ಅಂಗದ ಮೇಲೆ ಲಿಂಗ
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು.
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗ ಮುಂತಾಗಿ
ಎಲ್ಲಾ ಕ್ರೀಗಳನೂ ಗಮನಿಸಬೇಕಲ್ಲದೆ,
ಅಂಗ ಮುಂತಾಗಿ ಗಮನಿಸಲಾಗದು.
ಲಿಂಗಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು ಲಿಂಗಕ್ಕೆ ದೂರವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.
-ಶಿವನಾಗಮಯ್ಯ
ಅಂಗದ ಮೇಲಿನ ಲಿಂಗವು ಧರ್ಮಲಾಂಛನವಾಗಿದೆ. ಜಾತಿ ಇಲ್ಲದ ಧರ್ಮ ವ್ಯವಸ್ಥೆಯ ಸಂಕೇತವಿದು. ಇಷ್ಟಲಿಂಗವನ್ನು ಧರಿಸಿದವನು ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದ ಮಡಬಾರದು.
12ನೇ ಶತಮಾನದಲ್ಲಿ ಕೆಳವರ್ಗದವರು ಮತ್ತು ಕೆಳಜಾತಿಯವರು ಏಕದೇವೋಪಾಸನೆಯ ಈ ಶರಣಧರ್ಮವನ್ನು ಸ್ವೀಕರಿಸಿದರು. ಸರ್ವ ಸಮತ್ವದ ನವ ಸಮಾಜವನ್ನು ಕಟ್ಟಿದರು. ಇಂಥ ವ್ಯವಸ್ಥೆಯನ್ನು ಸ್ವಾಗತಿಸಿದ ಅನೇಕ ಸವರ್ಣೀಯರು ಇಷ್ಟಲಿಂಗವನ್ನು ಧರಿಸಿ ಶರಣಸಂಕುಲದ ಭಾಗವಾದರು. ಹೀಗೆ ಇಷ್ಟಲಿಂಗವು ಮಾನವ ವಿಮೋಚನೆಯ ಪ್ರತೀಕವಾಗಿದೆ. ಇಂಥ ಸಮಾಜಕ್ಕೆ ವಿರೋಧ ವ್ಯಕ್ತಪಡಿಸುವವರು ಜಾತಿ ವ್ಯವಸ್ಥೆಯ ಮನುಧರ್ಮದ ಸಮಾಜದಲ್ಲೇ ಉಳಿದರು. ಅವರೇ ಲಿಂಗಹೀನರು. ‘ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು’ ಎಂದರೆ ನವ ಸಮಾಜ ನಿರ್ಮಾಪಕರು ಕಂದಾಚಾರಿಗಳ ಜೊತೆ ಬೆರೆಯಬಾರದು ಎಂದರ್ಥ.
ಯಾರ ಅಂಗದ ಮೇಲೆ ಇಷ್ಟಲಿಂಗವಿರುವುದೊ ಅವರ ಪೂರ್ವಾಶ್ರಮದ ಜಾತಿ ಮೂಲವನ್ನು ಹುಡುಕಬಾರದು. ಅವರು ಅಸ್ಪೃಶ್ಯರು, ಕೆಳಜಾತಿಯವರು ಎಂದು ಮುಂತಾಗಿ ಭಾವಿಸಬಾರದು. ಮನುವಾದಿಗಳು ಮನುಷ್ಯನನ್ನು ಕೀಳಾಗಿ ಭಾವಿಸಲು ಹುಡುಕುವ ಅಂಗ, ಬಣ್ಣ, ಬಟ್ಟೆ ಮುಂತಾದವುಗಳ ಕಡೆಗೆ ಗಮನವನ್ನೇ ಹರಿಸಬಾರದು. ಗಮನ ಹರಿಸಬೇಕಾಗಿರುವುದು ಲಿಂಗಧಾರಿಗಳು ಲಿಂಗತತ್ತ್ವವನ್ನು ಪಾಲಿಸುತ್ತಿರುವರೊ ಇಲ್ಲವೊ ಎಂಬುದರ ಕಡೆಗೆ ಮಾತ್ರ ಎಂದು ಶಿವನಾಗಮಯ್ಯ ತಿಳಿಸುತ್ತಾರೆ. ಹುಟ್ಟಿನ ಕಾರಣದಿಂದಾಗಿ ಮನುವಾದಿಗಳಿಂದ ‘ಅಸ್ಪೃಶ್ಯರು’ ಎಂದು ಕರೆಯಿಸಿಕೊಳ್ಳುವ ಜನರನ್ನು ಇಷ್ಟಲಿಂಗಧಾರಿಗಳು ಕಡೆಗಣಿಸಿದರೆ ಸರ್ವಸಮಾನತೆಯ ಲಿಂಗತತ್ತ್ವಕ್ಕೆ ದೂರವಾಗುವರು ಎಂದು ಸ್ಪಷ್ಟಪಡಿಸುತ್ತಾರೆ.
ಶಿವನಾಗಮಯ್ಯನವರಿಗೆ ಸಂಬೋಳಿ ನಾಗಿದೇವ ಮತ್ತು ಕಂಬಳಿ ನಾಗಯ್ಯ ಎಂಬ ಹೆಸರುಗಳೂ ಇದ್ದವು. ಶಿವನಾಗಮಯ್ಯನವರ ಲಿಂಗನಿಷ್ಠೆ ಅನುಕರಣೀಯವಾಗಿದೆ. ಬಸವಣ್ಣನವರು ಇಂಥ ಅಸ್ಪೃಶ್ಯ ಮೂಲದ ಶರಣರನ್ನು ‘ಹಿರಿಯ ಮಾಹೇಶ್ವರರು’ ಎಂದು ಗೌರವಿಸಿದರು. ಹೊಲಗೇರಿಯಲ್ಲಿದ್ದ ಶಿವನಾಗಮಯ್ಯನವರ ಮನೆಗೆ ಹೋಗಿ ಬಸವಣ್ಣನವರು ಪ್ರಸಾದ ಸ್ವೀಕರಿಸಿದ ಪ್ರಸಂಗವನ್ನು ‘ಬಸವರಾಜದೇವರ ರಗಳೆ’ಯಲ್ಲಿ ಹರಿಹರ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಬಸವಣ್ಣನವರು ಹೊಲಗೇರಿಯಲ್ಲಿ ಮೈಲಿಗೆಗೊಂಡು ನೇರವಾಗಿ ಅರಮನೆಗೆ ಬರುವುದನ್ನು ವಿರೋಧಿಸುವುದಾಗಿ ಬಿಜ್ಜಳನ ಸಲಹೆಗಾರರಾದ ನಾರಣಕ್ರಮಿತ, ಕೃಷ್ಣಪೆದ್ದಿ, ವಿಷ್ಣುಭಟ್ಟ, ಕೇಶವಭಟ್ಟ ಮುಂತಾದವರು ತಿಳಿಸಿದ್ದರಿಂದ. ಬಿಜ್ಜಳನು ರಾಜಾಂಗಣದ ಬಯಲಲ್ಲಿ ಒಡ್ಡೋಲಗದ ವ್ಯವಸ್ಥೆ ಮಾಡಿದ. ನಂತರ ಬಸವಣ್ಣನವರ ಬಹಿರಂಗ ವಿಚಾರಣೆಯಾಯಿತು. ತುಳಿತಕ್ಕೊಳಗಾದವರಿಗಾಗಿ ಬಹಿರಂಗ ವಿಚಾರಣೆಗೊಳಗಾದ ಇನ್ನೊಬ್ಬ ಪ್ರಧಾನಿ ವಿಶ್ವದ ಇತಿಹಾಸದಲ್ಲಿ ಇಲ್ಲ.