ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ಅರ್ಥವೆಂಬುದೆ ಪಾಪ

ವಚನ ಬೆಳಕು; ಅರ್ಥವೆಂಬುದೆ ಪಾಪ

ಅರ್ಥವೆಂಬುದೆ ಪಾಪ

ಅರ್ಥವೆಂಬುದೆ ಪಾಪ, ಬೇರೆ ಪಾಪವಿಲ್ಲ ಕಂಡಯ್ಯಾ.
ಪರಿಣಾಮವೆಂಬುದೆ ಪುಣ್ಯ, ಬೇರೆ ಪುಣ್ಯವಿಲ್ಲ ಕಂಡಯ್ಯಾ,
ಪಾಪಪುಣ್ಯಗಳನತಿಗಳೆದ ಉಳುಮೆ, ಶಿವಯೋಗ.
ಮಹಾಲಿಂಗ ಕಲ್ಲೇಶ್ವರನು ಬಲ್ಲ ಸಿದ್ಧರಾಮನ ಪರಿಯ
                                                                                  -ಹಾವಿನಾಳ ಕಲ್ಲಯ್ಯ
ಹಣವು ನರನ ಸಂಗ್ರಹ ಬುದ್ಧಿಯನ್ನು ಚುರುಕುಗೊಳಿಸಿತು ಎಂಬುದಕ್ಕೆ ಜಗತ್ತಿನ ಅನೇಕ ಮಹಾತ್ಮರ ಸಹಮತವಿದೆ. ಈ ಹಣ ಕೆಲವರಲ್ಲೇ ಸಂಗ್ರಹವಾಗದಂತೆ ನೋಡಿಕೊಳ್ಳುವುದಕ್ಕಾಗಿಯೇ ಮುಹಮ್ಮದ್ ಪೈಗಂಬರರು ಜಕಾತನ್ನು ಧಾರ್ಮಿಕ ವಿಧಿಯಾಗಿಸಿ ಬಡ್ಡಿಯನ್ನು ನಿಷಿದ್ಧಗೊಳಿಸಿದರು. ಬಸವಣ್ಣನವರು ದಾಸೋಹ ಪದ್ಧತಿ ತಂದು ಬಡ್ಡಿಯನ್ನು ನಿಷೇಧಿಸಿದರು. ದೊರೆಯಾಗಿದ್ದ ಮೋಳಿಗೆ ಮಾರಯ್ಯನವರು ‘ಹಣಹದ್ದು’ ಎಂದು ಕರೆದರು. ಇಟಲಿಯ ಅಸ್ಸಿಸಿ ಎಂಬ ಪ್ರದೇಶದಲ್ಲಿ ೧೨ನೇ ಶತಮಾನದಲ್ಲಿದ್ದ ಸೇಂಟ್ ಫ್ರಾನ್ಸಿಸ್ ಪೂರ್ವಾಶ್ರಮದಲ್ಲಿ ಭಾರೀ ಶ್ರೀಮಂತ ವ್ಯಾಪಾರಿಯ ಮಗನಾಗಿದ್ದ. ಕಂಡ ಕಂಡ ಬಡವರಿಗೆ ತನ್ನ ತಂದೆಯ ಹಣವನ್ನು ಕೊಡುವುದೇ ಆತನ ಗುರಿಯಾಗಿತ್ತು. ಸಿಟ್ಟಿಗೆದ್ದ ತಂದೆ ಆತನನ್ನು ಹೊರಗೆ ಹಾಕಿದ. ಫ್ರಾನ್ಸಿಸ್ ಕಡುಬಡವರ ಹಾಗೆ ಬದುಕುತ್ತ ಸಂತನಾಗಿ ಅಮರನಾದ. ತಂದೆಯ ಮನೆಯಿಂದ ಹೊರಬಿದ್ದ ನಂತರ ಆತ ಹಣವನ್ನು ಎಂದೂ ಮುಟ್ಟಲಿಲ್ಲ. ಅಂಥ ಹೊಲಸನ್ನು ಮುಟ್ಟಬಾರದೆಂದು ಹೇಳುತ್ತಿದ್ದ.
ಹಾವಿನಾಳ ಕಲ್ಲಯ್ಯ, ಹಣವನ್ನು ಪಾಪಕ್ಕೆ ಹೋಲಿಸಿದ್ದಾನೆ. ಹಣವು ಎಲ್ಲ ಪಾಪಗಳ ಮೂಲ ಎಂದು ತಿಳಿಸಿದ್ದಾನೆ. ಪರಿಣಾಮ ಎಂಬುದು ಪುಣ್ಯ. ಪರಿಣಾಮವೆಂಬುದು ಎಲ್ಲ ಪುಣ್ಯದ ಮೂಲ. ದೇಹೇಂದ್ರಿಯಗಳು ನಮ್ಮವಲ್ಲ ಎಂದು ತಿಳಿದು ಅವುಗಳನ್ನು ಪರಶಿವನಿಗೆ ಅರ್ಪಿಸಿದ ನಂತರ ನಾವು ಬದುಕನ್ನು ಅನುಭವಿಸುವುದರ ಮೂಲಕ ಪಡೆಯುವ ಆನಂದವೇ ಪರಿಣಾಮ. ಹಣವು ಮಾನವನ ಭೌತಿಕ ಆಸೆಗಳನ್ನು ಈಡೇರಿಸುತ್ತದೆ. ಅದರಿಂದ ಸುಖ ಸಿಗುತ್ತದೆ. ತಿಂದ ಆಹಾರ ಕೊನೆಗೆ ಮಲವೂ ಆಗುವಂತೆ ಸಿಕ್ಕ ಸುಖವು ಕೊನೆಗೆ ದುಃಖವನ್ನೂ ತರುತ್ತದೆ. ಆದರೆ ಪರಿಣಾಮದಿಂದ ಸಿಗುವ ಆನಂದವು ದುಃಖದಿಂದ ಹೊರತಾಗಿರುತ್ತದೆ. ಪುಣ್ಯ ಲಭಿಸುವುದೆಂದರೆ ಇದೇ. ಇಂಥ ಪುಣ್ಯ ಪಾಪಗಳನ್ನು ಮೀರಿದ ಕೃಷಿಯೇ ಶಿವಯೋಗ. ಶರಣರ ಶಿವಯೋಗದ ಗುರಿ ಲಿಂಗಾಂಗಸಾಮರಸ್ಯ. ಈ ಸಾಮರಸ್ಯದಲ್ಲಿ ಜೀವನು ಶಿವನೊಂದಿಗೆ ಬೆರೆತು ಪರಮಾನಂದದ ಸ್ಥಿತಿ ತಲುಪುತ್ತಾನೆ. ಸೊನ್ನಲಿಗೆಯ ಸಿದ್ಧರಾಮ ಇಂಥ ಶಿವಯೋಗದ ಕೃಷಿಕನಾಗಿದ್ದ. ಸಿದ್ಧರಾಮನ ಈ ರೀತಿ ತನ್ನ ಆರಾಧ್ಯದೈವ ಮಹಾಲಿಂಗ ಕಲ್ಲೇಶ್ವರನಿಗೆ ಗೊತ್ತು ಎಂದು ಹೇಳುವ ಮೂಲಕ ಹಾವಿನಾಳ ಕಲ್ಲಯ್ಯ ಸಿದ್ಧರಾಮನ ಶಿವಯೋಗ ಮಹಿಮೆಯನ್ನು ಕೊಂಡಾಡಿದ್ದಾನೆ.
ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಅಕ್ಕಸಾಲಿಗ ಶಿವನಯ್ಯ ಸೋಮವ್ವೆಯರ ಮಗ ಕಲ್ಲಯ್ಯ ಕಲ್ಯಾಣಕ್ಕೆ ಬಂದು ಶರಣ ಚಳವಳಿಯಲ್ಲಿ ಭಾಗವಹಿಸಿದ. ನಂತರ ಸೋಲಾಪುರಕ್ಕೆ ಹೋಗಿ ಉಳಿದ. ಸಿದ್ಧರಾಮನ ಸಮಾಧಿಯ ಆವರಣದಲ್ಲಿ ಈತನ ಸಮಾಧಿ ಇದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *