೧ ತಂದೆ ನೀನು ತಾಯಿ ನೀನು
ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ.
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
-ಬಸವಣ್ಣ
ಬಸವಣ್ಣನವರ ಅತ್ಯಂತ ಜನಪ್ರಿಯ ವಚನವಿದು. ಮೇಲ್ನೋಟಕ್ಕೆ ಸಿಗುವ ಅರ್ಥ ಒಂದಾದರೆ ಒಳನೋಟಕ್ಕೆ ಸ್ಫುರಿಸುವ ಅರ್ಥ ಇನ್ನೊಂದಾಗಿದೆ. ‘ಕೂಡಲಸಂಗಮದೇವರೇ ನನ್ನ ತಂದೆ, ತಾಯಿ, ಬಂಧು ಮತ್ತು ಬಳಗ. ಕೂಡಲಸಂಗಮದೇವರಲ್ಲದೆ ನನಗೆ ಬೇರೆ ಯರೂ ಇಲ್ಲ’ ಎಂದು ಬಸವಣ್ಣನವರು ತಿಳಿಸುತ್ತಾರೆ ಎಂಬ ಭಾವನೆ ಮೊದಲ ಓದಿಗೆ ಬರುತ್ತದೆ. ಸಮಜಮುಖಿ ಬಸವಣ್ಣನವರು ಎಲ್ಲ ಸಂಬಂಧ ಕಡಿದುಕೊಳ್ಳುತ್ತ ದೇವಸಂಬಂಧದಲ್ಲಿ ತಲ್ಲೀನರಾಗಿದ್ದಾರೆ ಎಂದು ಭಾಸವಾಗುತ್ತದೆ. ಹೀಗೆ ಸಂಬಂಧ ಕಡಿದುಕೊಂಡು ದೇವರ ಧ್ಯಾನದಲ್ಲಿ ತಲ್ಲೀನವಾಗುವುದಕ್ಕೆ ನಾವು ಸಾಂಪ್ರದಾಯಿಕವಾಗಿ ‘ಆಧ್ಯಾತ್ಮಿಕ ಬದುಕು’ ಎಂದು ಕರೆಯುತ್ತೇವೆ. ಅಧ್ಯಾತ್ಮದ ಕಡೆಗೆ ವಾಲುವ ಅನೇಕರು ಸಾಂಸಾರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತ ಅಂತರ್ಮುಖಿಯಾಗುತ್ತಾರೆ. ಹೀಗೆ ಇದೊಂದು ಅಂತರ್ಮುಖಿ ವಚನ ಎಂದೇ ಅನೇಕರು ಅರ್ಥೈಸುತ್ತಾರೆ. ಆದರೆ ಇದು ದೃಢನಿರ್ಧಾರದ ಸಮಜಮುಖಿ ವಚನವಾಗಿದೆ.
ಬಸವಣ್ಣನವರು ತಂದೆ-ತಾಯಿ ಮತ್ತು ಬಂಧು-ಬಳಗದಲ್ಲಿ ದೇವರನ್ನು ಕಾಣುತ್ತಾರೆ. ಅಷ್ಟೇ ಅಲ್ಲ ಅವರ ಕಣ್ಣಿಗೆ ಬೀಳುವವರೆಲ್ಲರೂ ದೇವರಲ್ಲದೆ ಮತ್ತಾರೂ ಅಲ್ಲ! ಅವರು ಪ್ರತಿಯೊಬ್ಬರಲ್ಲಿಯೂ ದೇವರನ್ನೇ ಕಾಣುತ್ತಾರೆ. ಎಲ್ಲರ ಬಗ್ಗೆಯೂ ಗೌರವಭಾವ ತಾಳುತ್ತಾರೆ. ನಾವು ನಮ್ಮೊಳಗಿನ ದೇವರ ಕುರಿತು ಧ್ಯಾನಿಸುವಂತೆ ಮಾಡುತ್ತಾರೆ. ಹೀಗೆ ನಮ್ಮೊಳಗೂ ಹೊರಗೂ ದೇವರ ಪರಿಸರವನ್ನೇ ಸೃಷ್ಟಿಸುತ್ತಾರೆ. ಇಂಥ ಮನಸ್ಥಿತಿಯನ್ನು ಹೊಂದುವವರು ಯಾರನ್ನೂ ಹೊರಗಿನವರೆಂದು ಭಾವಿಸುವುದಿಲ್ಲ. ಬೇರೆ ಧರ್ಮದವರು, ಬೇರೆ ಜಾತಿಯವರು, ಸವರ್ಣೀಯರು ಮತ್ತು ಅಸ್ಪೃಶ್ಯರು ಎಂದು ಭೇದಭಾವ ಮಾಡುವುದಿಲ್ಲ. ಎಲ್ಲರನ್ನೂ ದೇವಸ್ವರೂಪಿಗಳೆಂದೇ ತಿಳಿಯುತ್ತಾರೆ. ಆ ಮೂಲಕ ಧರ್ಮ, ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳ ಅಹಂಕಾರದಿಂದ ಮುಕ್ತರಾಗುತ್ತಾರೆ. ಮಾನವಪ್ರೇಮಭಾವದಿಂದ ಕಂಗೊಳಿಸುತ್ತಾರೆ.
ಹೀಗೆ ಎಲ್ಲರೂ ಕೂಡುವುದರಿಂದ ಸಂಗಮವಾಗಿ ಕೂಡಲಸಂಗಮದೇವ ನಮ್ಮ ಮನಸ್ಸಿನಲ್ಲಿ ಮೂಡುತ್ತಾನೆ. ಭಾವೈಕ್ಯದ ದೇವನಾಗಿ ನಮ್ಮೊಳಗೇ ಉಳಿಯುತ್ತಾನೆ. ಇಂಥ ವಿಶ್ವಭಾವೈಕ್ಯಕ್ಕಾಗಿ ಬಸವಣ್ಣನವರು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿದ್ದಾರೆ. ‘ಹಾಲಲದ್ದು ನೀರಲದ್ದು’ ಎಂದು ಹೇಳುವ ಮೂಲಕ ಲೋಕಕಲ್ಯಾಣದ ಮನಸ್ಸಿಗೆ ಸುಖ-ದುಃಖ ಸಮಾನವಾಗುತ್ತವೆ ಎಂಬುದನ್ನು ಮನಗಾಣಿಸುತ್ತಾರೆ. ಐಹಿಕ ಸುಖ ದುಃಖಗಳನ್ನು ಮೀರಿದ ಮಾನಸಿಕ ನೆಮ್ಮದಿ ನೀಡುತ್ತಾರೆ. ಇಂಥ ನೆಮ್ಮದಿಗಾಗಿ ಲೋಕದ ಜನಸಮುದಾಯ ಪರಿತಪಿಸುತ್ತಿದೆ. ಜೀವಕಾರುಣ್ಯವಿಲ್ಲದೆ ದೈವತ್ವದ ಅರಿವಾಗುವುದಿಲ್ಲ. ನೆಮ್ಮದಿ ಸಿಗುವುದಿಲ್ಲ.