ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು   ಶ್ವೇತ ಪೀತ ಕಪೋತ

ವಚನ ಬೆಳಕು ಶ್ವೇತ ಪೀತ ಕಪೋತ

ಶ್ವೇತ ಪೀತ ಕಪೋತ

ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಠ
ಕಪಿಲಿ ಕರ್ಬುರ ಅಳಗು ಬೊಟ್ಟಳಗ
ಇಂತೀ ದಶವರ್ಣದ ಪಶುನಾಮದ ಅಸುವನರಿತು
ಸಂಜ್ಞೆ ಗರ್ಜನೆ ತಾಡನೆ ತ್ರಿವಿಧ ಭೇದಂಗಳಿAದ
ಕಾದೊಪ್ಪಿಸಬೇಕು ಗೋಪಿನಾಥ ವಿಶ್ವೇಶ್ವರಲಿಂಗಕ್ಕೆ.
-ತುರುಗಾಹಿ ರಾಮಣ್ಣ

ವಚನಕಾರರನೇಕರು ತಮ್ಮತಮ್ಮ ಕಾಯಕಗಳಿಂದ ಪಡೆದ ಅನುಭವವನ್ನು ಕಾಯಕದ ಪರಿಭಾಷೆಯಲ್ಲೇ ಅನುಭಾವಕ್ಕೇರಿಸುವ ಕ್ರಮವನ್ನು ಅನುಸರಿಸಿದ್ದಾರೆ. ಶರಣರ ಗೋವುಗಳನ್ನು ಕಾಯುವ ಕಾಯಕದ ಅನುಭವದ ಮೂಲಕವೇ ತುರುಗಾಹಿ ರಾಮಣ್ಣ ಅನುಭಾವದ ದರ್ಶನ ಮಾಡಿಸುತ್ತಾನೆ.
ಬಿಳಿ, ಹಳದಿ, ಕಂದು, ಕಪ್ಪು, ಹೊಂಬಣ್ಣ, ಕೆಂಬಣ್ಣ, ಬೂದು, ಮಿಶ್ರವರ್ಣ, ಹವಳವರ್ಣ ಮತ್ತು ಮೈಮೇಲೆ ಚುಕ್ಕೆಗಳಿರುವ ಹವಳ ವರ್ಣ, ಹೀಗೆ ಹತ್ತು ಬಣ್ಣಗಳ ಪಶುಗಳನ್ನು ಹತೋಟಿಯಲ್ಲಿಡುವುದನ್ನು ತಿಳಿದುಕೊಂಡು ಕೆಲವೊಂದಕ್ಕೆ ಸನ್ನೆಯಿಂದ, ಇತರ ಕೆಲವೊಂದಕ್ಕೆ ಗಟ್ಟಿಯÁಗಿ ಕೂಗಿ, ಮತ್ತೆ ಕೆಲವೊಂದಕ್ಕೆ ತಟ್ಟಿ, ಹೀಗೆ ಮೂರು ಪ್ರಕಾರದಲ್ಲಿ ಕಾಯ್ದು ಗೋಪಿನಾಥ ವಿಶ್ವೇಶ್ವರಲಿಂಗಕ್ಕೆ ಸುರಕ್ಷಿತವಾಗಿ ಒಪ್ಪಿಸುವುದು ತನ್ನ ಕರ್ತವ್ಯವೆಂದು ಹೇಳುತ್ತಾನೆ. ಈ ರೀತಿ ಹೇಳುವ ಮೂಲಕವೇ ತುರುಗಾಹಿ ರಾಮಣ್ಣ ಜೀವಾತ್ಮ – ಪರಮÁತ್ಮ ಸಂಬAಧವನ್ನು ಕುರಿತು ತಿಳಿಸುತ್ತಾನೆ.
