ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;      ಚೆನ್ನಯ್ಯನ ಮನೆಯ ದಾಸನ ಮಗ

ವಚನ ಬೆಳಕು; ಚೆನ್ನಯ್ಯನ ಮನೆಯ ದಾಸನ ಮಗ

ಚೆನ್ನಯ್ಯನ ಮನೆಯ ದಾಸನ ಮಗ

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
-ಬಸವಣ್ಣ

1948ನೇ ಡಿಸೆಂಬರ್ 10ರಂದು ವಿಶ್ವಸಂಸ್ಥೆಯು 30 ಅಂಶಗಳಿಂದ ಕೂಡಿದ ಮಾನವ ಹಕ್ಕುಗಳ ಜಾಗತಿಕ ಘೋಷಣೆಯನ್ನು ಅಂಗೀಕರಿಸಿತು.
ಮಾನವ ಕುಲದ ಇತಿಹಾಸದಲ್ಲಿ ಇದೊಂದು ಮಹತ್ವದ ಘಟನೆ
ಯಾಗಿದೆ. ವಿಶ್ವಸಂಸ್ಥೆ ಗುರುತಿಸಿದ ಮಾನವ ಹಕ್ಕುಗಳು 12ನೇ ಶತಮಾನದ
ಬಸವಣ್ಣನವರ ವಚನಗಳಲ್ಲಿವೆ! ‘ಎಲ್ಲ ಮಾನವರು ಹುಟ್ಟಿನಿಂದಲೇ ಸ್ವತಂತ್ರರು ಮತ್ತು ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು’ ಎಂಬುದು ಮಾನವ ಹಕ್ಕುಗಳ ಜಾಗತಿಕ ಘೋಷಣೆಯ ಮೊದಲ ಅಂಶವಾಗಿದೆ. ಮಾನವರು ಹುಟ್ಟಿನಿಂದಲೇ ಸ್ವತಂತ್ರರು. ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು ಎಂಬುದನ್ನು ಸಾರುವುದಕ್ಕಾಗಿಯೇ ಬಸವಣ್ಣನವರು ಮೇಲಿನ ವಚನವನ್ನು ಬರೆದಿದ್ದಾರೆ.
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಮಾಜದಲ್ಲಿ ಜಾತಿಪ್ರಜ್ಞೆಯ
ಜನ ತಮ್ಮ ಜಾತಿ ಯಾವ ಯಾವ ಜಾತಿಗಳಿಗಿಂತ ಮೇಲು ಎಂಬುದನ್ನು ಲೆಕ್ಕಹಾಕುತ್ತಲೇ ಇರುತ್ತಾರೆ. ಜಾತಿಗಳು ಬಹಳಷ್ಟು ಭಾರತೀಯರ ವ್ಯಕ್ತಿತ್ವದ ಭಾಗವಾಗಿವೆ. ಜಾತಿವ್ಯವಸ್ಥೆಯ ಕೊನೆಯ ಶ್ರೇಣಿಯಲ್ಲಿ ಬರುವ ಅಸ್ಪೃಶ್ಯರನ್ನು ಇಂದಿಗೂ ಕೀಳಾಗಿ ನೋಡಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲ ಜಾತಿಗಳ ವ್ಯವಸ್ಥೆಯನ್ನು ಮೀರಿ ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳ ಗತಿ ಏನು ಎಂಬ ಪ್ರಶ್ನೆ ಬಸವಣ್ಣನವರಿಗೆ ಕಾಡಿದೆ. ಮಾದಾರ ಚೆನ್ನಯ್ಯನವರು ಮತ್ತು ಡೋಹಾರ ಕಕ್ಕಯ್ಯನವರು ಮಹಾನುಭಾವಿಗಳು. ಆದರೆ ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ಇಂಥವರನ್ನು ಕೂಡ ಅಸ್ಪೃಶ್ಯತಾ ಭಾವದಿಂದಲೇ ಕಾಣುತ್ತಾರೆ. ಇನ್ನು ಇಂಥವರ ಮನೆಗಳಲ್ಲಿನ ದಾಸ ದಾಸಿಯರ ವ್ಯಕ್ತಿತ್ವವನ್ನು ಯಾವ ರೀತಿಯಲ್ಲಿ ಪರಿಗಣಿಸಬಹುದು? ಅವರ ಮಕ್ಕಳ ಪರಿಸ್ಥಿತಿ ಏನು? ಕೆಳಜಾತಿಗಳವರ ದಾಸ-ದಾಸಿಯರ ಮಗ ಮತ್ತು ಮಗಳು ಅನೈತಿಕ ಸಂಬಂಧ ಬೆಳೆಸಿದಾಗ ಹುಟ್ಟುವ ಮಗುವಿನ ಭವಿಷ್ಯ ಏನಾಗಬಹುದು? ಜೀವಕಾರುಣ್ಯದ ಮಹಾಸಾಗರವೇ ಆದ ಬಸವೇಶ್ವರರು ಆ ಮಗುವೇ ತಾವೆಂದು ಘೋಷಿಸುತ್ತಾರೆ. ಕೂಡಲಸಂಗಮದೇವರೇ ಇದಕ್ಕೆ ಸಾಕ್ಷಿ ಎಂದು ಪ್ರತಿಪಾದಿಸುತ್ತಾರೆ. ಆ ಮೂಲಕ ಅನೈತಿಕ ಸಂಬಂಧದಿಂದ ಹುಟ್ಟಿದ ಮಗು ಕೂಡ ಎಲ್ಲ ಮಕ್ಕಳಂತೆಯೆ ಹುಟ್ಟಿನಿಂದಲೇ ಸ್ವತಂತ್ರವಾಗಿದೆ; ಒಂದೇ ರೀತಿಯ ಘನತೆ ಮತ್ತು ಹಕ್ಕುಗಳನ್ನು ಹೊಂದಿದೆ ಎಂಬುದನ್ನು ಒತ್ತಿ ಹೇಳುತ್ತಾರೆ. ಕೆಳಜಾತಿಗಳಲ್ಲಿ ಅನೈತಿಕ ಸಂಬಂಧದಿಂದ ಜನಿಸಿದವನು ಜಾತಿವ್ಯವಸ್ಥೆಯ ಸಮಾಜದಲ್ಲಿ ಅತ್ಯಂತ ಕೆಳಗಿನ ಸ್ತರದವನಾಗಿ ಇರಬೇಕಾಗುತ್ತದೆ. ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನರಳುತ್ತಲೇ ಬದುಕಬೇಕಾಗುತ್ತದೆ. ಸಂವೇದನಾಶೀಲ ಬಸವಣ್ಣನವರು ಅಂಥವ
ರೊಳಗೂ ಒಂದಾಗಿಹೋಗುತ್ತಾರೆ. ಅವರಲ್ಲಿ ಆತ್ಮಶಕ್ತಿ
ಯನ್ನು ತುಂಬುತ್ತಾರೆ. ಮಾನವ ಘನತೆಯನ್ನು ಎತ್ತಿಹಿಡಿಯುತ್ತಾರೆ. ಕಟ್ಟಕಡೆಯ ಮನುಷ್ಯರನ್ನು ಮೊಟ್ಟಮೊದಲಿಗೆ ಗುರುತಿಸುವ ಕ್ರಮವನ್ನು ಬಸವಣ್ಣನವರು ಹೀಗೆ ಸೂಚಿಸಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *