ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;               ಆಸೆಯೆಂಬುದು

ವಚನ ಬೆಳಕು; ಆಸೆಯೆಂಬುದು

ಆಸೆಯೆಂಬುದು

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ.
-ಆಯ್ದಕ್ಕಿ ಲಕ್ಕಮ್ಮ

ವಸ್ತುಮೋಹ ಎಂಬುದು ಬಲಾಢ್ಯರ, ಧನಾಢ್ಯರ ಮತ್ತು ಸಾಮ್ರಾಜ್ಯಶಾಹಿಗಳ ಮನದಾಳದಲ್ಲಿ ಇರುತ್ತದೆ. ಸಂಪತ್ತು ಹೆಚ್ಚಿದಷ್ಟೂ ಸಾಮ್ರಾಜ್ಯ ವಿಸ್ತರಣೆಯಾದಷ್ಟೂ ಅವರ ದಾಹ ಹೆಚ್ಚಾಗುತ್ತಲೇ ಹೋಗುತ್ತದೆ. ಅವರು ಪರರನ್ನು ಶೋಷಿಸುವ ಮೂಲಕ ಸಂಪತ್ತಿನ ವಿಸ್ತರಣೆ ಮಾಡುತ್ತ ಹೋಗುತ್ತಾರೆ. ಆದರೆ ಶಿವಭಕ್ತರು ತಮ್ಮ ಸ್ವಕಾಯಕದ ಮೇಲೆ ಅವಲಂಬಿತರಾಗಿರುತ್ತಾರೆ. ಗಳಿಸಿದ್ದರಲ್ಲಿ ತಮಗೆ ಬೇಕಾದಷ್ಟನ್ನು ಮಾತ್ರ ಪ್ರಸಾದವೆಂದು ಸ್ವೀಕರಿಸಿ ಉಳಿದೆಲ್ಲವನ್ನೂ ದಾಸೋಹ ರೂಪದಲ್ಲಿ ಶರಣಸಂಕುಲಕ್ಕೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಯಾರೊಬ್ಬರ ಬಳಿಯೂ ಸಂಪತ್ತಿನ ಸಂಗ್ರಹವಾಗುವುದಿಲ್ಲ.
ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ದಂಪತಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಡೋಣಿ ಗ್ರಾಮದವರು. ಗ್ರಾಮಕ್ಕೆ ಸಮೀಪದ ದೇವರಭೂಪುರ ಗ್ರಾಮದ ಅಮರೇಶ್ವರಲಿಂಗದ ಭಕ್ತರಾಗಿದ್ದರು. ಕಲ್ಯಾಣದಲ್ಲಿ ಶರಣರು ನವಸಮಾಜ ನಿರ್ಮಾಣ ಮಾಡುತ್ತಿದ್ದ ಸುದ್ದಿ ಕೇಳಿ ಕಲ್ಯಾಣಕ್ಕೆ ಬಂದು ಶರಣಸಂಕುಲದ ಭಾಗವಾಗಿ, ಶ್ರೇಷ್ಠ ವಚನಕಾರರಾಗಿ ಅಮರರಾದರು.
ಬಸವಣ್ಣನವರ ಕಾಯಕ ತತ್ತ್ವದ ಮೇಲೆ ಬೆಳಕು ಚೆಲ್ಲಿದ ದಂಪತಿ ಇವರು. ಮಹಾಮನೆಯ ಅಂಗಳ ಮುಂತಾದ ಕಡೆಗಳಲ್ಲಿ ಚೆಲ್ಲಿದ ಅಕ್ಕಿಯನ್ನು ಮಾರಯ್ಯ ದಂಪತಿ ಆಯ್ದುತಂದು ಜೀವನ ನಿರ್ವಹಣೆ ಮತ್ತು ದಾಸೋಹ ಮಾಡುತ್ತಿದ್ದರು. ಗಹನವಾದ ಅನುಭಾವದ ಚಿಂತನ ಮಂಥನದೊಂದಿಗೆ ಸಾತ್ವಿಕ ಬಾಳನ್ನು ಬಾಳುತ್ತಿದ್ದರು. ಒಂದುದಿನ ಶಿವಾನುಭವ ಗೋಷ್ಠಿಯಲ್ಲಿ ತಲ್ಲೀನನಾಗಿದ್ದ ಮಾರಯ್ಯ ಕಾಯಕಕ್ಕೆ ಹೋಗುವುದಕ್ಕೆ ತಡವಾಗುತ್ತದೆ. “ಕಾಯಕ ನಿಂದಿತ್ತು ಹೋಗಯ ಎನ್ನಾಳ್ದನೆ.” ಎಂದು ಮಾರಯ್ಯನನ್ನು ಲಕ್ಕಮ್ಮ ಎಚ್ಚರಿಸುತ್ತಾಳೆ. ಮಾರಯ್ಯ ಆ ದಿನ ಹೆಚ್ಚಿನ ಅಕ್ಕಿಯನ್ನು ಆಯ್ದು ತರುತ್ತಾನೆ. ಆಗ ಲಕ್ಕಮ್ಮ ಅದಕ್ಕೂ ಎಚ್ಚರಿಸುತ್ತಾಳೆ. “ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ?” ಎಂದು ಪ್ರಶ್ನಿಸುತ್ತಾಳೆ. ಆಸೆ ಎಂಬುದು ರಾಜರ ಸೊತ್ತು; ರೋಷವೆಂಬುದು ಯಮದೂತರ ಸೊತ್ತು ಎಂದು ಗಂಡನಿಗೆ ವಿವರಿಸುತ್ತಾಳೆ. ಆಸೆಯ ರಾಜರನ್ನು ಒಂದೆಡೆ ನಿಲ್ಲಿಸಿ ಆಸೆ ಇಲ್ಲದ ಶರಣರನ್ನು ಅವರೆದುರು ನಿಲ್ಲಿಸುತ್ತಾಳೆ. ಶರಣಧರ್ಮದ ಶ್ರೇಷ್ಠತೆಯನ್ನು ಸಾರುತ್ತಾಳೆ. ಆಸೆಬುರುಕರನ್ನು ದೇವರು ಮೆಚ್ಚುವುದಿಲ್ಲ ಎನ್ನುತ್ತಾಳೆ. “ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು” ಎಂದು ಇನ್ನೊಂದು ವಚನದಲ್ಲಿ ತಿಳಿಸಿದ್ದಾಳೆ. ‘ಆಸೆ ಬೇಡ, ಬದುಕುವ ಧೈರ್ಯ ಬೇಕು, ಸಂಗ್ರಹಬುದ್ಧಿ ಬೇಡ, ಕಾಯಕ-ದಾಸೋಹ ಬೇಕು, ಹಿಂಜರಿಕೆ ಬೇಡ, ಚಿತ್ತಶುದ್ಧಿ ಬೇಕು.’ ಇವು ಕಡುಬಡವಿ ಲಕ್ಕಮ್ಮನ ಮಹೋನ್ನತ ಜೀವನಸಂದೇಶಗಳಾಗಿವೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *