ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;  ಆವ ಬೀಜ

ವಚನ ಬೆಳಕು; ಆವ ಬೀಜ

 ಆವ ಬೀಜ

ಆವ ಬೀಜವು ಬೀಳುವಲ್ಲಿ ಮೊಳೆ ಮುಖ ಹಿಂಚುಮುಂಚುಂಟೆ?
ನೀ ಮರೆದಲ್ಲಿ ನಾನರಿದಲ್ಲಿ ಬೇರೊಂದೊಡಲುಂಟೆ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ?
ಬೇರೊಂದಡಿ ಇಡದಿರು ಮಾರಯ್ಯಪ್ರಿಯ
ಅಮಲೇಶ್ವರ ಲಿಂಗವನರಿಯಬಲ್ಲಡೆ.
                                                     -ಆಯ್ದಕ್ಕಿ ಲಕ್ಕಮ್ಮ
’ಅರಿವು’ ಎಂಬುದು ಅಚ್ಚ ಕನ್ನಡ ಪದವಾಗಿದೆ. ಲಿಂಗವಂತ ಧರ್ಮದ ಅತ್ಯುನ್ನತ ಪದ. ಅಷ್ಟಾವರಣ, ಷಟ್‌ಸ್ಥಲ, ಪಂಚಾಚಾರ, ಲಿಂಗಾಂಗಸಾಮರಸ್ಯ, ಅನುಭಾವ ಹೀಗೆ ಇವೆಲ್ಲ ಸಾಧನೆಗಳ ನಂತರ ಸಿಗುವಂಥದ್ದೇ ಅರಿವು. ಈ ಅರಿವೆ ಗುರು. ಆ ಗುರುಪಥವೇ ದೇವಪಥಕ್ಕೆ ಒಯ್ಯುವಂಥದ್ದು. ಆದ್ದರಿಂದ ಅರಿವು ಎಂಬುದು ಒಳಗಿನ ಪ್ರಜ್ಞೆ. ಅನುಭವದ ಮೂಲಕ ಬರುವ ಅನುಭಾವದಿಂದ ಪಡೆಯುವಂಥದ್ದು. ಸತಿಯ ಒಡಲಲ್ಲಿ ಮತ್ತು ಪತಿಯ ಒಡಲಲ್ಲಿ ಸೃಷ್ಟಿಯಾಗುವ ಅರಿವು ಬೇರೆ ಅಲ್ಲ. ಆದ್ದರಿಂದ “ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದು ಒಡಲುಂಟೆ” ಎಂದು ಆಯ್ದಕ್ಕಿ ಲಕ್ಕಮ್ಮ ಕೇಳುತ್ತಾಳೆ. ಸೃಷ್ಟಿಕ್ರಿಯೆಗಾಗಿ ಸತಿ ಪತಿ ಎಂಬ ಭೇದ ಇದ್ದರೂ ಆ ಸತಿ ಪತಿ ಒಳಗಿರುವ ಆತ್ಮ ಒಂದೇ.
ಬೀಜವೊಂದು ಭೂಮಿಗೆ ಬಿದ್ದಾಗ ಅದಕ್ಕೆ ಮೊಳಕೆ ಮುಖ ಎಂಬ ಹಿಂದೆ ಮುಂದೆ ಉಂಟೆ ಎಂದು ಲಕ್ಕಮ್ಮ ಪ್ರಶ್ನಿಸಿದ್ದಾಳೆ. ಬೀಜ ಹೇಗೆ ಬಿದ್ದರೂ ಮೊಳಕೆಯೊಡೆಯುತ್ತದೆ. ಹೆಣ್ಣು ಗಂಡು ಯಾರೇ ಇದ್ದರೂ ಅರಿವು ಮೂಡೇ ಮೂಡುತ್ತದೆ. ಏಕೆಂದರೆ ಅರಿವಿಗೆ ಹೆಣ್ಣು ಗಂಡೆಂಬ ಭೇದಭಾವವಿಲ್ಲ. ನೀನು ಮರೆತಲ್ಲಿ, ನಾನು ಅರಿತಲ್ಲಿ ಬೇರೊಂದು ದೇಹವುಂಟೆ? ಎನ್ನುವ ಲಕ್ಕಮ್ಮ, ಹೆಣ್ಣು ಗಂಡು ಎಂಬ ಭೇದವಿಲ್ಲದ ಮೂಲ ಅರಿವು ಆಗದೆ ಇದ್ದಾಗ ಅಂದರೆ ಒಳಗಿನ ಪ್ರಜ್ಞೆಯು ಮೂಡದೆ ಇದ್ದಾಗ ವ್ಯಕ್ತಿತ್ವ ವಿಕಸನವಾಗುವುದು ನಿಲ್ಲುತ್ತದೆ. ಅರಿವನ್ನು ಒಬ್ಬರು ಮರೆತು ಇನ್ನೊಬ್ಬರು ಮರೆಯದೆ ಇದ್ದಾಗ, ಆ ಮರೆಯದವರು ಬೇರೊಂದು ಪ್ರಕಾರದ ಅರಿವನ್ನು ಹೊತ್ತ ದೇಹ ಹೊಂದಿದ್ದಾರೆ ಎಂಬುದು ಸುಳ್ಳು.
“ಬೇರೊಂದು ಅಡಿಯನಿಡದಿರು ಮಾರಯ್ಯಪ್ರಿಯ ಅಮಲೇಶ್ವರ ಲಿಂಗವನರಿಯಬಲ್ಲಡೆ” ಎಂದು ಲಕ್ಕಮ್ಮ ತಿಳಿಹೇಳುತ್ತಾಳೆ. ಲಿಂಗದ ಅರಿವು ಉಂಟಾಗಬೇಕಾದರೆ ಲಿಂಗಭೇದವೆಂಬ ಅನಾಗರಿಕ ಪದ್ಧತಿ ಯನ್ನು ಬಿಡಬೇಕು ಎಂದು ಆಕೆ ಸೂಚಿಸಿದ್ದಾಳೆ.
ಹೆಣ್ಣು ಮೋಕ್ಷಹೊಂದಬೇಕೆಂದರೆ ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಬೇಕೆಂದು ಕೆಲ ಧರ್ಮಗಳು ಹೇಳುತ್ತವೆ. ಆದರೆ ಲಿಂಗವಂತಧರ್ಮದಲ್ಲಿ ಹೆಣ್ಣು ಗಂಡು ಎಂಬ ಭೇದಭಾವವಿಲ್ಲ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *