ಕರಣ ನಾಲ್ಕು, ಮದವೆಂಟು, ವ್ಯಸನವೇಳು
ಕರಣ ನಾಲ್ಕು, ಮದವೆಂಟು, ವ್ಯಸನವೇಳು,
ಅರಿಷಡ್ವರ್ಗಂಗಳಲ್ಲಿ, ಇಂತೀ ಉರವಣೆಗೊಳಗಾಗುತ್ತ,
ಆಣವ ಮಾಯಾ ಕಾರ್ಮಿಕವೆಂಬ ಮೂರು
ಸುರೆಯಲ್ಲಿ ಮದಡುತ್ತ ನಾ ತಂದೆ ಸುಧೆ, ನಿಮಗೆಲ್ಲ ಎಂದೆ.
ಅದು ಧರ್ಮೇಶ್ವರಲಿಂಗದ ಅರ್ಪಣೆ.
-ಹೆಂಡದ ಮಾರಯ್ಯ
ಚಿತ್ತ, ಬುದ್ಧಿ, ಮನಸ್ಸು ಮತ್ತು ಅಹಂಕಾರಗಳೆಂಬ ಕರಣಚತುಷ್ಟಯಗಳು ದೇಹದ ಒಳಗೇ ಇರುವುದರಿಂದ ಅವುಗಳನ್ನು ‘ಅಂತಃಕರಣಗಳು’ ಎಂದೂ ಕರೆಯುತ್ತಾರೆ. ಈ ಕರಣಚತುಷ್ಟಯಗಳು ಆತ್ಮನ ಜೊತೆಗಿರುತ್ತವೆ. ಈ ಕರಣೇಂದ್ರಿಯಗಳು ಮನುಷ್ಯರನ್ನು ಕಾಯವಿಕಾರ ಮತ್ತು ಮನೋವಿಕಾರಗಳಿಗೆ ಒಳಗುಮಾಡುವವು. ಕುಲ, ಛಲ, ಧನ, ರೂಪ, ಯೌವನ, ವಿದ್ಯಾ, ರಾಜ ಮತ್ತು ತಪೋಮದವೆಂಬುವು ಅಷ್ಟಮದಗಳು. ದೇಹ ಮತ್ತು ಶೃಂಗಾರಕ್ಕೆ ಸಂಬಂಧಿಸಿದ ತನುವ್ಯಸನ. ಪರಸ್ತ್ರೀಯರ ಬಗೆಗಿನ ಮನವ್ಯಸನ. ಧನವ್ಯಸನ, ವಾಹನವ್ಯಸನ, ಸ್ತ್ರೀ ಸಂಗವ ಬಯಸುವ ಉತ್ಸಾಹ ವ್ಯಸನ, ಸಂಪತ್ತು ಬಯಸುವ ವಿಶ್ವವ್ಯಸನ. ತಿನಲಾರೆ, ತೊಡಲಾರೆ ಎಂಬ ಸೇವನವ್ಯಸನಗಳೆಂಬುವು ಸಪ್ತವ್ಯಸನಗಳು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬುವು ಅರಿಷಡ್ವರ್ಗಗಳು. ಈ ಕರಣಚತುಷ್ಟಯ, ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ ಮುಂತಾದವುಗಳ ಆಕರ್ಷಣೆ ಮತ್ತು ಆತುರತೆಗಳಿಗೆ ಮಾನವ ಒಳಗಾಗುತ್ತಾನೆ. ಸಾತ್ವಿಕ ಬದುಕಿನ ಮಹತ್ವವನ್ನು ಮರೆಯುತ್ತಾನೆ.
