ಭೂಮಿ ನಿನ್ನದಲ್ಲ
ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.
-ಅಲ್ಲಮಪ್ರಭುದೇವರು
ಸುಖ, ದುಃಖ ಮತ್ತು ವಿಷಾದಗಳಿಗೆ ವಿಧಿತ್ರಯ ಎನ್ನುತ್ತಾರೆ. ಭೂಮಿ, ಬಂಗಾರ ಮತ್ತು ಕಾಮನೆಗಳ ಬೆನ್ನು ಹತ್ತಿ ಹೋಗುವವರಿಗೆ ದುಃಖ ಮತ್ತು ವಿಷಾದ ಬೆನ್ನುಹತ್ತಿರುತ್ತವೆ. ಈ ವಿಧಿತ್ರಯಗಳಿಗೆ ಮೂರು ಮುಖಗಳಿದ್ದರೂ ದೇಹ ಒಂದೇ ಆಗಿದೆ. ಆದ್ದರಿಂದ ದುಃಖ ಮತ್ತು ವಿಷಾದಗಳು ಸುಖದ ಬೆನ್ನಿಗೆ ಅಂಟಿಕೊಂಡೇ ಇರುತ್ತವೆ.
ಈ ಭೂಮಿ ಎಲ್ಲರಿಗಾಗಿ ಇದೆ. ಹೇಮ ಮುಂತಾದ ಜಗತ್ತಿನ ಎಲ್ಲ ಸಂಪತ್ತಿನ ಮೇಲೆ ಪ್ರತಿಯೊಂದು ಜೀವಿಯ ಹಕ್ಕಿದೆ. ಕಾಮಿನಿ ಸಂಬಂಧದ ಹಾಗೆ ಸತಿಪತಿ ಸಂಬಂಧ ಐಹಿಕ ಮತ್ತು ದೈಹಿಕ ಆಸೆಗಳ ಮೇಲೆ ನಿಂತಿಲ್ಲ. “ಉಭಯ ದೃಷ್ಟಿ ಏಕದೃಷ್ಟಿಯಲ್ಲಿ ಕಾಂಬಂತೆ ದಂಪತಿ ಏಕೋಭಾವವಾಗಿ ನಿಂದಲ್ಲಿ, ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು” ಎಂದು ಅಲ್ಲಮ ಪ್ರಭುಗಳು ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಕಾಮಿನಿ ಮತ್ತು ಸತಿಯ ವ್ಯತ್ಯಾಸ ಇಲ್ಲಿ ಸ್ಪಷ್ಟವಾಗುತ್ತದೆ. ಸತಿಪತಿಗಳ ದೃಷ್ಟಿಕೋನ ಒಂದೇ ಆಗುವುದರ ಮೂಲಕ ಅವರಲ್ಲಿ ಏಕೋಭಾವ ಮೂಡಿದಾಗ ಅಂಥ ದಾಂಪತ್ಯದ ಭಾವೈಕ್ಯ ಗುಹೇಶ್ವರಲಿಂಗಕ್ಕೆ ಅರ್ಪಣೆಯಾಗುವಂಥ ಯೋಗ್ಯತೆ ಪಡೆಯುತ್ತದೆ. ಇಲ್ಲಿ ಸತಿ-ಪತಿ ಎಂಬ ಗುರುತು ಅಳಿದು ಒಂದುತನದ ಅರಿವು ಮೂಡುತ್ತದೆ. ಇಂಥ
ಸತಿಪತಿಗಳು ಮಾನವ ಬದುಕಿನಲ್ಲಿ ಸಹಜವಾದ ಎಲ್ಲ ವಿಧದ ಭೌತಿಕ ಸುಖಗಳನ್ನು ಮೀರಿದ ಶಿವಯೋಗದಲ್ಲಿ ಪರಮಾನಂದವನ್ನು ಹೊಂದುತ್ತಾರೆ. ಇದುವೇ ಲಿಂಗಾಂಗ ಸಾಮರಸ್ಯ. ಇಂಥ ಸಾಮರಸ್ಯ ಹೊಂದಿದವರಿಗೆ ಭೂಮಿ, ಹೇಮ ಅಷ್ಟೇ ಏಕೆ ಸಕಲಜೀವರಾಶಿಗಳು, ಆಕಾಶ, ಸೂರ್ಯ, ಚಂದ್ರ, ನಕ್ಷತ್ರ ಮತ್ತು ಗ್ರಹಗಳು ತಮ್ಮ ಶರೀರದ ಭಾಗಗಳಾಗೇ ಕಾಣುತ್ತವೆ.
ಎಲ್ಲ ವಸ್ತುಗಳು ಆತ್ಮಿಕವಾಗಿರುತ್ತವೆ. ಆದರೆ ಭೌತಿಕವಾಗಿ ನಮ್ಮವು ಆಗಿರುವುದಿಲ್ಲ. ಏಕೆಂದರೆ ಯಾವೂ ನಮ್ಮ ಜೊತೆ ಬರುವುದಿಲ್ಲ. ಹೀಗಿದ್ದರೂ ಅವು ನಮ್ಮವು ಎಂಬ ಭ್ರಮೆಯಲ್ಲೇ ಇರುತ್ತೇವೆ. ಹೊನ್ನು ಹೆಣ್ಣು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೆ ಮಾಯೆ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಇದನ್ನು ಅರಿತರೆ ಇದೇ ಜ್ಞಾನರತ್ನ. ಈ ದಿವ್ಯಜ್ಞಾನರತ್ನವನ್ನು ಹಾಳುಗೆಡವದೆ ಇನ್ನೂ ಅರ್ಥೈಸುತ್ತ ಹೋದವರು ಅನುಭಾವದ ಲೋಕದಲ್ಲಿ ಎಲ್ಲರಿಗೂ ಮಿಗಿಲಾದ ಶ್ರೀಮಂತರು ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ.