ಸತಿಯ ಗುಣ
ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?
ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?
ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ
ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
-ಡಕ್ಕೆಯ ಬೊಮ್ಮಣ್ಣ
ಭಾರತಕ್ಕೆ ವೈದಿಕರು ಬರುವ ಮುಂಚೆ ಭಾರತದಲ್ಲಿ ಮಾತೃಪ್ರಧಾನ ವ್ಯವಸ್ಥೆ ಇತ್ತು. ಒಂದು ಜನಾಂಗ ಒಂದೇ ಕಡೆಗೆ ನೆಲೆಸಿದಲ್ಲಿ ಮಾತೃಪ್ರಧಾನ ವ್ಯವಸ್ಢೆ ಇತ್ತು. ನಂತರ ಅಲೆಮಾರಿ ಜನಾಂಗದಲ್ಲಿನ ಪಿತೃಪ್ರಧಾನ ವ್ಯವಸ್ಥೆ ಮಾತೃಪ್ರಧಾನ ವ್ಯವಸ್ಥೆ ಮೇಲೆ ಪ್ರಭಾವ ಬೀರಿತು. ಹೀಗೆ ಅಲೆಮಾರಿ ಜನಾಂಗವಾದ ಆರ್ಯರು ಭಾರತಕ್ಕೆ ಬಂದು ನೆಲೆಸಿದ ಪ್ರದೇಶ ಆರ್ಯಾವರ್ತವಾಯಿತು. ಮಾತೃಪ್ರಧಾನ ವ್ಯವಸ್ಥೆಯ ಮೊಹೆಂಜೊದಾರೊ ಸಂಸ್ಕೃತಿಯ ಮೂಲ ಸೆಲೆಯಾದ ಮಾತೃಪ್ರಧಾನ ಸಂಸ್ಕೃತಿ ನಶಿಸಿ ಆರ್ಯಸಂಸ್ಕೃತಿಯ ಮೂಲವಾದ ಪಿತೃಪ್ರಧಾನ ಸಂಸ್ಕೃತಿ ವಿಜೃಂಭಿಸಿದ ಕಾರಣ ಮನೆಯ ಒಡತಿಯಾಗಿದ್ದ ಮಹಿಳೆ ತನ್ನ ಹಕ್ಕನ್ನು ಪುರುಷನಿಗೆ ಬಿಟ್ಟು ಕೊಡಬೇಕಾಯಿತು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ಯಾವುದೇ ರೀತಿಯ ಅಭಿಪ್ರಾಯ ಸ್ವಾತಂತ್ರ್ಯವಿರಲಿಲ್ಲ. ಆಕೆ ಎಲ್ಲವನ್ನೂ ಮೌನವಾಗಿಯೆ ಸಹಿಸಿಕೊಳ್ಳಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಡಕ್ಕೆಯ ಬೊಮ್ಮಣ್ಣ “ಪತಿಯ ಗುಣ ಸತಿ ನೋಡಬಹುದೆ ಎಂಬರು” ಎಂದು ಹೇಳಿದ್ದಾನೆ.
ಪತಿಯಾಗುವವನು ಸತಿಯನ್ನು ಎಲ್ಲ ರೀತಿಯಿಂದಲೂ ಪರೀಕ್ಷಿಸಬಹುದು. ಆದರೆ ಸತಿಯಾಗುವವಳು ಪತಿಯನ್ನು ಪರೀಕ್ಷಿಸುವ ವಿಚಾರ ಪಿತೃಪ್ರಧಾನ ವ್ಯವಸ್ಥೆಯಲ್ಲಿ ತಮ್ಮ ಮನಸ್ಸನ್ನು ಸಂಕುಚಿತಗೊಳಿಸಿಕೊಂಡಿರುವ ಪುರುಷರು, ಹೆಣ್ಣಿಗೂ ಒಂದು ಮನಸ್ಸಿದೆ, ಅಲ್ಲದೆ ಅವರಿಗೂ ಬೇಕು ಬೇಡಗಳನ್ನು ತಿಳಿಸುವ ಸ್ವಾತಂತ್ರ್ಯವಿದೆ ಎಂಬುದನ್ನೇ ಮರೆತಿದ್ದಾರೆ. ಅನೇಕ ಸದ್ಗೃಹಸ್ಥರು ಕೂಡ ಮಹಿಳೆಯ ವಿಚಾರದಲ್ಲಿ ಇಂಥದೇ ಭಾವನೆಯನ್ನು ಹೊಂದಿದ್ದಾರೆ. ಈ ಮನಸ್ಥಿತಿಯನ್ನು ಡಕ್ಕೆಯ ಬೊಮ್ಮಣ್ಣ ವಿವರಿಸುವ ಕ್ರಮ ಸೂಚ್ಯವಾಗಿದ್ದು ಅರಿಯುವ ಮನಸ್ಸುಳ್ಳವರ ಮೇಲೆ ಆಳವಾದ ಪರಿಣಾಮ ಬೀರುವುದು.
ಸತಿಯಿಂದ ಬರುವ ಗುಹ್ಯರೋಗ ಮುಂತಾದವುಗಳು ಪತಿಯ ಬದುಕನ್ನೇ ಹಾಳು ಮಾಡಬಲ್ಲವು. ಇಂಥ ಕಾರಣಗಳನ್ನು ಒಡ್ಡಿ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣಿಗೆ ಲೈಂಗಿಕ ತಿಳಿವಳಿಕೆ ಬರುವ ಮೊದಲೇ ಮದುವೆ ಮಾಡುವ ಪದ್ಧತಿಯನ್ನು ತಂದಿತು. ಆದರೆ ಪತಿಯಿಂದ ಬಂದ ಸೋಂಕಿನಿಂದಾಗಿ ಇಂದು ಅನೇಕ ಸತಿಯರು ಏಡ್ಸ್ ರೋಗಕ್ಕೆ ಬಲಿಯಾಗಿದ್ದಾರೆ.
ಎರಡು ಕಣ್ಣುಗಳಲ್ಲಿ ಒಂದು ಕಡೆಯ ಕಣ್ಣು ಸರಿ ಇದ್ದು ಇನ್ನೊಂದು ಕಡೆಯ ಕಣ್ಣಿಗೆ ಸೋಂಕಾದರೆ ಸರಿಯಾದ ಕಣ್ಣಿಗೂ ಸೋಂಕು ತಗಲುವುದು. ಆಗ ಹಾನಿ ಯಾರಿಗೆ ಎಂಬುದು ಅರಿತಾಗಲೇ ಅಂದರೆ ಸತಿಪತಿಗಳು ಸಮಾನತೆಯ ದೃಷ್ಟಿ ಹೊಂದಿದಾಗಲೇ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಅವರ ಇರುವಿಕೆ ತೃಪ್ತಿಕರವಾಗುವುದು.