ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಕಂಥೆಯ ಕಟ್ಟಿ, ತಿತ್ತಿಯ ಹೊತ್ತು

ವಚನ ಬೆಳಕು; ಕಂಥೆಯ ಕಟ್ಟಿ, ತಿತ್ತಿಯ ಹೊತ್ತು

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ, ದೊಡ್ಡೆಯ ಹೊಡೆವುತ್ತ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ,
ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ
ಅಭಿಸಂಧಿಯ ಕೋಲಿನಲ್ಲಿಡುತ್ತ,
ಈ ಹಿಂಡಿನೊಳಗೆ ತಿರುಗಾಡುತ್ತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.
                                                          -ವೀರಗೊಲ್ಲಾಳ
ಬದುಕಿನ ಹೊರೆಯ ಕಟ್ಟಿ, ದೇಹವೆಂಬ ಚರ್ಮದ ಚೀಲವ ಹೊತ್ತು, ಕಿರಿಯಾಸೆಗಳೆಂಬ ಕುರಿಮರಿಗಳನ್ನು ನಡೆಸುತ್ತ, ಹಿರಿಯಾಸೆಗಳೆಂಬ ದೊಡ್ಡಕುರಿಗಳನ್ನು ಹೊಡೆಯುತ್ತ, ಅಡ್ಡದಾರಿ ಹಿಡಿಯುವ ಪ್ರವೃತ್ತಿಗಳೆಂಬ ಹಂಡಬಂಡ ಚುಕ್ಕಿ ಬೊಟ್ಟಿನ ಕಲೆಗಳುಳ್ಳ ಕುರಿಗಳನ್ನು ಬಯ್ಯುತ್ತ, ಸನ್ಮಾರ್ಗದಲ್ಲಿ ಸಾಗುತ್ತಿರುವ ಕುರಿಮಂದೆಯನ್ನು ಬಿಟ್ಟು ಹೋಗುವ ಸೊಕ್ಕೇರಿದ ಟಗರನ್ನು ಸಾಗಬೇಕಾದ ಗುರಿಯ ಕಡೆಗೆ ಸುಜ್ಞಾನದ ಕೋಲಿನಿಂದ ತಿರುಗಿಸುತ್ತ, ಈ ಮನೋವಿಕಾರಗಳೆಂಬ ಕುರಿಗಳ ಹಿಂಡಿನಲ್ಲಿ ಸುತ್ತಾಡುತ್ತಿದ್ದೇನೆ. ಈ ಹಿಂಡನ್ನು ಬಿಡಿಸಿ ನಿಜ ಸ್ಥಾನವಾದ ಎನ್ನೊಳಗಿನ ನಿನ್ನ ಘನವನ್ನು ಎನ್ನ ಅರಿವಿಗೆ ತೋರು; ಶರಣಸಂಕುಲವೆಂಬ ಸುಸಂಗದಲ್ಲಿರಿಸಿ ರಕ್ಷಿಸು ಎಂದು ವೀರಗೊಳ ದೇವರಲ್ಲಿ ಬೇಡಿಕೊಳ್ಳುತ್ತಾನೆ.
ವಿಜಾಪುರ ಜಿಯ ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಬಸವಣ್ಣನವರ ಸಮಕಾಲೀನನಾದ ಗೊಲ್ಲಾಳೇಶ್ವರನ ಗುಡಿ ಇದೆ. ಈ ವಚನಕಾರ ಜನಪದರ ದೈವವಾಗಿ ಇಂದಿಗೂ ಜನಮನದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಈತ ವೀರನೂ ಮುಗ್ಧನೂ ಆಗಿದ್ದ. ಕುರಿಕಾಯುವ ಕಾಯಕದ ಈತ ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನವನ್ನು ಸಂಪಾದಿಸಿದ. ಈತನ ವಚನಗಳು ಬೆಡಗಿನ ಶೈಲಿಯಿಂದ ಕೂಡಿವೆ. ವೃತ್ತಿಪರಿಭಾಷೆಯನ್ನು ಮತ್ತು ತತ್ತ್ವಪರಿಭಾಷೆಯನ್ನು ಒಂದೇ ವಚನದಲ್ಲಿ ಬಳಸುತ್ತ ಲೌಕಿಕವನ್ನು ಮತ್ತು ಅಧ್ಯಾತ್ಮವನ್ನು ಏಕಕಾಲಕ್ಕೆ ಹೇಳುವ ಕ್ರಮ ಓದುಗರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.
ಮೇಲಿನ ವಚನದಲ್ಲಿ ವೀರಗೊಳ, ಕುರಿ ಕಾಯುವ ಕಾಯಕದಿಂದ ಬಂದ ಅನುಭವದ ಮೂಲಕ ಅನುಭಾವದ ಜಗತ್ತನ್ನು ಕಂಡುಕೊಳ್ಳುತ್ತಾನೆ. ಕ್ರಿಯೆಯಿಂದ ಜ್ಞಾನೋದಯವಾಗುತ್ತದೆ. ಜ್ಞಾನದಿಂದ ಕ್ರಿಯಾಶೀಲರಾಗುತ್ತೇವೆ. ಕ್ರಿಯೆ ಇಲ್ಲದ ಜ್ಞಾನ ನಿರುಪಯುಕ್ತ. ಜ್ಞಾನವಿಲ್ಲದ ಕ್ರಿಯೆ ಗಂಡಾಂತರಕಾರಿ. ಕಾಯಕದ ಅನುಭವವೇ ಜ್ಞಾನಕ್ಕೆ ಆಧಾರ. ವಿಶ್ವಜ್ಞಾನವು ವಿಶ್ವದ ಎಲ್ಲ ಕಾಯಕಜೀವಿಗಳ ಅನುಭವದಿಂದಲೇ ಸಿದ್ಧವಾಗಿರುತ್ತದೆ. ಆ ಎಲ್ಲ ಅನುಭವಗಳ ಒಟ್ಟು ಸಾರವೇ ಅನುಭಾವವಾಗಿರುತ್ತದೆ. ಈ ಅನುಭಾವ ಸಾರ್ವಕಾಲಿಕವಾಗಿರುತ್ತದೆ. ಇಂಥ ಅನುಭಾವವನ್ನು ಶರಣರು ದೈನಂದಿನ ಬದುಕಿನಿಂದಲೇ ಪಡೆದು ಜಗತ್ತಿಗೇ ಮಾರ್ಗದರ್ಶಿಯಾದರು. ವೀರಗೊಲ್ಲಾಳ ತನ್ನ ಒಳಹೊರಗಿನ ಕುರಿಗಳನ್ನು ಹಿಡಿತದಲ್ಲಿಟ್ಟುಕೊಂಡ ಹಾಗೆ ಮಾನವ ಅಷ್ಟಮದ, ಸಪ್ತವ್ಯಸನ, ಅರಿಷಡ್ವರ್ಗ, ಕರಣಚತುಷ್ಟಯ ಮುಂತಾದ ಪ್ರವೃತ್ತಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಕಲೆಯನ್ನು ಕಲಿಯಬೇಕು.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *