ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;      ಹಾಲು ಕಂದಲು

ವಚನ ಬೆಳಕು; ಹಾಲು ಕಂದಲು

 ಹಾಲು ಕಂದಲು

ಹಾಲು ಕಂದಲು, ತುಪ್ಪದ ಮಡಕೆಯ
ಬೋಡು ಮುಕ್ಕೆನಬೇಡ.
ಹಾಲು ಸಿಹಿ, ತುಪ್ಪ ಕಮ್ಮನೆ: ಲಿಂಗಕ್ಕೆ ಬೋನ.
ಕೂಡಲಸಂಗನ ಶರಣರ
ಅಂಗಹೀನರೆಂದಡೆ ನಾಯಕನರಕ.
-ಬಸವಣ್ಣ

ಬಳಕೆ ಮಾಡುತ್ತ ಮಾಡುತ್ತ ಹಾಲಿನ ಪಾತ್ರೆಗಳು ಬೋಳಾಗುತ್ತವೆ; ತುಪ್ಪದ ಗಡಿಗೆಗಳು ಮುಕ್ಕಾಗುತ್ತವೆ. ಆದರೆ ಹೈನುಗಾರಿಕೆಯ ಕಾಯಕದಲ್ಲಿ ತಲ್ಲೀನರಾದ ರೈತಾಪಿ ಮಹಿಳೆಯರು ಆ ಪಾತ್ರೆ ಮತ್ತು ತುಪ್ಪದ ಗಡಿಗೆಗಳನ್ನು ಬೀಸಾಕುವುದಿಲ್ಲ. ಪಾತ್ರೆಗಳು ಬೋಳಾದರೂ ಹಾಲಿನ ಸಿಹಿ ಕಡಿಮೆಯಾಗುವುದಿಲ್ಲ. ಗಡಿಗೆಗಳು ಮುಕ್ಕಾದರೂ ತುಪ್ಪದ ಸುವಾಸನೆ ಹೋಗುವುದಿಲ್ಲ. ಬೋಳಾದ ಪಾತ್ರೆಯ ಹಾಲು ಮತ್ತು ಮುಕ್ಕಾದ ಗಡಿಗೆಯ ತುಪ್ಪ ಕೂಡ ಲಿಂಗಕ್ಕೆ ನೈವೇದ್ಯವಾಗುತ್ತವೆ. ಹಾಲು ತುಪ್ಪ ಮುಖ್ಯ. ಪಾತ್ರೆ ಬೋಳು ಮತ್ತು ಗಡಿಗೆ ಮುಕ್ಕು ಎನ್ನುತ್ತ ಕೂಡುವುದು ಅರ್ಥಹೀನ. ಪಾತ್ರೆಯಲ್ಲಿ ಹಾಲು ಕಾಯಿಸುವುದರಿಂದ ಅದರ ಹೊರಮೈ ಕಪ್ಪಾಗುತ್ತ ಹೋಗಿರುತ್ತದೆ. ಅದು ಹಾಲು ಕಾಯಿಸುವ ಪಾತ್ರೆಯಾಗಿಯೇ ಉಳಿದಿರುತ್ತದೆ. ಹಾಲಿನ ಪಾತ್ರೆ ಬೋಳಾದಾಗಲೆಲ್ಲ ಬದಲಾಯಿಸುವುದು ಅವಾಸ್ತವವಾಗುತ್ತದೆ. ಇದನ್ನು ರೈತಾಪಿ ಜನ ಚೆನ್ನಾಗಿ ಬಲ್ಲರು. ಅದೇರೀತಿ ತುಪ್ಪದ ಗಡಿಗೆಗಳು ಬೋಳಾದಾಗಲೆಲ್ಲ ಬದಲಾಯಿಸಿದಾಗ ಹೊಸ ಗಡಿಗೆಗಳು ತುಪ್ಪವನ್ನು ಹೀರುತ್ತಲೇ ಇರುತ್ತವೆ. ಹೀಗಾಗಿ ತುಪ್ಪವನ್ನು ಶೇಖರಿಸಲು ಹಳೆಗಡಿಗೆ ಯೋಗ್ಯವಾದುದು. ಹೀಗೆ ಜನ ಅನುಭವದ ಮೂಲಕ ಇಂಥದ್ದನ್ನೆಲ್ಲ ಚೆನ್ನಾಗಿ ಅರಿತುಕೊಂಡು ಬಾಳುತ್ತಿರುತ್ತಾರೆ.
ಶರಣರ ಸಮತಾ ಚಳವಳಿಯಲ್ಲಿ ಎಲ್ಲ ಜಾತಿ ಮತ್ತು ವರ್ಗಗಳ ಕಾಯಕಜೀವಿಗಳು ಭಾಗಿಯಾದಂತೆ ಅಂಗವಿಕಲರೂ ಭಾಗಿಯಾಗಿದ್ದರು. ಅವರು ಅಂಗವಿಕಲರಾದರೂ ಮೈಗಳ್ಳರಲ್ಲ. ಕಾಯಕವನ್ನು ವ್ರತದಂತೆ ಸ್ವೀಕರಿಸಿದವರು. ಸ್ವಾವಲಂಬಿಗಳಾಗಿ ಬದುಕುವಂಥವರು. ಅವರ ಮನಸ್ಸು ಕೂಡ ಇತರ ಶರಣರ ಹಾಗೆ ಹಾಲಿನಂತೆ ಸಿಹಿ; ತುಪ್ಪದಂತೆ
ಘಮಘಮಿಸುವಂಥದ್ದು. ಅಂದರೆ ಅವರ ಸಂಬಂಧ ಕೂಡ ಇತರ ಶರಣರ ಸಂಬಂಧದಂತೆ ಮನಸ್ಸಿಗೆ ಮುದ ನೀಡುವಂಥದ್ದು. ಅಂಗವಿಕಲರನ್ನು ಗೌರವದಿಂದ ಕಾಣಬೇಕೆಂದು ಇಂದು ಪ್ರಜ್ಞಾವಂತರನೇಕರು ಹೇಳುತ್ತಿದ್ದಾರೆ. ಆದರೆ ಬಸವಣ್ಣನವರು ೧೨ನೇ ಶತಮಾನದಲ್ಲೇ ಅಂಗವಿಕಲರ ಬಗ್ಗೆಯೂ ಚಿಂತನೆ ಮಾಡಿದ್ದಾರೆ. ಅವರ ಮನಸ್ಸಿಗೆ ನೋವಾಗದಂತೆ ಇತರರು ನಡೆದುಕೊಳ್ಳುವುದು ಸಾಮಾಜಿಕ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ. ಅಂಗಹೀನರು ಚೈತನ್ಯಹೀನರಲ್ಲ ಎಂಬುದನ್ನು ಹಾಲು ತುಪ್ಪದ ಉದಾಹರಣೆಯೊಂದಿಗೆ ತಿಳಿಹೇಳಿದ್ದಾರೆ.
ನಮ್ಮ ಹಳ್ಳಿಗಳಲ್ಲಿ ಕುಂಟಸಿಂಗರೀಗೌಡ, ಕುಡ್ಡಕಲ್ಲಪ್ಪ, ಸೊಟ್ಟಗೈ ಗಂಗವ್ವ, ಮೊಂಡಗೈ ಭೀಮವ್ವ ಎಂದು ಕರೆಯುವುದು ಇಂದಿಗೂ ರೂಢಿಯಲ್ಲಿದೆ. ಹೀಗೆ ಅಂಗವೈಕಲ್ಯವೆಂಬುದು ಅಂಗವಿಕಲರ ಹೆಸರಿನ ಭಾಗವಾಗಿ ಹೋಗಿದೆ. ಮುಂದೆ ಹುಟ್ಟುವ ಪೀಳಿಗೆಗೆ ಅಂಗವಿಕಲ ಪೂರ್ವಜರ ಹೆಸರಿಡುವಾಗ ಕೂಡ ಅವು ಹೆಸರಿನ ಭಾಗವಾಗಿ ಉಳಿದುಕೊಳ್ಳುತ್ತಿವೆ. ಬಸವಪ್ರಜ್ಞೆ ಇದ್ದಲ್ಲಿ ಇವೆಲ್ಲ ಮರೆಯಾಗುತ್ತವೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *