ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಗೋತ್ರನಾಮ

ವಚನ ಬೆಳಕು; ಗೋತ್ರನಾಮ

ಗೋತ್ರನಾಮ

ಗೋತ್ರನಾಮವ ಬೆಸಗೊಂಡಡೆ
ಮಾತು ನೂಂಕದೆ ಸುಮ್ಮನಿದ್ದಿರಿದೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯನೆಂಬುದೇನು
ಕೂಡಲಸಂಗಯಾ
                                                                                       -ಬಸವಣ್ಣ
ಶಿವ ಪಾರ್ವತಿಯರ ಮದುವೆಯ ಮುನ್ನ ಪಾರ್ವತಿಯ ತಂದೆ ಪರ್ವತರಾಜ ಅಳಿಯನಾಗಲಿರುವ ಶಿವನ ಗೋತ್ರವನ್ನು ತಿಳಿದುಕೊಳ್ಳಬಯಸುತ್ತಾನೆ. ಈ ಹಿನ್ನೆಲೆಯಲ್ಲಿ ‘ಗೋತ್ರನಾಮವನ್ನು ಕೇಳಿದಾಗ ಅವೈದಿಕ ಶಿವನಿಗೆ ಹೇಳಲಿಕ್ಕಾಗಲಿಲ್ಲ’ ಎಂಬ ಶಿವಪುರಾಣದ ಪ್ರಸಂಗವನ್ನು ಬಸವಣ್ಣನವರು ಎತ್ತಿ ಗೋತ್ರ ಗರಿಮೆಯನ್ನು ಅಲ್ಲಗಳೆಯುವ ಕ್ರಮ ಅನುಪಮವಾಗಿದೆ. ಹಲವು ಹದಿನೆಂಟು ಜಾತಿ ಮತ್ತು ವರ್ಣಗಳ ಶ್ರೇಣೀಕೃತ ಸಮಾಜವನ್ನು ಸೃಷ್ಟಿಸಿ, ಶೂದ್ರರು ಮತ್ತು ಪಂಚಮರನ್ನು ನಿತ್ಯ ನರಕದಲ್ಲಿಡುವಂಥ ಮನುಧರ್ಮವನ್ನು ತೊರೆದು ದಿನೇದಿನೇ ಶರಣಸಂಕುಲಕ್ಕೆ ಸೇರ್ಪಡೆಯಾಗುತ್ತಿದ್ದವರಿಗೆ ಆತ್ಮಸ್ಥೈರ್ಯ ನೀಡುವ ಉದ್ದೇಶ ಈ ವಚನದ ಹಿನ್ನೆಲೆಯಲ್ಲಿದೆ.
ಗೋತ್ರವಿಲ್ಲದವರಿಗೆ ಗೋತ್ರನಾಮ ಕೇಳಿದಾಗ, ಅವರೆಷ್ಟೇ ಶಕ್ತಿಶಾಲಿಗಳಾಗಿದ್ದರೂ ಜ್ಞಾನಿಗಳಾಗಿದ್ದರೂ ಬೆಚ್ಚಿ ಬೀಳುತ್ತಾರೆ ಎಂಬುದಕ್ಕೆ ಪುರಾಣದ ಶಿವನೇ ದೊಡ್ಡ ಉದಾಹರಣೆಯಾಗಿದ್ದಾನೆ. ಪುರಾಣದ ಶಿವನ ಮನಸ್ಥಿತಿಗೆ ೧೨ನೇ ಶತಮನದ ಇತಿಹಾಸಪುರುಷ ಬಸವಣ್ಣನವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಶಿವನಿಗೆ ತಿಳಿವಳಿಕೆ ನೀಡಿ, ಆತ್ಮಸ್ಥೈರ್ಯ ತುಂಬಿ ದಾರಿತೋರಿಸುವ ಬಸವಣ್ಣನವರ ಕ್ರಮ, ಅವರ ತತ್ತ್ವನಿಷ್ಠೆಯ ಪ್ರತೀಕವಾಗಿದೆ. ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾದ ಇಷ್ಟಲಿಂಗದೇವನಿಗೆ ಯಾವುದೇ ಸಮಸ್ಯೆಗಳೇ ಇಲ್ಲ. ಆದರೆ ಪುರಾಣಶಿವನಿಗೆ ಗೋತ್ರ ಸಮಸ್ಯೆ ಕಾಡಿದೆ. ಅಂತೆಯೆ ‘ನಿನ್ನ ಗೋತ್ರ ಯಾವುದು ಎಂದು’ ಸರ್ವಶಕ್ತನಾದ ಆತನಿಗೆ ಕೇಳಿದಾಗ, ತನಗೆ ಗೋತ್ರಪುರುಷನೇ ಇಲ್ಲವೆಂದು ಭಾವಿಸಿ, ಅವನ ಬಾಯಿಯಿಂದ ಮಾತುಗಳೇ ಹೊರಡುವುದಿಲ್ಲ. ತನಗೆ ಗೋತ್ರವಿಲ್ಲವೆಂಬ ಕಾರಣದಿಂದ ಉತ್ತರ ಹೇಳಲು ತೋಚದೆ, ನಾಚಿಕೆಯಿಂದ ತಲೆತಗ್ಗಿಸಿ ಹೆಬ್ಬೆರಳಿನಿಂದ ನೆಲದ ಮೇಲೆ ಗೆರೆಗಳನ್ನು ಎಳೆಯ ತೊಡಗುತ್ತಾನೆ. ಜಾತಿ, ಮತ, ಪಂಥ, ವರ್ಣ ಮತ್ತು ಗೋತ್ರದಿಂದ ಮಾನವರ ಯೋಗ್ಯತೆಯನ್ನು ಅಳೆಯುವ ಅಸಹ್ಯ ಕ್ರಮವನ್ನು ಬಸವಣ್ಣನವರು ಉಗ್ರವಾಗಿ ವಿರೋಧಿಸಿದ್ದಾರೆ. ಪುರಾಣಶಿವನ ಅಸಹಾಯಕತೆಗೆ ಅವರು ಸಿಡಿಮಿಡಿಗೊಳ್ಳುತ್ತಾರೆ. ತಮ್ಮ ಜೊತೆಗಿರುವ ಪರಮ ಶಿವಭಕ್ತರಾದ ಮಾದಾರ ಚೆನ್ನಯ್ಯ ಮತ್ತು ಡೋಹಾರ ಕಕ್ಕಯ್ಯನವರ ಕಡೆಗೆ ಕೈಮಾಡಿ ತೋರಿಸುತ್ತಾರೆ. ‘ಶಿವನೇ ನಿನ್ನ ಗೋತ್ರ ಮಾದಾರ ಚೆನ್ನಯ್ಯ ಅಥವಾ ಡೋಹಾರ ಕಕ್ಕಯ್ಯ ಎಂಬುದು ನಿನಗೆ ಗೊತ್ತಿಲ್ಲವೆ’ ಎಂದು ಪ್ರಶ್ನಿಸುತ್ತಾರೆ. ಹೀಗೆ ಮಾದಾರ ಚೆನ್ನಯ್ಯ ಮತ್ತು ಡೋಹಾರ ಕಕ್ಕಯ್ಯನವರಂಥ ಅಮರಗಣಂಗಳು ಹೊಸ ಮಾನವೀಯ ಧರ್ಮವಾದ ಲಿಂಗವಂತ ಧರ್ಮದ ಗೋತ್ರಪುರುಷರಾಗುತ್ತಾರೆ. ಮಾದರ ಸಮಾಜದವರಿಗೆ ಚೆನ್ನಯ್ಯನವರು ಗೋತ್ರಪುರುಷ ಅಥವಾ ಡೋಹರ ಸಮಾಜದವರಿಗೆ ಕಕ್ಕಯ್ಯನವರು ಗೋತ್ರಪುರುಷ ಎಂಬುದು ಇದರರ್ಥವಲ್ಲ. ಲಿಂಗವಂತರಿಗೆ ಬಸವಾದಿ ಪ್ರಮಥರೆಲ್ಲ ಗೋತ್ರಪುರುಷರಾಗಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *