ಮಾರುತನಲ್ಲಿ ಬೆರೆದ ಗಂಧ
ಮಾರುತನಲ್ಲಿ ಬೆರೆದ ಗಂಧದಂತೆ,
ಸುರತದಲ್ಲಿ ಬೆರೆದ ಸುಖದಂತೆ,
ಮಚ್ಚಿದಲ್ಲಿ ಕೊಡುವ ಉಚಿತದಂತೆ,
ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥಾ.
-ಗೊಗ್ಗವ್ವೆ
ಕೇರಳದ ಆವಲೂರಿನವಳು. ತಂದೆ-ತಾಯಿ ಮದುವೆಗೆ ಒತ್ತಾಯಿಸಿದಾಗ ನಿರಾಕರಿಸಿದಳು. ವಿರಾಗಿಣಿಯಾಗಿ ಕಲ್ಯಾಣಕ್ಕೆ ಬಂದಳು. ‘ಶರಣ ಸತಿ, ಲಿಂಗ ಪತಿ’ ಭಾವದಿಂದ ಕೂಡಿದ ಲಿಂಗಾಂಗ ಸಾಮರಸ್ಯದ ಪರಮಾನಂದವನ್ನು ಅನುಭವಿಸಿದವಳು. ಅವಳ ವಚನಾಂಕಿತ ನಾಸ್ತಿನಾಥ. ನಾಸ್ತಿನಾಥ ಎಂದರೆ ಬಯಲಿನ ಒಡೆಯ ಅಥವಾ ಶೂನ್ಯದೇವ. ಕಣ್ಣಿಗೆ ಕಾಣುವ ನಕ್ಷತ್ರ, ಗ್ರಹ, ಒಟ್ಟಾರೆ ಇಡೀ ವಿಶ್ವದ ಕೇಂದ್ರಬಿಂದುವಾಗಿದ್ದಾನೆ. ಈ ಶೂನ್ಯದೇವ ನಿರಾಕಾರನಾದರೂ ಸಗುಣದೇವ. ಸಗುಣನಾದ ಈ ಶೂನ್ಯದೇವನೇ ಎಲ್ಲದರ ಆದಿ ಮತ್ತು ಅಂತ್ಯ ಆಗಿದ್ದಾನೆ. ಎಲ್ಲವೂ ಇಲ್ಲಿಂದಲೇ ಹುಟ್ಟಿ ಕೊನೆಗೆ ಇಲ್ಲೇ ಲಯವಾಗುವವು. ಧೂಪದ ಕಾಯಕದ ಗೊಗ್ಗವ್ವೆ ಇಂಥ ನಾಸ್ತಿನಾಥನನ್ನೇ ಪತಿಯಾಗಿ ಸ್ವೀಕರಿಸಿದವಳು. ಶರಣರು ಸತಿಯ ಹಾಗೆ ಇರುವವರು. ನಾಸ್ತಿನಾಥನು ಪತಿಯ ಹಾಗೆ ಇರುವವನು. ಈ ಸತಿ-ಪತಿ ಸಂಬಂಧ ಹೇಗಿರುತ್ತದೆ ಎಂಬುದನ್ನು ಗೊಗ್ಗವ್ವೆ ಈ ವಚನದಲ್ಲಿ ವಿವರಿಸಿದ್ದಾಳೆ.
ಗಾಳಿಯಲ್ಲಿನ ಸುಗಂಧದಂತೆ, ರತಿಕ್ರೀಡೆಯಲ್ಲಿನ ಸುಖದಂತೆ, ಒಲುಮೆ ಇದ್ದಲ್ಲಿ ಪ್ರತಿಯೊಂದೂ ಯೋಗ್ಯ ಎನಿಸುವ ಭಾವದಂತೆ, ಭಕ್ತರಿಗೆ ಲಿಂಗಪತಿಯ ಜೊತೆ ಲಿಂಗಾಂಗಸಾಮರಸ್ಯವನ್ನು ಹೊಂದುವ ಮಾರ್ಗವಿದು ಎಂದು ಗೊಗ್ಗವ್ವೆ ಸೂಚಿಸಿದ್ದಾಳೆ. ಲಿಂಗಾಂಗಸಾಮರಸ್ಯದಲ್ಲಿ ಜೀವಾತ್ಮನು ಗಾಳಿಯ ಹಾಗೆ ಇದ್ದರೆ ಪರಮಾತ್ಮನು ಸುಗಂಧದ ಹಾಗೆ ಇರುತ್ತಾನೆ. ಜೀವಾತ್ಮನು ಕಾಮದಂತೆ ಇದ್ದರೆ ಪರಮಾತ್ಮನು ಪ್ರೇಮದಂತೆ ಇರುತ್ತಾನೆ. ಜೀವಾತ್ಮನು ಒಲವಾದರೆ ಪರಮಾತ್ಮನು ಸರ್ವಯೋಗ್ಯನಾಗಿರುತ್ತಾನೆ. ಹೀಗೆ ಜೀವಾತ್ಮ ಪರಮಾತ್ಮರ ಸಂಬಂಧದಿಂದ ಸಾಮರಸ್ಯದ ಸೃಷ್ಟಿಯಾಗುತ್ತದೆ. ಭಕ್ತಿಯು ಇಂಥ ಅತ್ಯುನ್ನತ ಪ್ರೇಮದ ಮಾರ್ಗವಾಗಿದೆ. ಈ ಪ್ರೇಮವು ಇಡೀ ವಿಶ್ವವನ್ನೇ ಆವರಿಸಿಕೊಳ್ಳುತ್ತದೆ. ಲಿಂಗಕಾಮಿಯಾದವನು ಸಕಲಜೀವಾತ್ಮರ ಪ್ರೇಮಿಯಾಗುತ್ತಾನೆ. ಜೀವಾತ್ಮನು ವಸ್ತುವಿನ ಪ್ರತೀಕವಾದರೆ ಪರಮಾತ್ಮನು ಚೈತನ್ಯದ ಪ್ರತೀಕ. ಚೈತನ್ಯವಿಲ್ಲದ ವಸ್ತುವಿಲ್ಲ. ಜೀವಾತ್ಮ ಮತ್ತು ಪರಮಾತ್ಮ ಜೊತೆಗಿದ್ದಾರೆ. ಜೀವಾತ್ಮನು ಭೂಮಿಗೆ ಬರುವ ಮೊದಲು ಪರಮಾತ್ಮನಲ್ಲೇ ಅದ್ವೈತ ರೂಪದಲ್ಲಿ ಇರುತ್ತಾನೆ. ಲೀಲೆಯಿಂದಾಗಿ ದ್ವೈತವಾಗಿರುತ್ತಾನೆ. ಲಿಂಗಾಂಗಸಾಮರಸ್ಯದಿಂದಾಗಿ ಅಭೇದ್ಯನಾಗುತ್ತಾನೆ. ಕೊನೆಯಲ್ಲಿ ಪರಮತ್ಮನನ್ನೇ ಸೇರಿ ಅದ್ವೈತನಾಗುತ್ತಾನೆ.
ಮಧುರಭಾವದ ವಚನದ ಮೂಲಕ ಗೊಗ್ಗವ್ವೆ ಈ ಮಾರ್ಗವನ್ನು ತಿಳಿಸಿಕೊಟ್ಟಿದ್ದಾಳೆ. ಮಾನವರ ಪ್ರೇಮಭಾವವು ಒಳ ಮತ್ತು ಹೊರಗಿನ ಜಗತ್ತನ್ನೆಲ್ಲ ಆವರಿಸಿಕೊಂಡು ಅತ್ಯುನ್ನತ ಮಟ್ಟ ತಲುಪಿದಾಗ ಭಕ್ತಿ ಎನ್ನಿಸಿಕೊಳ್ಳುತ್ತದೆ. ಆ ಮೂಲಕ ಭಕ್ತನು ಹಂತ ಹಂತವಾಗಿ ಮುನ್ನಡೆ ಸಾಧಿಸಿ ಐಕ್ಯಸ್ಥಲವನ್ನು ತಲುಪುತ್ತಾನೆ. ಈ ಪ್ರಕ್ರಿಯೆಗೆ ಬಸವಾದ್ವೈತ ಎನ್ನುತ್ತಾರೆ. ಷಟ್‌ಸ್ಥಲಗಳಲ್ಲಿ ಕೊನೆಯದಾದ ಐಕ್ಯಸ್ಥಲವನ್ನೂ ಮೀರಿ ಬೆಳೆದ ಶರಣ ಸಪ್ತಸ್ಥಲವಾದ ನಿರವಯ (ನಿರಾಕಾರ) ಸ್ಥಲವನ್ನು ತಲುಪುತ್ತಾನೆ. (ಮೆಲ್ಲಮೆಲ್ಲನೆ ಷಟ್‌ಸ್ಥಲವ ಮೀರಿ ನಿರವಯ ಸ್ಥಲವನೆಯ್ದುವೆನಯ್ಯಾ ಎಂದು ಬಸವಣ್ಣನವರು ಹೇಳುತ್ತಾರೆ.) ನಾಸ್ತಿನಾಥನನ್ನು ಸೇರುವ ಪರಿ ಇದು.