ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಊರಮುಂದೆ ಹಾಲಹಳ್ಳ

ವಚನ ಬೆಳಕು; ಊರಮುಂದೆ ಹಾಲಹಳ್ಳ

ಊರಮುಂದೆ ಹಾಲಹಳ್ಳ

ಊರಮುಂದೆ ಹಾಲಹಳ್ಳ ಹರಿಯುತ್ತಿರಲು
ಓರೆಯಾವಿನ ಬೆನ್ನಲಿ ಹರಿಯಲದೇಕಯ್ಯಾ.
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ.
                                                     -ಬಸವಣ್ಣ
ಊರಮುಂದೆ ಹಾಲಹಳ್ಳ ಹರಿಯುವಾಗ ಮೊಂಡಹಸುವಿನ ಹಿಂದೆ ನಾನೇಕೆ ಓಡಲಿ? ನಾನೇಕೆ ನಾಚಿಕೆಗೆಡಬೇಕು? ನಾನೇಕೆ ಅಪಮಾನಕ್ಕೊಳಗಾಗಬೇಕು? ಕೂಡಲಸಂಗಮದೇವರು ಸಮಾಜದ ಪ್ರತೀಕವಾಗಿ ನನ್ನ ಜೊತೆ ಇರುವಾಗ ನನಗೆ ಬಿಜ್ಜಳನ ಭಂಡಾರವೇಕೆ ಬೇಕು ಎಂದು ಕಲ್ಯಾಣದ ಪ್ರಧಾನಿ ಬಸವಣ್ಣನವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳಲ್ಲಿ ರಾಜ್ಯಶಕ್ತಿಯ ಜನವಿರೋಧಿ ಗುಣಲಕ್ಷಣಗಳ ಸೂಚನೆಗಳಿವೆ. ಜನಶಕ್ತಿಯ ಮಹತ್ವವನ್ನು ಸಾರುವ ಮಾತುಗಳಿವೆ. ದೃಢನಿರ್ಧಾರವಿದೆ. ತರ್ಕಬದ್ಧವಾದ ಉತ್ತರಗಳೂ ಇವೆ. ನಿಜದ ನೆಲೆಯಲ್ಲಿ ಮಾತನಾಡುವವರಿಗೆ ಇರುವ ಗಾಂಭೀರ್ಯ, ಧೈರ್ಯ, ತಿಳಿಹೇಳುವ ಸಾಮರ್ಥ್ಯ, ಸಮಾಧಾನ ಮತ್ತು ಅರ್ಥಹೀನ ಆರೋಪಗಳನ್ನು ಸಹಜವಾಗಿ ಬಯಲಿಗೆಳೆಯುವ ಕ್ರಮ, ಹೀಗೆ ಇವೆಲ್ಲವನ್ನೂ ಒಳಗೊಂಡ ಈ ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.
ಬಸವಣ್ಣನವರು ರಾಜ್ಯಶಕ್ತಿಗೆ ಮೊಂಡಹಸು ಎಂದು ಕರೆದಿದ್ದಾರೆ. ಹಾಲು ಹಿಂಡಲು ಹೋದಾಗ ಇದು ಒದೆಯುತ್ತದೆ. ಇರಿಯಲು ಬರುತ್ತದೆ. ಇಂಥ ರಾಜ್ಯಶಕ್ತಿಯ ಭಂಡಾರದ ಬೆನ್ನನ್ನು ನಾನೇಕೆ ಹತ್ತಲಿ? ರಾಜ್ಯಭಂಡಾರದ ಹಣದಿಂದ ನಾನೇಕೆ ದಾಸೋಹ ನಡೆಸಲಿ ಎಂದು ಅವರು ಪ್ರಶ್ನಿಸುತ್ತಾರೆ. ಬಸವಣ್ಣನವರು ಬಿಜ್ಜಳನ ಭಂಡಾರವನ್ನು ಸೂರೆಗೈದು ಶರಣಸಂಕುಲ ಬೆಳೆಸುತ್ತಿದ್ದಾರೆ ಎಂದು ಶರಣಧರ್ಮ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು ಗುಲ್ಲೆಬ್ಬಿಸಿದ್ದವು. ವಿರೋಧಿಗಳ ಈ ಆರೋಪಕ್ಕೆ ಶುದ್ಧಹಸ್ತರಾದ ಬಸವಣ್ಣನವರು ಸಮರ್ಪಕವಾದ ಉತ್ತರವನ್ನು ಈ ವಚನದಲ್ಲಿ ನೀಡಿದ್ದಾರೆ.
ಜಗತ್ತಿನ ವಿವಿಧ ಧರ್ಮಗ್ರಂಥಗಳಲ್ಲಿ ‘ಸ್ವರ್ಗದಲ್ಲಿ ಹಾಲಹಳ್ಳಗಳಿವೆ’ ಎನ್ನಲಾಗಿದೆ. ಆದರೆ ಕಾಯಕಜೀವಿಗಳು ತುಂಬಿಕೊಂಡಿರುವ ಬಸವಣ್ಣನವರ ಊರ ಮುಂದೆ ಹಾಲಹಳ್ಳ ಹರಿದಿದೆ. ಏಕೆಂದರೆ ಕಾಯಕಜೀವಿಗಳಿಂದಲೇ ಎಲ್ಲ ಉತ್ಪಾದನೆಯಾಗುತ್ತದೆ. ಅವರಿಂದಲೇ ಈ ಬದುಕು ಸಹನೀಯವಾಗುತ್ತದೆ. ಅವರ ಉತ್ಪಾದನೆಯ ಒಂದು ಭಾಗ ಮಾತ್ರ ರಾಜನ ಬೊಕ್ಕಸಕ್ಕೆ ಸೇರುತ್ತದೆ. ರಾಜನ ಬೊಕ್ಕಸದಿಂದ ಹಣವನ್ನು ಪಡೆಯುವುದೆಂದರೆ ಮೊಂಡಹಸುವಿನ ಹಾಲು ಕರೆದಂತೆ ಎಂದು ಬಸವಣ್ಣನವರು ಮನೋಜ್ಞವಾಗಿ ತಿಳಿಸಿದ್ದಾರೆ. ಊರ ಮುಂದೆ ಹಾಲಹಳ್ಳ ಹರಿಯುವುದು ಎಂದರೆ ಜನಸಮುದಾಯ ಪ್ರಾಮಾಣಿಕವಾಗಿ ತಮ್ಮ ಕಾಯಕ ಮಾಡುವುದರ ಮೂಲಕ ಸ್ವಸ್ಥ ಮತ್ತು ಸುಭಿಕ್ಷದಿಂದ ಕೂಡಿದ ನೆಮ್ಮದಿಯ ಸಮಾಜದ ನಿರ್ಮಾಣ ಮಾಡುವುದು. ಅಂಥ ಸಾಮಾಜಿಕ ಉತ್ಪಾದನಾ ಶಕ್ತಿಯ ಒಂದು ಭಾಗದಿಂದಲೇ ರಾಜರು ತಮ್ಮ ಭಂಡಾರವನ್ನು ತುಂಬಿಕೊಂಡು ಅರಮನೆಗಳನ್ನು ಕಟ್ಟುತ್ತಾರೆ. ದರ್ಪದಿಂದ ಕೂಡಿದ ಐಷಾರಾಮಿ ಜೀವನ ಸಾಗಿಸುತ್ತಾರೆ. ಇಂಥವರ ಸಹವಾಸ ನನಗೆ ಬೇಡ; ನನ್ನ ಜೊತೆ ನನ್ನ ಕಾಯಕಜೀವಿಗಳಿದ್ದಾರೆ ಎಂಬ ಬಸವಣ್ಣನವರ ನಿರ್ಧಾರ, ಜನಸಮುದಾಯದ ಮೇಲೆ ಅವರಿಗಿದ್ದ ಭರವಸೆಯ ದ್ಯೋತಕವಾಗಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *