ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ನಿಮ್ಮ ಶರಣರ ಚಮ್ಮಾವುಗೆ

ವಚನ ಬೆಳಕು; ನಿಮ್ಮ ಶರಣರ ಚಮ್ಮಾವುಗೆ

ನಿಮ್ಮ ಶರಣರ ಚಮ್ಮಾವುಗೆ

ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ!
                                          -ಬಸವಣ್ಣ
ಕಲ್ಯಾಣದ ಪ್ರಧಾನಿ ಬಸವಣ್ಣನವರು ಒಂದುದಿನ ಒಡ್ಡೋಲಗಕ್ಕೆ ಹೋಗುತ್ತಿರುವಾಗ ಹರಳಯ್ಯನವರು ’ಶರಣು’ ಎಂದು ಕೈ ಮುಗಿದರು. ಬಸವಣ್ಣನವರು ’ಶರಣು ಶರಣಾರ್ಥಿ ಎಂದು ಕೈ ಮುಗಿದರು. ಬಸವಣ್ಣನವರು ಎರಡುಬಾರಿ ಶರಣೆಂದುದನ್ನು ಕೇಳಿ ಸ್ತಂಭೀಭೂತರಾದ ಹರಳಯ್ಯ ನಿಂತಲ್ಲಿಯೇ ನಿಂತರು. ಪತ್ನಿ ಕಲ್ಯಾಣಮ್ಮ ಹುಡುಕಿಕೊಂಡು ಬರುವವರೆಗೆ ಅಲ್ಲಿಯೇ ನಿಂತಿದ್ದರು. ಬಸವಣ್ಣನವರು ತಮ್ಮ ಮೇಲೆ ಹೆಚ್ಚಿನ ’ಶರಣು’ ಹೊರೆ ಹೊರಸಿದ್ದನ್ನು ಪತ್ನಿಗೆ ವಿವರಿಸಿದರು. ತಮ್ಮ ತೊಡೆಯ ಚರ್ಮದಿಂದ ಚಮ್ಮಾವುಗೆಯ ಮಾಡಿ ಬಸವಣ್ಣನವರ ಪಾದಗಳಿಗೆ ಅರ್ಪಿಸುವುದೇ ಇದಕ್ಕೆ ಪರಿಹಾರ ಎಂದು ನಿರ್ಧರಿಸಿದರು.
“ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ
ಹರನೆಂದು ಮಡದಿಯೆಡದೊಡೆಯ| ತಾ ಕೊಯ್ದು
ಭರದಿ ಹದಮಾಡಿ ಒಣಗಿಸಿದ||”
ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.
ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ ಆ ಚಮ್ಮಾವುಗೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ’ಇವು ದೇವರ ಪಾದರಕ್ಷೆಗಳು’ ಎಂದರು. ಆ ಸಂದರ್ಭದ ಹಿನ್ನೆಲೆಯಲ್ಲಿ ಬಸವಣ್ಣನವರು ಮೇಲೆ ತಿಳಿಸಿದ ವಚನವನ್ನು ಹೇಳಿದ್ದಾರೆ. ಹರಳಯ್ಯ ದಂಪತಿ ನಿರ್ಮಿಸಿದ ಈ ಚಮ್ಮಾವುಗೆಗಳಿಗೆ ದೇವರ ಸೃಷ್ಟಿಯಾದ ಈ ಪೃಥ್ವಿ ಸಮ ಬರುವುದಿಲ್ಲ ಎಂದು ಬಸವಣ್ಣನವರು ಹೇಳಬೇಕಾದರೆ ಹರಳಯ್ಯ ದಂಪತಿ ಎಂಥ ಪವಿತ್ರ ಜೀವಗಳು ಎಂಬುದರ ಅರಿವಾಗುವುದು. ಹರಳಯ್ಯನವರ ವಚನಗಳು ಸಿಕ್ಕಿಲ್ಲ. ಆದರೆ ಅವರು ಬಸವಣ್ಣನವರಿಗೆ ಕೊಟ್ಟ ಕಲಾತ್ಮಕ ಚಮ್ಮಾವುಗೆಗಳು ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿವೆ. ಬಸವಣ್ಣನವರು ಸ್ಪರ್ಶಿಸಿದ ಇನ್ನೊಂದು ಚರವಸ್ತು ಈ ಜಗತ್ತಿನಲ್ಲಿ ಉಳಿದಿಲ್ಲವಾದ ಕಾರಣ ಈ ಚಮ್ಮಾವುಗೆಗಳು ಅಮೂಲ್ಯವಾಗಿವೆ.
ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮ ಸ್ವೀಕರಿಸಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆಯೂ ಆಯಿತು. ಆದರೆ ಮನುವಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ವಿಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಕಣ್ಣು ಕೀಳಿಸಿಕೊಂಡು ಎಳೆಹೂಟೆ ಶಿಕ್ಷೆ ಅನುಭವಿಸಿದ ಹರಳಯ್ಯ ಮತ್ತು ಮಧುವರಸರು ಹುತಾತ್ಮರಾದರು. ಮನುವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂಥ ಬಸವಕ್ರಾಂತಿ ಆಗದಂತೆ ಮನುವಾದಿಗಳು ನೋಡಿಕೊಂಡರು.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *