ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ

ವಚನ ಬೆಳಕು; ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ

ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ

ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ,
ಪರಿಣಾಮವೆ ತಪ, ಸಮತೆಯಿಂಬುದೆ ಯೋಗದಾಗು ನೋಡಾ.
ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ
ಮಹಾಲಿಂಗ ಕಲ್ಲೇಶ್ವರದೇವರು ನಗುವರು.
                                                                 -ಹಾವಿನಾಳ ಕಲ್ಲಯ್ಯ
’ಅರಿವೆ ಗುರು’ ಮತ್ತು ’ಕಾಯಕವೆ ಕೈಲಾಸ’ ಎಂಬುವು ಲಿಂಗವಂತ ಧರ್ಮದ ಎರಡು ಬಹು ಪ್ರಚಲಿತ ಘೋಷವಾಕ್ಯಗಳು. ’ಅರಿವೆ ಗುರು’ ಎಂದು ಹಾವಿನಾಳ ಕಲ್ಲಯ್ಯ ಮತ್ತು ಮುಕ್ತಾಯಕ್ಕ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಅದೇ ರೀತಿ ’ಕಾಯಕವೆ ಕೈಲಾಸ’ ಎಂಬ ಘೋಷವಾಕ್ಯವನ್ನು ಆಯ್ದಕ್ಕಿ ಮಾರಯ್ಯ ಮತ್ತು ಮನಸಂದ ಮಾರಯ್ಯನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ.
ಬಸವಣ್ಣನವರ ವಚನವೊಂದರಲ್ಲಿ ’ಕಾಯವೇ ಕೈಲಾಸ’ ಎಂದು ಬರುತ್ತದೆ. ಕಾಯಕ ಮತ್ತು ಕೈಲಾಸ ಪದಗಳನ್ನು ಅನೇಕ ವಚನಕಾರರು ಬಳಸಿದ್ದಾರೆ. ಅದೇ ರೀತಿ ಅರಿವು ಮತ್ತು ಗುರು ಶಬ್ದಗಳನ್ನೂ ಬಳಸಿದ್ದಾರೆ. ಆದರೆ ಈ ಘೋಷವಾಕ್ಯಗಳು ಬೇರೆ ಯಾರಲ್ಲಿಯೂ ಸಿಗುವುದಿಲ್ಲ.
ಅರಿವು ಗುರುವಾದಾಗ ಅದನ್ನು ಆಚರಣೆಯಲ್ಲಿ ತರುವ ಮನಸ್ಸೇ ಶಿಷ್ಯನ ಸ್ಥಾನ ಪಡೆಯುತ್ತದೆ. ಈ ಅರಿವು ಮತ್ತು ಆಚರಣೆಗೆ ಲಿಂಗವು ಜ್ಞಾನರೂಪದಲ್ಲಿದೆ. ಹೀಗೆ ಲಿಂಗವಂತ ಧರ್ಮದಲ್ಲಿ ನಡೆ ನುಡಿ ಸಿದ್ಧಾಂತವಾದಾಗ ಅದರ ಪರಿಣಾಮವೇ ತಪ ಎನಿಸಿಕೊಳ್ಳುತ್ತದೆ.
ಸಮತೆ ಎಂಬುದು ಯೋಗದಿಂದ ಒದಗಿ ಬರುವಂಥದ್ದು. ಮನಸ್ಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸಿ ತದೇಕಚಿತ್ತದಿಂದ ಧ್ಯಾನಸ್ಥನಾಗುವುದೇ ಯೋಗ. ಇದುವೆ ಲಿಂಗವಂತ ಧರ್ಮದಲ್ಲಿ ಲಿಂಗಾಂಗಸಾಮರಸ್ಯ. ಆತ್ಮವು ಪರಮಾತ್ಮನೊಂದಿಗೆ ಒಂದಾಗುವ ಲಿಂಗಾಂಗಸಾಮರಸ್ಯ ಸಕಲಜೀವಾತ್ಮರಿಗೆ ಲೇಸನೆ ಬಯಸುವ ಮನಸ್ಥಿತಿಯನ್ನು ಸೃಷ್ಟಿಸುವುದು. ಆಗ ದಯವೇ ಧರ್ಮದ ಮೂಲವಾಗುವುದು.
ಹೀಗೆ ಸರ್ವಜೀವದಯಾಪಾರಿಯಾಗುವ ಸ್ಥಿತಿಯೆ ಸಮತೆಯ ಸ್ಥಿತಿ. ಇದು ಧಾರ್ಮಿಕ, ಪಾರಮಾರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಒಳಗೊಂಡಿರುತ್ತದೆ. ಎಲ್ಲ ದುರಂತಗಳ ಮೂಲವಾದ ಖಾಸಗಿ ಆಸ್ತಿಗೆ ಇಲ್ಲಿ ಸ್ಥಾನವಿಲ್ಲ. ನರನ ಸಂಗ್ರಹಬುದ್ದಿಯಿಂದ ಉತ್ಪನ್ನವಾಗುವ ಎಲ್ಲ ರೀತಿಯ ಅಸಮಾನತೆಗಳಿಗೆ ಶರಣರ ಸಮತಾ ತತ್ತ್ವ ವಿರುದ್ಧವಾಗಿದೆ.
ಕಾರ್ಲ್ ಮಾರ್ಕ್ಸ್ ಅವರ ಆರ್ಥಿಕ ಸಮಾನತೆ ಮತ್ತು ಅಂಬೇಡ್ಕರರ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆಯನ್ನು ಇದು ಒಳಗೊಂಡಿದೆ. ಇದೆಲ್ಲವನ್ನು ತಿಳಿದುಕೊಳ್ಳದೆ ಕಾವಿ ವೇಷಧರಿಸಿ, ಕೂದಲುದುರಿ ತಲೆ ಬೋಳುಮಾಡಿಕೊಂಡರೆ ದೇವರ ದೃಷ್ಟಿಯಲ್ಲಿ ಹಾಸ್ಯಾಸ್ಪದವೆನಿಸುವುದು ಎಂದು ಹಾವಿನಾಳ ಕಲ್ಲಯ್ಯನವರು ಎಚ್ಚರಿಸಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *