ಸತಿಪತಿಗಳೊಂದಾದ ಭಕ್ತಿ
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥಾ
-ಜೇಡರ ದಾಸಿಮಯ್ಯ
ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ವಚನಗಳಲ್ಲಿ ಜೀವನಶ್ರದ್ಧೆ ಮತ್ತು ಕುಟುಂಬ ಪ್ರೀತಿ ಮಡುಗಟ್ಟಿವೆ. ವ್ಯಕ್ತಿ, ಕುಟುಂಬ, ಸಮಾಜ ಮತ್ತು ವಿಶ್ವ ಈ ನಾಲ್ಕೂ ಅಂಶಗಳನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಂಡು ಸಹಬಾಳ್ವೆ ನಡೆಸಬೇಕಾಗುತ್ತದೆ. ಶರಣರ ಗುರಿ ಸಹಬಾಳ್ವೆಯ ಧರ್ಮವನ್ನು ಸ್ಥಾಪಿಸುವುದೇ ಆಗಿತ್ತು. ಕುಟುಂಬದಲ್ಲಿ, ಸಮಾಜದಲ್ಲಿ ಮತ್ತು ಸಕಲ ಜೀವರಾಶಿಯೊಂದಿಗೆ ಸಹಬಾಳ್ವೆ ಮಾಡುವ ಕಲೆಯನ್ನು ಶರಣಧರ್ಮ ಕಲಿಸುತ್ತದೆ. ಸ್ತ್ರೀ ಪುರುಷ ಸಮಾನತೆಯೊಂದಿಗೆ ವ್ಯಕ್ತಿಸ್ವಾತಂತ್ರ್ಯ, ಕೌಟುಂಬಿಕ ಜವಾಬ್ದಾರಿ, ಸಾಮಾಜಿಕ ಕಾಳಜಿ ಮತ್ತು ವಿಶ್ವಪ್ರಜ್ಞೆ ಮೂಲಕ ಶರಣಧರ್ಮ ವಿಶ್ವಮಾನವಧರ್ಮವಾಗುತ್ತದೆ. ಕೃಷಿ ಸಂಸ್ಕೃತಿಯ ಜನಪದ ಧರ್ಮ ಶರಣರ ಅಂತಃಕರಣದಿಂದ ವಿಶ್ವಧರ್ಮವಾಯಿತು. ಇಂಥ ಧರ್ಮಕ್ಕೆ ಬುನಾದಿಯನ್ನು ಹಾಕಿದವರಲ್ಲಿ ಜೇಡರ ದಾಸಿಮಯ್ಯನವರು ಹಿರಿಯರು. ಅವರ ಶೈಲಿ ಕೂಡ ಜಾನಪದೀಯವಾಗಿದೆ. ಅವರ ವಚನಗಳ ಮೇಲೆ ತ್ರಿಪದಿಯ ಪ್ರಭಾವವಿದೆ.
ಸರಳತೆ ಮತ್ತು ತಿಳಿವಳಿಕೆಯಿಂದ ಕೂಡಿದ ದಾಂಪತ್ಯವು ಕರಕಷ್ಟ ಬದುಕಿನಲ್ಲಿ ಕೂಡ ನೆಮ್ಮದಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಸತ್ಯವನ್ನು ಜೇಡರ ದಾಸಿಮಯ್ಯನವರು ತಮ್ಮ ಈ ವಚನದಲ್ಲಿ ದಾಖಲಿಸಿದ್ದಾರೆ. ಶರಣಧರ್ಮವು ಸತಿಪತಿ ಧರ್ಮವೇ ಆಗಿದೆ. ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಾದ ಸತಿಪತಿಗಳ ಆತ್ಮಸಾಂಗತ್ಯದ ಭಕ್ತಿ ಮಂಗಳಮಯವಾದ ಶಿವನಿಗೆ ಹಿತ ಎನಿಸುವುದು. ಹಿತಕರವಾದ ದಾಂಪತ್ಯವು ಐಹಿಕ ವಸ್ತುಗಳ ಕೊರತೆಯನ್ನು ಕೂಡ ನಿವಾರಿಸುವಂಥ ಅರಿವನ್ನು ಮೂಡಿಸುತ್ತದೆ. ಏನೇ ಬಂದರೂ ತೃಪ್ತಭಾವದಿಂದ ಸ್ವೀಕರಿಸುವ ಸಂಯಮವನ್ನು ಸೃಷ್ಟಿಸುತ್ತದೆ. ’ಬಂದುದನರಿದು ಬಳಸುವಳು, ಬಂದುದ ಪರಿಣಾಮಿಸುವಳು, ಬಂಧು ಬಳಗವ ಮರಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥಾ.’ ಎಂದು ಜೇಡರ ದಾಸಿಮಯ್ಯನವರು ಇನ್ನೊಂದು ವಚನದಲ್ಲಿ ಧರ್ಮಪತ್ನಿ ದುಗ್ಗಳೆಯ ಗುಣಗಾನ ಮಾಡಿದ್ದಾರೆ. ಅವರ ಅನ್ಯೋನ್ಯ ದಾಂಪತ್ಯವು ‘ಜೀವಭೇದವಿಲ್ಲ’ ಎಂಬ ಮೂಲತತ್ತ್ವದ ಸಂಕೇತವಾಗಿದೆ. ‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ! ರಾಮನಾಥಾ.’ ಎಂದು ದಾಸಿಮಯ್ಯನವರು ಮತ್ತೊಂದು ವಚನದಲ್ಲಿ ತಿಳಿಸಿದ್ದಾರೆ.
‘ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ’ ಎಂದು ಹೇಳುವಲ್ಲಿ ಅವರು ಸ್ತ್ರೀವಾದಿ ನಿಲುವನ್ನು ತಾಳಿದ್ದಾರೆ. ಅಂತೆಯೆ ಸತಿ ಪತಿ ಒಂದಾಗುವಲ್ಲಿ ಪತಿಯ ಪಾತ್ರವೇ ಮುಖ್ಯ ಎಂಬುದನ್ನು ಸೂಚಿಸುತ್ತಾರೆ. ಸತಿಯ ಇಚ್ಛೆಯನ್ನರಿಯದೆ ಬದುಕುವ ಪತಿಯ ಭಕ್ತಿ ಅಮೃತದಲ್ಲಿ ವಿಷ ಕೂಡಿಸಿದಂತೆ ಎಂದು ಎಚ್ಚರಿಸಿದ್ದಾರೆ..