ಆಧ್ಯಾತ್ಮಿಕ ಅರ್ಥದಲ್ಲಿ ಪಶು ಎಂದರೆ ಜೀವಾತ್ಮ, ಪಶುಪತಿ ಎಂದರೆ ಪರಮಾತ್ಮ. ಜೀವಾತ್ಮ- ಪರಮಾತ್ಮ ಸಂಬAಧಕ್ಕೆ ಅಡ್ಡಿಬರುವಂಥ ವಿವಿಧ ಪ್ರವೃತ್ತಿಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಯಾವರೀತಿಯಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವೋ ಆ ರೀತಿಯಲ್ಲಿ ಸ್ವಾಧೀನಪಡಿಸಿಕೊಳ್ಳಬೇಕು. ಅಂದರೆ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಮುಂತಾದ ಪ್ರವೃತ್ತಿಗಳ ಮೇಲೆ ವಿಜಯ ಸಾಧಿಸುತ್ತ ಜೀವಾತ್ಮನು ಪರಮಾತ್ಮನಲ್ಲಿ ಐಹಿಕ ಜಗತ್ತಿನಲ್ಲೇ ಐಕ್ಯವನ್ನು ಸಾಧಿಸುವುದಕ್ಕಾಗಿ ತಲ್ಲೀನವಾಗಬೇಕೆಂಬುದು ತುರುಗಾಹಿ ರಾಮಣ್ಣನ ಆಶಯವಾಗಿದೆ. ದೈನಂದಿನ ಬದುಕಿನಲ್ಲಿ `ಪಶು’ ಎಂಬುದನ್ನು ಆತ ಪ್ರವೃತ್ತಿಗೆ ಹೋಲಿಸುತ್ತಾನೆ. ಆದರೆ ಅನುಭಾವದ ಬದುಕಿನಲ್ಲಿ ಜೀವಾತ್ಮಕ್ಕೆ ಹೋಲಿಸುತ್ತಾನೆ. ಪಶುಪತಿಯ ಪಶುವಾದ ಜೀವಾತ್ಮನು ದೈನಂದಿನ ಬದುಕಿನ ಪ್ರವೃತ್ತಿಗಳೆಂಬ ಪಶುಗಳನ್ನು ಅತ್ತ ಇತ್ತ ಹೋಗದಂತೆ ಹದ್ದುಬಸ್ತಿನಲ್ಲಿಟ್ಟುಕೊಂಡು ಅವುಗಳನ್ನೆಲ್ಲ ಪರಮಾತ್ಮನಿಗೆ ಒಪ್ಪಿಸುವುದು ಎಂದರೆ ಪರಿಶುದ್ಧವಾಗಿ ಬದುಕುವುದು. ಇಂಥ ಪರಿಶುದ್ಧ ಬದುಕೇ ಮಾನವನ ಗುರಿಯಾಗಬೇಕು ಎಂಬುದನ್ನು ತುರುಗಾಹಿ ರಾಮಣ್ಣ ಸೂಚಿಸುತ್ತಾನೆ.
`ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು …’ ಎಂದು ಆತ ತನ್ನ ಇನ್ನೊಂದು ವಚನದಲ್ಲಿ ವಿವರಿಸಿದ್ದಾನೆ. ದನಗಾಹಿಯು ಒಂದೇ ಕೋಲಿನಿಂದ ಎಲ್ಲ ತೆರನಾದ ಗೋವುಗಳನ್ನು ತಡೆದು ನಿಲ್ಲಿಸುತ್ತಾನೆ. ಅದೇ ರೀತಿ ಪ್ರತಿಯೊಬ್ಬ ಮನುಷ್ಯ ತನ್ನ ಹಲವು ಹದಿನೆಂಟು ಇಂದ್ರಿಯವಿಕಾರಗಳೆ0ಬ ದನಗಳನ್ನು ಏಕಚಿತ್ತವೆಂಬ ಕೋಲಿನಿಂದ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸುತ್ತಾನೆ.

ವಚನ -ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *