಿಂತ ಹೆಚ್ಚಿನದು ಎಂಬುದನ್ನು ಮನಕ್ಕೆ ನಾಟುವಂತೆ ಹೇಳಿದ್ದಾಳೆ. ಶಿವಯೋಗದಿಂದ ಸಿಗುವ ಪರಮಸುಖವು ನಿರಂತರವಾ
ದುದು ಎಂದು ತಿಳಿಸುತ್ತಾಳೆ. ಸುಂದರ ಕಾಶ್ಮೀರದ ಸವಾಲಾಕ್ಷ ರಾಜ್ಯದ ರಾಜ ಮಹಾದೇವ ಭೂಪಾಲ (ಮೋಳಿಗೆ ಮಾರಯ್ಯ)ನ ರಾಣಿ ಗಂಗಾದೇವಿ ಸಕಲ ವೈಭೋಗವನ್ನು ಬಿಟ್ಟು ಪತಿಯ ಜೊತೆ ಕಲ್ಯಾಣಕ್ಕೆ ಬಂದಳು. ಸೌದೆ ಮಾರುವ ಕಾಯಕದಲ್ಲಿ ತೊಡಗಿ ಮೋಳಿಗೆ ಮಹಾದೇವಿಯಾಗಿ ಪತಿಗೂ ಅನುಭಾವದ ಆಳವನ್ನು ಅರಿಯುವಂತೆ ಮಾಡುವ ಎತ್ತರಕ್ಕೆ ಬೆಳೆದಳು.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *