ಅಸಿ ಮಸಿ ಕೃಷಿ ವಾಣಿಜ್ಯ
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ,
ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ
ಮುಂತಾದ ಕಾಯಕವಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ
ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ,
ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
-ಅಕ್ಕಮ್ಮ
ಹೊಟ್ಟೆ ಹೊರೆಯುವ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದು, ಬೇಸಾಯ, ವಾಣಿಜ್ಯ ಕಾರ್ಯಗಳಲ್ಲಿ ತೊಡಗುವುದು, ಭಕ್ತರ ಪೀಕದಾನಿ ಹಿಡಿಯುವುದು, ಪಾದರಕ್ಷೆ, ಬಾಗಿಲು, ಬೀಗ, ಖಜಾನೆ ಕಾಯುವುದು ಮುಂತಾದ ಯಾವುದೇ ಕಾಯಕವನ್ನಾದರೂ ಮಾಡುವಂಥ ಬಡ ಭಕ್ತರÀ ಕುರಿತು ಅಕ್ಕಮ್ಮ ಈ ವಚನದಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾಳೆ. ಧರ್ಮಬದ್ಧವಾದ ವ್ರತಕ್ಕೆ ಭಂಗವಾಗದAತೆ ಮತ್ತು ಮಾಡುವ ಕಾಯಕಕ್ಕೆ ಚ್ಯುತಿ ಬರದಂತೆ ಕಾಯಕ ಮಾಡುತ್ತ ಬದುಕುವ ಇಂಥ ಭಕ್ತರ ಅಂಗಳವೇ ಪುಣ್ಯಕ್ಷೇತ್ರ, ಇಂಥ ಅರಿವಿನಿಂದಾಗಿ ಅವರ ಮನೆಗಳೇ ಶಿವಾಲಯ ಎಂದು ಅಕ್ಕಮ್ಮ ಹೇಳುತ್ತಾಳೆ.
ಕಾಯಕಜೀವಿಗಳ ಘನತೆಯನ್ನು ಎತ್ತಿಹಿಡಿಯುವ ವಚನವಿದು. ಧನವಂತರು, ಆಸ್ತಿವಂತರು, ಅಧಿಕಾರದ ಗದ್ದುಗೆ ಏರಿದವರು ಮಾತ್ರ ಕುಲೀನರು ಎಂದು ಕರೆಯಿಸಿಕೊಳ್ಳುತ್ತಿದ್ದ ಕಾಲದಲ್ಲಿ ಬಡವರ್ಗದ ವಚನಕಾರ್ತಿ ಅಕ್ಕಮ್ಮನ ಈ ವಚನ ಬಡವರ ಆತ್ಮಗೌರವವನ್ನು ಎತ್ತಿ ಹಿಡಿಯುವಂಥದ್ದಾಗಿದೆ.
ಸಕಲ ಸೌಲಭ್ಯಗಳಿಂದ ಕೂಡಿದ ಕುಲೀನರು ದೇಶಾದ್ಯಂತ ಇರುವ ಕಾಶಿ, ರಾಮೇಶ್ವರ, ಬದರಿ, ಕೇದಾರದಂಥ ಪುಣ್ಯಕ್ಷೇತ್ರಗಳಿಗೆ ಹೋಗುತ್ತಾರೆ. ಆದರೆ ಕಾಯಕಜೀವಿಗಳು ಹಾಗೆಲ್ಲ ಸುತ್ತಬೇಕಾಗಿಲ್ಲ. ಏಕೆಂದರೆ ಅವರ ಅಂಗಳವೇ ಪುಣ್ಯಕ್ಷೇತ್ರವಾಗಿದೆ. ಅವರು ಯಾವುದೇ ದೇವಾಲಯಕ್ಕೆ ಹೋಗಬೇಕಿಲ್ಲ. ಏಕೆಂದರೆ ಅವರ ಮನೆಯೆ ಶಿವಾಲಯದಂತಿದೆ. (ಅವರ ದೇಹ ಕೂಡ ಶಿವಾಲಯವೇ ಆಗಿದೆ.) ಯಾವುದೇ ಕಾಯಕವನ್ನು ಮನಮುಟ್ಟಿ ಮಾಡಿದಾಗ ಸಿಗುವ ಆನಂದವೇ ಸ್ವರ್ಗಸುಖಕ್ಕೆ ಸಮನಾಗಿರುತ್ತದೆ. ಆಗ ಕಾಯಕಜೀವಿಗಳು ಸಹಜವಾಗಿಯೆ ಸ್ವರ್ಗದ ಭ್ರಮೆಯಿಂದ ಹೊರಬರುತ್ತಾರೆ. ಕಾಯಕದ ಮೂಲಕ ಬರುವ ಆತ್ಮವಿಶ್ವಾಸ, ವೈಚಾರಿಕತೆ, ಸಮಾನತೆಯ ಪ್ರಜ್ಞೆ, ಸತ್ಯಶುದ್ಧ ಕಾಯಕ ಮಾಡುತ್ತ ತಮ್ಮೊಳಗಿನ ದೇವರಿಗೆ ಶರಣಾದವರು ಹೊರಗೆಲ್ಲಿಯೂ ಶರಣಾಗತರಾಗಬೇಕಿಲ್ಲ ಎಂಬ ಅರಿವು ಹೀಗೆ ಕಾಯಕ ಎಲ್ಲದಕ್ಕೂ ಮೂಲವಾಗಿದೆ. ಆದ್ದರಿಂದಲೇ ಅದನ್ನು ಪವಿತ್ರವಾಗಿ ನಿಭಾಯಿಸಬೇಕು ಎಂಬುದು ಅಕ್ಕಮ್ಮನ ಆಶಯವಾಗಿದೆ.
ಮನುಧರ್ಮ ಯಾವ ಶೂದ್ರರನ್ನು ವರ್ಣವ್ಯವಸ್ಥೆಯಲ್ಲಿ ಕಡೆಯವರನ್ನಾಗಿ ಇರಿಸಿತ್ತೋ ಆ ಕಾಯಕಜೀವಿಗಳು ಹೀಗೆ ತಮ್ಮ ಕಾಯಕನಿಷ್ಠೆಯಿಂದ ಸ್ವತಂತ್ರಧೀರರಾಗಿ ಮೇಲೆ ಬಂದರು. ಹೀಗೆ ಬಸವಧರ್ಮಕ್ಕೆ ಕಾಯಕವೇ ಮೂಲಾಧಾರವಾಗಿದೆ.