ತನ್ನೊಳಗಿನ ಶಿವಾಂಶವನ್ನು ಅರಿಯದೆ ಮತ್ತು ಶಿವನ ಇಚ್ಛಾಶಕ್ತಿಯ ಪ್ರಜ್ಞೆ ಇಲ್ಲದೆ ‘ನಾನು ಅಲ್ಪ’ ಎಂದು ಜೀವನು ಭಾವಿಸುವುದು ಆಣವಮಲ. ಶಿವನ ಜ್ಞಾನಶಕ್ತಿಯು ಜೀವನಲ್ಲಿ ಸಂಕುಚಿತಗೊಂಡಾಗ ಅದು ಮಾಯಾಮಲ ಎನಿಸಿಕೊಳ್ಳುತ್ತದೆ. ಶಿವನ ಕ್ರಿಯಾಶಕ್ತಿಯು ಜೀವನಲ್ಲಿ ಅಲ್ಪಶಕ್ತಿಯಾಗಿ ಕಾರ್ಮಿಕ ಮಲ ಆಗುತ್ತದೆ. ಹೀಗೆ ಶಿವನ ತ್ರಿಶಕ್ತಿಗಳು ಮಾನವರಲ್ಲಿ ಸಂಕುಚಿತಗೊಂಡು ಮಲವಾಗಿ ಪರಿಣಮಿಸುತ್ತವೆ. ಭಕ್ತಿ ಮಾರ್ಗ ಬಿಟ್ಟು ಭೌತಿಕ ಆಸೆಗಳ ಮಾರ್ಗದಲ್ಲಿ ಮುನ್ನಡೆಯುವ ಮಾನವನು ಮಲತ್ರಯಗಳಲ್ಲಿ ಬಂಧಿಯಾಗಿರುತ್ತಾನೆ. ಈ ಮಲತ್ರಯಗಳೆಂಬ ಮದ್ಯವನ್ನು ಕುಡಿಯುತ್ತ ಮೌಢ್ಯವನ್ನು ಬೆಳೆಸಿಕೊಂಡು ಮಾನವ ಅಧೋಗತಿಗೆ ಇಳಿಯುತ್ತಿದ್ದಾನೆ ಎಂದು ಹೆಂಡದ ಮಾರಯ್ಯನವರು ಆತಂಕ ವ್ಯಕ್ತಪಡಿಸುತ್ತಾರೆ.
ಈ ಎಲ್ಲ ಪ್ರಾಪಂಚಿಕ ಆಕರ್ಷಣೆಗಳನ್ನು ಇಷ್ಟಲಿಂಗಕ್ಕೆ ಅರ್ಪಿಸಿದಾಗ ಮಾನವನು ಎಲ್ಲ ತೆರನಾದ ವಸ್ತುಮೋಹದಿಂದ ಮುಕ್ತನಾಗುವನು. ಆಗ ಮನಸ್ಸು ಅಮೃತಮಯವಾಗಿ ‘ಲಿಂಗವೇ ಎಲ್ಲದರ ಸಾರ’ ಎಂಬ ಸತ್ಯವನ್ನು ಅರಿತ ‘ಲಿಂಗಸಾರಾಯ’ ಆಗುವನು. ಹೀಗೆ ಸದಾಕಾಲ ಲಿಂಗವ್ಯಸನಿಯಾಗಿ ಇರುವವನು ಜಂಗಮಪ್ರೇಮಿಯಾಗುತ್ತಾನೆ. ಅಂದರೆ ಸಮಾಜವನ್ನೇ ದೇವರೆಂದು ತಿಳಿದು ದಾಸೋಹ ಭಾವದಿಂದ ಸೇವಾಕಾರ್ಯದಲ್ಲಿ ತೊಡಗಿ ಪರಮಾನಂದವನ್ನು ಅನುಭವಿಸುತ್ತಾನೆ. ಹೆಂಡದ ಮಾರಯ್ಯನವರು ಇಂಥ ಪರಮಾನಂದದಲ್ಲಿ ಇದ್ದಾರೆ. ಅಂತೆಯೆ “ನಾ ತಂದೆ ಸುಧೆ, ನಿಮಗೆಲ್ಲ ಎಂದೆ” ಎಂದು ಹೇಳುತ್ತಾರೆ.