ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿ

ವಚನ ಬೆಳಕು; ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿ

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿ

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದರೆ ಒಡನೆ ನುಡಿವನು; ಇಮ್ಮನವಾದರೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ;
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವಾ
                                                                         -ಬಸವಣ್ಣ
ಇಡೀ ಭೂಮಂಡಲದ ಮೇಲೆ ಜೀವಜಾಲವೆಂಬ ಅತಿದೊಡ್ಡದಾದ ಅಂಗಡಿಯನ್ನಿಟ್ಟು ವ್ಯಾಪಾರಕ್ಕೆ ಕುಳಿತಿದ್ದಾನೆ ಮಹಾದೇವಸೆಟ್ಟಿ. ಮನೋವ್ಯಾಪಾರ ಮತ್ತು ಲೋಕವ್ಯವಹಾರಕ್ಕೆ ಬೇಕಾದ ಸಕಲ ಚರಾಚರಗಳು ಈ ಜೀವಜಾಲದಲ್ಲಿವೆ. ಪರಮಾತ್ಮನಾದ ಈ ಜಾಣ ಸೆಟ್ಟಿ ತನ್ನ ಜೊತೆ ವ್ಯವಹರಿಸುವವರ ಜೊತೆ ಒಮ್ಮನಸ್ಸನ್ನು ಬಯಸುವನು. ಇಬ್ಬಗೆಯ ಮನಸ್ಸುಳ್ಳವರ ಜೊತೆ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಆತ ವಿಶ್ವದಲ್ಲಿ ಜೀವಜಾಲ ಸಮತೋಲನ ಮತ್ತು ಮಾನವರಲ್ಲಿ ಏಕತೆ ಬಯಸುತ್ತಾನೆ.
ಒಮ್ಮನವೆಂದರೆ ದೇವರಲ್ಲಿ ಸಿಲುಕಿದ ಮನಸ್ಸು. ಒಮ್ಮನವೆಂದರೆ ನಾಲ್ಕು ಸೊಲಿಗೆ ಎಂದೂ ಆಗುತ್ತದೆ. ಇಮ್ಮನವೆಂದರೆ ಚಂಚಲ ಮನಸ್ಸು. ಇಮ್ಮನವೆಂದರೆ ಎಂಟು ಸೊಲಿಗೆ ಎಂದೂ ಅರ್ಥ. ಕೇವಲ ನಾಲ್ಕು ಸೊಲಿಗೆಯಷ್ಟು ಬಯಸುವ ಮನಸ್ಸು ಲೋಕದ ವಸ್ತುಗಳನ್ನು ಪ್ರಸಾದಂತೆ ಸ್ವೀಕರಿಸುವ ಒಮ್ಮನದ ಮನಸ್ಸು. ಪರಮಾತ್ಮನೊಡನೆ ಐಕ್ಯಭಾವವನ್ನು ಸಾಧಿಸುವ ಮನಸ್ಸು. ಆದರೆ ಸೃಷ್ಟಿಯ ವಸ್ತುಗಳ ಬಗ್ಗೆ ಮೋಹಿತರಾದವರು ಸೃಷ್ಟಿಯನ್ನು ಸುಲಿಗೆ ಮಾಡುತ್ತಲೇ ಇರುತ್ತಾರೆ. ಅಂಥವರು ಇಮ್ಮನದವರು. ನಾಲ್ಕು ಸೊಲಿಗೆ ಬೇಕಾಗುವಲ್ಲಿ ಎಂಟು ಸೊಲಿಗೆ ಬಯಸುವವರು. ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಕಾರಣವಾಗುವವರು.
ಸೃಷ್ಟಿಕರ್ತನು ಜೀವಜಾಲ ಸಮತೋಲನ ಬಯಸುವುದರಿಂದ ಒಂದು ಕಾಣಿ ಅಂದರೆ ಒಂದು ಪೈಸೆಯಷ್ಟೂ ಹೆಚ್ಚಿಗೆ ಪಡೆಯಲು ಸಿದ್ಧನಿಲ್ಲ. ಅದೇರೀತಿ ಅರ್ಧಪೈಸೆಯಷ್ಟೂ ಕಡಿಮೆ ಪಡೆಯಲು ಸಿದ್ಧನಿಲ್ಲ. ತಕ್ಕಡಿಯ ತಟ್ಟೆಗಳನ್ನು ಸಮತೋಲನಕ್ಕೆ ತರಲು ಕಟ್ಟುವ ಭಾರದ ತುಂಡಿಗೂ ಕಾಣಿ ಎನ್ನುತ್ತಾರೆ. ಆತನ ತಕ್ಕಡಿ ಸಂಪೂರ್ಣ ಸಮತೋಲನದಿಂದ ಕೂಡಿದೆ. ಆತನ ವ್ಯವಹಾರದಲ್ಲಿ ಲಾಭ ಹಾನಿಗಳಿಲ್ಲ.
‘ಮಾನವನು ಜಗತ್ತಿನ ಕೇಂದ್ರಬಿಂದು’ ಎಂದು ತಿಳಿದದ್ದರಿಂದಲೇ ಇಡೀ ಪೃಥ್ವಿ ಇಂದು ವಿನಾಶದ ಕಡೆಗೆ ಸಾಗುತ್ತಿದೆ. ಮನುಷ್ಯನಿಗಾಗಿ ಈ ಜಗತ್ತು ಎಂದು ಭಾವಿಸಿದಾಗ ಪ್ರಾಣಿ, ಪಕ್ಷಿ, ಸಸ್ಯ ಮತ್ತು ಎಲ್ಲ ನೈಸರ್ಗಿಕ ಸಂಪನ್ಮೂಲಗಳು ವಿನಾಶದ ಹಾದಿ ಹಿಡಿಯುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಸ್ತವ್ಯಸ್ತ ಬೆಳವಣಿಗೆಯಿಂದಾಗಿ ಕಳೆದ ೩೦೦ ವರ್ಷಗಳ ಅವಧಿಯಲ್ಲಿ ಮಾನವ ಬಹಳಷ್ಟು ನೈಸರ್ಗಿಕ ಸಂಪತ್ತನ್ನು ಹಾಳುಮಾಡಿದ್ದಾನೆ. ತಾನೇ ಎಲ್ಲದರ ಒಡೆಯ ಎನ್ನುತ್ತ ಮನಶ್ಶಾಂತಿಯನ್ನು ಕಳೆದುಕೊಂಡು ಮೆರೆಯುತ್ತಿದ್ದಾನೆ.
ಮಾನವ ಜಗತ್ತಿನ ಕೇಂದ್ರಬಿಂದು ಅಲ್ಲ: ಸಕಲಜೀವರಾಶಿಯೇ ಕೇಂದ್ರಬಿಂದು ಎಂದು ಇಂದಿನ ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಸತ್ಯವನ್ನು ಬಸವಣ್ಣನವರು ೧೨ನೇ ಶತಮಾನದ ಕಂಡುಕೊಂಡಿದ್ದರು.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *