ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಎನ್ನ ಕಣ್ಣೊಳಗಣ ಕಟ್ಟಿಗೆ

ವಚನ ಬೆಳಕು; ಎನ್ನ ಕಣ್ಣೊಳಗಣ ಕಟ್ಟಿಗೆ

ಎನ್ನ ಕಣ್ಣೊಳಗಣ ಕಟ್ಟಿಗೆ

ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ.
ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ.
ಎನ್ನ ಅಂಗದಲ್ಲಿದ್ದ ಅಹಂಕಾರವ ಸುಡುವವರನಾರನೂ ಕಾಣೆ.
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ
ಕೆಡಿಸುವವರನಾರನೂ ಕಾಣೆನಯ್ಯಾ.
ಆದ್ಯರ ವೇದ್ಯರ ವಚನಗಳಿಂದ
ಅರಿದೆವೆಂಬವರು ಅರಿಯಲಾರರು ನೋಡಾ.
ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು.
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು.
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೆ ಸುಡಬೇಕು.
ಎನ್ನ ಮನದಲ್ಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು.
ಅಮುಗೇಶ್ವರ ಲಿಂಗವ ನಾನೆ ಅರಿಯಬೇಕು.
                                                                   -ಅಮುಗೆ ರಾಯಮ್ಮ

ನಮ್ಮ ಕಣ್ಣೊಳಗಿನ ಬಯಕೆಯ ಕಸವನ್ನು ಬೇರೆಯವರಿಂದ ತೆಗೆಯಲಿಕ್ಕಾಗುವುದಿಲ್ಲ. ಬಯಕೆಗಳನ್ನು ಮೀರಿ ಬೆಳೆಯುವುದರ ಮೂಲಕವೇ ಆ ಕಸವನ್ನು ತೆಗೆಯಲು ಸಾಧ್ಯ. ನಾವು ದಾರಿತಪ್ಪಿದಾಗ ಉಂಟಾಗುವ ನೋವನ್ನು ಯಾರಿಂದಲೂ ಹೋಗಲಾಡಿಸಲು ಸಾಧ್ಯವಿಲ್ಲ. ಸನ್ಮಾರ್ಗದ ಮೂಲಕವೇ ಆ ನೋವನ್ನು ಗುಣಪಡಿಸಿಕೊಳ್ಳಬೇಕು. ನಮ್ಮೊಳಗಿನ ಎಲ್ಲ ಒಳ್ಳೆಯತನವನ್ನು ಸುಡುವ ಅಹಂಕಾರವನ್ನು ಸುಡುವ ಸಾಮರ್ಥ್ಯ ಯಾರಿಗೂ ಇರುವುದಿಲ್ಲ. ಅದು ನಮ್ಮಿಂದ ಮಾತ್ರ ಸಾಧ್ಯ. ನಮ್ಮ ಮನದೊಳಗಿನ ಮಾಯಾಪ್ರಪಂಚವನ್ನು ನಿರ್ನಾಮ ಮಾಡುವ ಶಕ್ತಿ ಬೇರೆ ಯಾರಿಗೂ ಇರುವುದಿಲ್ಲ. ಅದನ್ನು ನಮ್ಮೊಳಗೆ ನಾವೇ ಲಯಗೊಳಿಸಬೇಕು. ಆ ಮೂಲಕ ನಮ್ಮೊಳಗೂ ಮತ್ತು ಹೊರಗೂ ಇರುವ ದೇವರನ್ನು ನಾವೇ ಅರಿಯಬೇಕು ಎಂಬುದು ಅಮುಗೆರಾಯಮ್ಮನ ಆಶಯವಾಗಿದೆ.
ಮನದೊಳಗಿನ ಮಾಯಾಪ್ರಪಂಚವನ್ನು ಕಳೆಯಬೇಕೆಂದು ಅಮುಗೆರಾಯಮ್ಮ ತಿಳಿಸಿದ್ದಾಳೆಯೆ ಹೊರತಾಗಿ ಈ ಜಗತ್ತಿಗೆ ’ಮಾಯಾಪ್ರಪಂಚ’ ಎಂದು ಕರೆದಿಲ್ಲ. ಒಳಗಿನ ಜಗತ್ತೇ ಇಷ್ಟಲಿಂಗವಾಗಿದೆ. ನಮ್ಮೊಳಗಿನ ಮಾಯಾಪ್ರಪಂಚ ಕಳೆದಾಗ ಮಾತ್ರ ಅದು ಕಾಣಿಸುತ್ತದೆ. ಒಳಗಿನ ಮಾಯಾಪ್ರಪಂಚವನ್ನು ನಿರ್ನಾಮ ಮಾಡಿದಾಗ ಹೊರಗಿನ ಮಾಯಾಪ್ರಪಂಚ ತನ್ನಿಂದ ತಾನೇ ಬಯಲಾಗುತ್ತದೆ. ಆಗ ನಮ್ಮ ಹೊರಗಿನ ಜಗತ್ತು ಜಂಗಮಲಿಂಗವಾಗಿ ಗೋಚರಿಸತೊಡಗುತ್ತದೆ. ‘ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾ ಪರಃ’ (ಪಾರಮಾರ್ಥಿಕವಾಗಿ ಸತ್ಯವಾದುದು ಬ್ರಹ್ಮವೊಂದೇ. ಜಗತ್ತು ಮಿಥ್ಯೆ. ಜೀವನು ಬ್ರಹ್ಮನಿಗಿಂತ ಬೇರೆಯಲ್ಲ.) ಎಂದು ಶಂಕರಾಚಾರ್ಯರು ಹೇಳುತ್ತಾರೆ. ಆದರೆ ವಚನಕಾರರ ಪ್ರಕಾರ ಮಾಯಶಕ್ತಿ ಪರಶಿವನ ಅವಿಭಾಜ್ಯ ಅಂಗವಾಗಿದೆ. ಮಾಯಾಶಕ್ತಿ ಎಂಬುದು ಶರೀರವಾದರೆ ಪರಶಿವನು ಆತ್ಮವಾಗುತ್ತಾನೆ. ಮಾಯಾಶಕ್ತಿಯಿಂದಲೇ ಸಕಲ ಜೀವಕೋಟಿ ಉತ್ಪತ್ತಿಯಾಗುತ್ತವೆ. ಅವುಗಳೊಳಗೆ ದೇವರು ಆತ್ಮಸ್ವರೂಪದಲ್ಲಿ ಇರುತ್ತಾನೆ. ಅಂತೆಯೆ ಬ್ರಹ್ಮ ಸತ್ಯವಾದರೂ ಜಗತ್ತು ಮಿಥ್ಯೆ ಅಲ್ಲ; ಅದು ವಾಸ್ತವವಾಗಿದೆ. ಕೋಟ್ಯಂತರ ವರ್ಷಗಳ ನಂತರ ಇಡೀ ವಿಶ್ವ ಲಯವಾದಾಗ ಮಾಯಾಶಕ್ತಿ ಆ ದೇವರಲ್ಲಿ ಲಯವಾಗಿ ಎಲ್ಲ ಬಯಲಾಗುತ್ತದೆ. ನಮ್ಮ ಬದುಕನ್ನು ಸ್ವಚ್ಛಗೊಳಿಸಿಕೊಂಡಾಗ ಮಾತ್ರ ನಮ್ಮ ಒಳಗಿನ ಸುಂದರ ಜಗತ್ತು ಕಾಣತೊಡಗುತ್ತದೆ. ಒಳಜಗತ್ತನ್ನು ಅರಿಯುವುದಕ್ಕಾಗಿ ಹೊರ ಜಗತ್ತು ಇದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *