ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಕಷ್ಟಕುಲದಲ್ಲಿ ಹುಟ್ಟಿದ ಕರ್ಮ

ವಚನ ಬೆಳಕು; ಕಷ್ಟಕುಲದಲ್ಲಿ ಹುಟ್ಟಿದ ಕರ್ಮ

ಕಷ್ಟಕುಲದಲ್ಲಿ ಹುಟ್ಟಿದ ಕರ್ಮ

ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು
ಮುಟ್ಟಿ ಪಾವನ ಮಾಡಿ, ಕೊಟ್ಟನಯ್ಯಾ ಎನ್ನ ಕರಸ್ಥಳಕೆ ಲಿಂಗವ.
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ.
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿ,
ಎನ್ನ ಅರಿವಿನಲ್ಲಿ ಪ್ರಸಾದವ ನೆಲೆಗೊಳಿಸಿದ.
ಇಂತೀ ತ್ರಿಸ್ಥಾನವ ಶುದ್ಧ ಮಾಡಿದ ಬಸವಣ್ಣನ ಕರುಣದಿಂದ
ಪ್ರಭುವಿನ ಶ್ರೀಪಾದವ ಕಂಡು ಬದುಕಿದೆನು
ಕಾಣಾ ಅಭಿನವ ಮಲ್ಲಿಕಾರ್ಜುನ.
                                                -ಡೋಹರ ಕಕ್ಕಯ್ಯ
ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದ ಆದ್ಯ ವಚನಕಾರ ಡೋಹರ ಕಕ್ಕಯ್ಯನವರ ಸಮಾಧಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಕ್ಕೇರಿಯಲ್ಲಿದೆ. ‘ಬೊಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದು ಬಸವಣ್ಣನವರು ಮನದುಂಬಿ ಹೇಳಿದ್ದಾರೆ. ತೊಗಲು ಹದ ಮಾಡುವ ಕಾಯಕದ ಕಕ್ಕಯ್ಯನವರು ಕಲ್ಯಾಣಕ್ಕೆ ಬರುವ ಮೊದಲು ಮಾಳವ ದೇಶದ ಅರಸನಲ್ಲಿ ಸಬಳ (ಈಟಿ) ವನ್ನು ಆಯುಧವನ್ನಾಗಿ ಮಾಡಿಕೊಂಡ ಯೋಧರಾಗಿದ್ದರು.
ಬಸವಣ್ಣನವರ ಪವಾಡ ಸದೃಶ ಜಾತಿವಿನಾಶ ಚಳವಳಿಯ ಬಗ್ಗೆ ತಿಳಿದುಕೊಂಡ ಕಕ್ಕಯ್ಯನವರು ಕಲ್ಯಾಣಕ್ಕೆ ಬಂದು ಉಳಿದುಕೊಂಡರು. ಕಲ್ಯಾಣಕ್ಕೆ ಬಂದ ನಂತರ ಅವರಿಗಾದ ಅನುಭವವನ್ನು ಕಕ್ಕಯ್ಯನವರು ಈ ವಚನದಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ. ಕಂದಾಚಾರದ ಸಮಾಜದಲ್ಲಿ ತುಳಿತಕ್ಕೊಳಗಾಗಿ ಬಳಲಿದ ದಲಿತರು, ಬಸವಣ್ಣನವರು ರೂಪಿಸಿದ ಮಾನವ ಘನತೆಯ ಸಮಾಜದಲ್ಲಿ ಹೇಗೆ ವಿಮೋಚನೆಯ ಸುಖವನ್ನು ಅನುಭವಿಸಿದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.
ಕಕ್ಕಯ್ಯನವರು ಅಸ್ಪೃಶ್ಯ ಜಾತಿಗಳಿಗೆ ‘ಕಷ್ಟಕುಲ’ ಎಂಬ ಪದ ಬಳಸುವ ಮೂಲಕ ಆ ಜನರ ಹೃದಯವಿದ್ರಾವಕ ಸ್ಥಿತಿಯ ಕಡೆಗೆ ಗಮನ ಸೆಳೆಯುತ್ತಾರೆ. ಈ ವರ್ಣ ಮತ್ತು ಜಾತಿ ವ್ಯವಸ್ಥೆಯ ಸಮಾಜವು ಕರ್ಮಸಿದ್ಧಾಂತದ ಮೇಲೆ ನಿಂತಿದೆ. ಅಂಥ ಕರ್ಮವನ್ನೇ ಬಸವಣ್ಣನವರು ಕಳೆದರು. ಕರ್ಮಹರ ಬಸವಣ್ಣನವರ ಸ್ಪರ್ಶದಿಂದಾಗಿ ಅಸ್ಪೃಶ್ಯನಾದ ತಾನು ಪಾವನವಾದೆ ಎಂದು ಕಕ್ಕಯ್ಯನವರು ಹೇಳುತ್ತಾರೆ. ಬಸವಣ್ಣನವರೇ ತಮಗೆ ಲಿಂಗದೀಕ್ಷೆ ಮಾಡಿದರು ಎಂದು ತಿಳಿಸಿದ್ದಾರೆ. ಇಷ್ಟಲಿಂಗ ಸ್ಪರ್ಶದಿಂದಾಗಿ ತಮ್ಮ ದೇಹ ಅಪರಂಜಿಯಾಯಿತು. ಬಸವಣ್ಣನವರು ತಮ್ಮ ತನುವಿನಲ್ಲಿ ಅರಿವನ್ನು ನೆಲೆಗೊಳಿಸಿದರು; ಮನಸ್ಸಿನಲ್ಲಿ ಮೇಲುಕೀಳಿಲ್ಲದ ಸಮಾಜ (ಜಂಗಮ)ವನ್ನು ನೆಲೆಗೊಳಿಸಿದರು; ಅರಿವಿನಲ್ಲಿ ಇಡೀ ವಿಶ್ವವೇ ದೇವರ ಕೃಪೆ (ಪ್ರಸಾದ) ಎಂಬ ಸತ್ಯವನ್ನು ನೆಲೆಗೊಳಿಸಿದರು. ಹೀಗೆ ಬಸವಣ್ಣನವರ ಕರುಣೆಯಿಂದಾಗಿ ದೇಹ, ಮನಸ್ಸು ಮತ್ತು ಅರಿವು ಶುದ್ಧವಾದ ಕಾರಣ ಪ್ರಭುದೇವರ ನಿಲವು ತಿಳಿಯಿತು ಎಂದು ಹೇಳಿದ್ದಾರೆ. ಈ ರೀತಿಯಲ್ಲಿ ಬಸವಧರ್ಮವು ವ್ಯಕ್ತಿತ್ವ ವಿಕಸನದ ಧರ್ಮವಾಗಿದೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *