ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;                 ಒಡಲುಗೊಂಡವ ಹಸಿವ

ವಚನ ಬೆಳಕು; ಒಡಲುಗೊಂಡವ ಹಸಿವ

ಒಡಲುಗೊಂಡವ ಹಸಿವ

ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರ.
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-ಜೇಡರ ದಾಸಿಮಯ್ಯ

ಈಗಿನ ಗುಲ್ಬರ್ಗಾ ಜಿಯ ಸುರಪುರ ತಾಲ್ಲೂಕಿನ ಮುದನೂರಿನಲ್ಲಿದ್ದು ನೆಯ್ಗೆಯ ಕಾಯಕದೊಂದಿಗೆ ಆದ್ಯ ವಚನಕಾರರಾಗಿ ಪ್ರಸಿದ್ಧರಾದವರು ಜೇಡರ ದಾಸಿಮಯ್ಯನವರು. ಅವರ ಆರಾಧ್ಯದೈವ ರಾಮನಾಥನ ದೇವಾಲಯ ಮುದನೂರಿನಲ್ಲಿದೆ. ಕಾಮಯ್ಯ ಶಂಕರಿಯರ ಮಗ ದಾಸಿಮಯ್ಯನವರ ಅನುರೂಪದ ಪತ್ನಿ ದುಗ್ಗಳೆ. ಕಲ್ಯಾಣ ಚಳವಳಿಯ ಸೆಲೆಯನ್ನು ದಾಸಿಮಯ್ಯನವರ ಸರಳ ಸುಂದರ ಕಾವ್ಯಾತ್ಮಕ ವಚನಗಳಲ್ಲಿ ಕಾಣಬಹುದು. ಇವೆಲ್ಲವುಗಳಿಗಿಂತ ಹೆಚ್ಚಾಗಿ ಅವರ ವಚನಗಳು ಸಾಂಸಾರಿಕ ಮತ್ತು ಸಾಮಜಿಕ ಮೌಲ್ಯಗಳನ್ನು ಒಳಗೊಂಡಿವೆ. ದಾಂಪತ್ಯದ ಮಹತ್ವವನ್ನು ಸಾರುವ ಮತ್ತು ಬಡವರ ಪರವಾಗಿ ನಿಂತು ಆರಾಧ್ಯ ದೇವನನ್ನು ಎದುರಿಸುವ ಅವರ ವಚನಗಳಲ್ಲಿ ಮಾನವಸಂಬಂಧಗಳ ಸ್ಪಂದನವಿದೆ.
ದೇವರು ನಿರಾಕಾರನಾಗಿದ್ದಾನೆ. ಹಸಿವು ತೃಷೆಗಳು ಆತನ ಬಳಿ ಸುಳಿಯಲಾರವು. ಆದರೆ ಜನ ಲೌಕಿಕ ಜಗತ್ತಿನಲ್ಲಿದ್ದಾರೆ. ಅವರಿಗೆ ಹಸಿವು ನೀರಡಿಕೆಗಳಾಗುತ್ತವೆ. ಬಡವರಿಗಂತೂ ಹೊಟ್ಟೆ ತುಂಬಿಸಿಕೊಳ್ಳುವುದೇ ದೈನಂದಿನ ಸಮಸ್ಯೆಯಗಿರುತ್ತದೆ. ಹೊಟ್ಟೆಪಾಡಿಗಾಗಿ ಕೆಲವರು ಸುಳ್ಳು ಹೇಳುವುದು ಸಹಜವಾಗಿದೆ. ದಾಸಿಮಯ್ಯನವರು ಅಂಥ ನಿರ್ಗತಿಕರ ಪರವಾಗಿ ನಿಂತು ದೇವರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆ ಕಡುಬಡವರ ಧ್ವನಿಯಗಿ ದೇವರನ್ನು ಪ್ರಶ್ನಿಸುತ್ತಾರೆ. ನಾನು ಹಸಿಯುವ ದೇಹವುಳ್ಳವನೆಂದು ಗದರಿಸಿ ಮಾತನಾಡಬೇಡ ಎಂದು ದೇವರಿಗೆ ಎಚ್ಚರಿಕೆ ನೀಡುತ್ತಾರೆ. ನೀನೂ ನನ್ನ ಹಾಗೆ ಒಂದುಸಲವಾದರೂ ದೇಹವನ್ನು ಧರಿಸಿ ನೋಡು. ಆಗ ನಿನಗೆ ಹಸಿವಿನ ಸಮಸ್ಯೆಯ ಅರಿವಾಗುತ್ತದೆ. ನೀನು ಕೂಡ ಸುಳ್ಳು ಹೇಳುವ ಪ್ರಸಂಗ ಬರುತ್ತದೆ. ಆಗ ದೇಹ ಹೊಂದಿದವರ ಸಮಸ್ಯೆಗಳ ಅರಿವಾಗುತ್ತದೆ ಎಂದು ದಾಸಿಮಯ್ಯನವರು ದೇವರಿಗೆ ಸವಾಲು ಹಾಕುತ್ತಾರೆ.
ಹೀಗೆ ಅವರು ಬಡವರ ಪಕ್ಷ ವಹಿಸುತ್ತಾರೆ. ಬಡವರ ಅಸಹಾಯಕ ಬದುಕಿನ ಬಗ್ಗೆ ಅವರು ಸ್ಪಂದಿಸಿದ ಕ್ರಮ ಹೃದಯಸ್ಪರ್ಶಿಯಾಗಿದೆ. ದೇವರ ಪಕ್ಷಪಾತಿಯಾಗದೆ ಬಡವರ ಪಕ್ಷಪಾತಿಯಾಗುವ ಅವರ ವ್ಯಕ್ತಿತ್ವ ಅನನ್ಯವಾಗಿದೆ.
ದೇವರ ಜೊತೆ ಇಷ್ಟೊಂದು ತಕರಾರು ಮಾಡುವ ಜೇಡರ ದಾಸಿಮಯ್ಯನವರು “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ.” ಎಂದು ದೇವರನ್ನು ಕೊಂಡಾಡುತ್ತಾರೆ.
ದೇವರಲ್ಲಿ ಸಂಪೂರ್ಣ ನಂಬಿಕೆ ಇಟ್ಟು ಯಾವುದಕ್ಕೂ ಹಿಂಜರಿಯದ ಮಹಾತ್ಮರು ಮಾತ್ರ ದುಃಖಾರ್ತರ ಪರವಾಗಿ ದೇವರ ಜೊತೆಗೂ ವಾಗ್ವಾದಕ್ಕಿಳಿಯುವ ಅದಮ್ಯ ಆತ್ಮಶಕ್ತಿಯನ್ನು ಹೊಂದಿದವರಾಗಿರುತ್ತಾರೆ. ಸರ್ವಜೀವ ದಯಾಪಾರರಾಗಿರುತ್ತಾರೆ. ನಡೆದಾಡುವ ದೇವರೇ ಆಗಿರುತ್ತಾರೆ. ಜೇಡರ ದಾಸಿಮಯ್ಯನವರು ಇಂಥ ನಡೆದಾಡುವ ದೇವರಾಗಿದ್ದರು. ಅಂತಃಕರಣದ ಸಾಕಾರ ಮೂರ್ತಿಯಾಗಿದ್ದರು.

ವಚನ -ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *