ನಡೆನುಡಿ ಸಿದ್ಧಾಂತ
ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ,
ಅರಿ ನಿಜಾತ್ಮಾರಾಮನಾ
-ಮಾದಾರ ಚೆನ್ನಯ್ಯ
ಮೂಲತಃ ಚೋಳದೇಶದ ಮಾದಾರ ಚೆನ್ನಯ್ಯನವರು ಕರಿಕಾಲ ಚೋಳರಾಜನ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕ ಮಾಡುತ್ತಿದ್ದರು. ಬಸವಣ್ಣನವರ ಮಹಿಮೆಯನ್ನು ಅರಿತು ಕಲ್ಯಾಣಕ್ಕೆ ಬಂದು ಪಾದರಕ್ಷೆ ತಯಾರಿಸುವ ತಮ್ಮ ಮನೆತನದ ಕಾಯಕವನ್ನು ಆರಂಭಿಸಿದರು. ‘ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ ಅರಿ ನಿಜಾತ್ಮಾರಾಮನಾ.’ ಎಂದು ತಮ್ಮ ಕಾಯಕಕ್ಕೆ ಸಂಬಂಧಿಸಿದ ವಸ್ತುಗಳೊಂದಿಗೆ ವಚನಾಂಕಿತವನ್ನು ರೂಪಿಸಿದ್ದು ಇವರ ವೈಶಿಷ್ಟ್ಯ. ನಾವು ಕಾಯಕನಿಷ್ಠೆಯನ್ನು ಹೊಂದಬೇಕು. ಆದರೆ ಅಷ್ಟಕ್ಕೇ ತೃಪ್ತರಾಗದೆ, ಆ ಕಾಯಕದ ಮೂಲಕ ನಮ್ಮೊಳಗಿರುವ ನಿಜವಾದ ಆತ್ಮಾರಾಮನನ್ನು ಅರಿಯಬೇಕು ಎಂಬುದು ಮಾದಾರ ಚೆನ್ನಯ್ಯನವರ ಆಶಯವಾಗಿದೆ.
ನಮ್ಮ ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಾದರೆ ಆತ್ಮವಂಚಕರಾಗುವೆವು. ನಮ್ಮ ನಡೆನುಡಿಗಳೇ ನಮ್ಮ ಸಿದ್ಧಾಂತವಾಗಬೇಕು. ಅಂದರೆ ನಮ್ಮ ನಡೆ ಮತ್ತು ನುಡಿಯಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಹೀಗೆ ಬದುಕುವವರೇ ಕುಲಜರು. ಅಂದರೆ ಅವರು ಯಾವುದೇ ಕುಲದವರಿದ್ದರೂ ಕುಲಸೂತಕವಿರುವುದಿಲ್ಲ. ಹೊಲೆ ಸೂತಕವಿರುವುದಿಲ್ಲ. ಒಳ್ಳೆಯ ಮಾತುಗಳನ್ನಾಡುತ್ತ ಕೆಟ್ಟ ನಡವಳಿಕೆ ಇದ್ದರೆ ಅದು ಮುಕ್ತಿ ಕಾಣದ ಹೊಲೆಬದುಕು. ಕಳ್ಳತನ, ವ್ಯಭಿಚಾರ ಮುಂತಾಗಿ ದಾರಿತಪ್ಪಿ ಹಾಳಾಗಿ ಹೋಗುವವರು ಕುಲೋತ್ತಮರು ಎಂದು ಹೇಳಲು ಸಾಧ್ಯವೆ ಎಂದು ಚೆನ್ನಯ್ಯನವರು ಪ್ರಶ್ನಿಸುತ್ತಾರೆ. ‘ಸದಾಚಾರವೇ ಕುಲ; ಅನಾಚಾರವೇ ಹೊಲೆ’ ಎಂದು ವ್ಯಾಖ್ಯಾನಿಸುತ್ತಾರೆ. ಈ ಸರಿ ತಪ್ಪುಗಳ ಬಗ್ಗೆ ಪರಿಜ್ಞಾನವಿರಬೇಕು. ಅಂದಾಗ ಮಾತ್ರ ನಮ್ಮೊಳಗಿನ ಘನವನ್ನು ತಿಳಿದುಕೊಂಡು ಘನಮನದವರಾಗಲು ಸಾಧ್ಯ ಎಂದು ತಿಳಿಸುತ್ತಾರೆ.
ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ತಮ್ಮ ವಚನಗಳಲ್ಲಿ ಪದೆಪದೆ ಸ್ಮರಿಸುತ್ತಾರೆ. ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ಅವರನ್ನು ದೇವರಿಗಿಂತಲೂ ಮೇಲ್ಮಟ್ಟದಲ್ಲಿಟ್ಟು ನೋಡುತ್ತಾರೆ. ವರ್ಣ, ಜಾತಿ ಮತ್ತು ಅಸ್ಪೃಶ್ಯತೆಯಿಂದ ಕೂಡಿದ ಶ್ರೇಣೀಕೃತ ಸಮಾಜದಲ್ಲಿ ಕಟ್ಟಕಡೆಯ ಜಾತಿಗೆ ಸೇರಿದ ಮಾದಾರ ಚೆನ್ನಯ್ಯನವರು ತಮ್ಮ ಸಾತ್ವಿಕ ಬದುಕಿನಿಂದಾಗಿ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕೂಡಿದ ಬಸವ ಸಮಾಜದಲ್ಲಿ ವ್ಯಕ್ತಿತ್ವ ವಿಕಸನಗೊಂಡು ಅತ್ಯುನ್ನತ ಮಟ್ಟ ತಲುಪಿದ್ದಾರೆ.