ಅಂಗವಿಕಾರ ಸಾಕೇಳಿ
ಅಂಗವಿಕಾರ ಸಾಕೇಳಿ ಬಹುವಿಡಂಗದ ಪ್ರಕೃತಿಯ ಮರದೇಳಿ.
ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ.
ನಿಮ್ಮ ಗುರುವಾಜ್ಞೆಯ,
ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ.
ಸಾರಿದೆ! ಎವೆ ಹಳಚಿದಡಿಲ್ಲ
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರ ಲಿಂಗವ ಕೂಡಬಲ್ಲಡೆ.
-ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯ
ಕಾಯವು ಪಂಚೇಂದ್ರಿಯಗಳ ಮೂಲಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಸದಾ ತವಕಿಸುತ್ತಿರುತ್ತದೆ. ಗಾಣದೆತ್ತಿನ ಹಾಗೆ ಮನಸ್ಸು ಕಾಮನೆಗಳ ಸುತ್ತ ಸುತ್ತುತ್ತಿರುತ್ತದೆ. ಚತುರ ಪ್ರಕೃತಿ ಬಹು ಆಕರ್ಷಕವಾಗಿದೆ. ಅದು ಹೇಗಾದರೂ ಮಾಡಿ ನಮ್ಮ ಮನಸ್ಸನ್ನು ತನ್ನ ಕಡೆಗೆ ಎಳೆಯುವಲ್ಲಿ ಸದಾ ತಲ್ಲೀನವಾಗಿರುತ್ತದೆ. ದೈಹಿಕ ಪ್ರಕೃತಿ ಮತ್ತು ಐಹಿಕ ಪ್ರಕೃತಿಯ ತೀವ್ರತೆಯಿಂದಾಗಿ ಮಾನವ ಬಯಕೆಗಳ ದಾಸನಾಗುತ್ತ ಹೋದಂತೆಲ್ಲ ಅಂಗವಿಕಾರಿಯಾಗುತ್ತಾನೆ. ಆಗ ಮನಸ್ಸು ವಿಕೃತವಾಗುತ್ತದೆ. ಎಚ್ಚರಗೊಳ್ಳುವವರೆಗೆ ಆ ವಿಕೃತಭಾವದಿಂದ ಹೊರಬರಲಿಕ್ಕಾಗದು.
ಅಂತೆಯೆ ನಮ್ಮ ಹಳ್ಳಿಗರು ಬೆಳಿಗ್ಗೆ ಎದ್ದಾಗ ಎದುರಾದವರಿಗೆಲ್ಲ ‘ಎದ್ದಿರಾ’ ಎಂದು ಕೇಳುತ್ತಾರೆ. ಆಗ ಅವರು ‘ನಾವು ಎದ್ದೆವು; ನೀವು ಎದ್ದಿರಾ’ ಎಂದು ಕೇಳುತ್ತಾರೆ. ಈ ಮಾತು ಎಚ್ಚರಿಕೆ ಕಾಯಕದ ಮುಕ್ತನಾಥಯ್ಯನವರ “ಅಂಗವಿಕಾರ ಸಾಕೇಳಿ ಬಹುವಿಡಂಗದ ಪ್ರಕೃತಿಯ ಮರದೇಳಿ” ಎಂಬ ಎಚ್ಚರಿಕೆಯನ್ನೇ ಧ್ವನಿಸುತ್ತದೆ. ಬೆಳಿಗ್ಗೆ ಮಾನವ ಜಾಗೃತನಾಗಿ ಅಂಗವಿಕಾರದಿಂದ ಹೊರಬಂದು ಕರ್ತವ್ಯ ಪಾಲನೆಯಲ್ಲಿ ತೊಡಗಬೇಕು. ಅಂಗದ ಬಯಕೆಗಳನ್ನು ಈಡೇರಿಸುವುದಕ್ಕಿಂತಲೂ ಹೆಚ್ಚಿನ ಲೋಕಹಿತದ ಕರ್ತವ್ಯಗಳನ್ನು ಆತ ಈ ಸಮಾಜದಲ್ಲಿ ಮಾಡುವುದಿದೆ ಎಂಬುದನ್ನು ಮುಕ್ತಿನಾಥಯ್ಯ ಸೂಚಿಸುತ್ತಾನೆ. ನಮ್ಮ ಹಳ್ಳಿಗರಿಗೆ ಈ ವಿಚಾರವೂ ಗೊತ್ತಿದೆ. ಅವರು ಮಧ್ಯಾಹ್ನದಲ್ಲಿ ಸಿಕ್ಕವರನ್ನು ‘ಊಟ ಆಯಿತಾ’ ಎಂದು ಕೇಳುತ್ತಾರೆ. ಸಿಕ್ಕವರು ಅದಕ್ಕೆ ಪ್ರತಿಯಾಗಿ ‘ನಮ್ಮದು ಆಯಿತು, ನಿಮ್ಮದು ಆಯಿತಾ’ ಎಂದು ಕೇಳುತ್ತಾರೆ. ಇದು ದಾಸೋಹ ಪ್ರಜ್ಞೆಯಿಂದ ಕೂಡಿದ ಮಾತು. ಸಮಾಜದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾಳಜಿಯ ದ್ಯೋತಕ. ಬಹಳ ದಿನಗಳ ನಂತರ ಭೇಟಿಯಾದವರು ‘ಆರಾಮಿದ್ದೀರಾ’ ಎಂದು ಪರಸ್ಪರ ವಿಚಾರಿಸುತ್ತಾರೆ. ಇದು ಸಾಮಾಜಿಕ ಜವಾಬ್ದಾರಿಯ ಪ್ರತೀಕ. ಹೀಗೆ ಮಾನವನಿಗೆ ದೈಹಿಕ ಬಯಕೆಗಳನ್ನು ಮೀರಿದ ಸಾಮಾಜಿಕ ಬಯಕೆಗಳು ಇರುವುದು ಅವಶ್ಯ ಎಂಬುದು ಶರಣರ ವಿಚಾರವಾಗಿತ್ತು.
ಲಿಂಗಾಂಗಸಾಮರಸ್ಯವನ್ನು ನೆನಪಿಸಿಕೊಂಡು ಏಳಿ. ಏಕೆಂದರೆ ಅದು ನಿಮಗೆ ಮಧುರಭಕ್ತಿಯ ಪರಮಾನಂದವನ್ನು ಕೊಡುವುದು ಮತ್ತು ಇಹದಲ್ಲಿಯೇ ಮುಕ್ತಿ ಭಾವ ಮೂಡಿಸುವುದು. ಒಳಿತಿನ ಕಡೆಗೆ ಒಯ್ಯುವ ಗುರುವಿನ ಆಜ್ಞೆ ಮತ್ತು ಇಂದ್ರಿಯ ಬಯಕೆಗಳ ತೀವ್ರತೆಯಿಂದ ಹೊರತರುವಂಥ ಅರಿವಿನ ಎಚ್ಚರಿಕೆಯನ್ನು ತಿಳಿದುಕೊಂಡು ಏಳಿ ಎಂದು ಹೇಳುವಲ್ಲಿ ಮುಕ್ತಿನಾಥಯ್ಯ ನಮ್ಮ ಅಂತಃಸಾಕ್ಷಿಯ ಗಮನ ಸೆಳೆಯುತ್ತಾನೆ. ತಾನು ಸಾರಿ ಹೇಳಿದಾಗ್ಯೂ ಸುಮ್ಮನೆ ಕಣ್ಣುಪಿಳಕಿಸುತ್ತ ಕುಳಿತರೆ ಪ್ರಯೋಜನವಿಲ್ಲ ಎನ್ನುತ್ತಾನೆ. ಪರಮಪವಿತ್ರವಾದುದನ್ನು ಕೂಡಬೇಕೆಂದರೆ ಹೀಗೆ ಎಚ್ಚರಾಗುವುದು ಅವಶ್ಯ ಎನ್ನುತ್ತಾನೆ.