ಹುಬ್ಬಳ್ಳಿ-ಧಾರವಾಡ ಸುದ್ದಿ
(2) ವಚನ ಬೆಳಕು:    ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು

(2) ವಚನ ಬೆಳಕು: ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.

-ಬಸವಣ್ಣ

ಸಾಂಪ್ರದಾಯಿಕ ಸಮಾಜವನ್ನು ವೈಚಾರಿಕ ಪ್ರಜ್ಞೆಯೊಂದಿಗೆ ಮಾದರಿ ಸಮಾಜವಾಗಿ ರೂಪಿಸಲು ಬಸವಣ್ಣನವರು 12ನೇ ಶತಮಾನದಲ್ಲೇ ಶತಪ್ರಯತ್ನ ಮಾಡಿದರು. ಆದರೆ ಇಂದಿಗೂ ಬಹುಪಾಲು ಲಿಂಗಾಯತರು ಕೂಡ ನಾಗರಪಂಚಮಿಯಲ್ಲಿ ಕಲ್ಲ ನಾಗರಕ್ಕೆ ಮತ್ತು ಜೀವಂತ ನಾಗರುಗಳ ಹುತ್ತಿಗೆ ಹಾಲೆರೆಯುವುದನ್ನು ಬಿಟ್ಟಿಲ್ಲ. ಆದರೆ ತಾವಿರುವ ಸ್ಥಳಗಳಲ್ಲಿ ಹಾವು ಬಂದರೆ ಕೊಲ್ಲಲು ಪ್ರಯತ್ನಿಸುವರು.
ಈ ವಚನದಲ್ಲಿ ಆರು ಸಾಲುಗಳಿವೆ. ಮೊದಲಿನ ನಾಲ್ಕು ಸಾಲುಗಳಲ್ಲಿ ಪ್ರತಿ ಎರಡು ಸಾಲುಗಳು ವೈರುಧ್ಯಗಳಿಂದ ಕೂಡಿವೆ. ನಾಗರಕಲ್ಲನ್ನು ಪೂಜಿಸುವುದು, ನಾಗರಹಾವನ್ನು ಕೊಲ್ಲುವುದು. ಉಣ್ಣದ ಲಿಂಗಕ್ಕೆ ಎಡೆ ಹಿಡಿಯುವುದು, ಶರಣರ ಮಾನವೀಯ ತತ್ತ್ವಗಳನ್ನು ಪ್ರಸಾರ ಮಾಡುವ ಬಡ ಜಂಗಮರು ಹಸಿದು ಬಂದರೆ ಮುಂದಕ್ಕೆ ಹೋಗು ಎನ್ನುವುದು.
ಈ ವೈರುಧ್ಯಗಳು ನಮ್ಮ ಜೀವನದ ವೈರುಧ್ಯಗಳನ್ನು ಪ್ರತಿಬಿಂಬಿಸುತ್ತವೆ. ನಮ್ಮ ಭ್ರಮೆಗಳು ಮಾನವೀಯವಾಗಿವೆ, ಆದರೆ ವಾಸ್ತವದಲ್ಲಿ ನಮ್ಮ ನಡವಳಿಕೆಗಳು ತದ್ವಿರುದ್ಧವಾಗಿವೆ.
ಇಂಥ ವೈರುಧ್ಯಗಳಿಂದ ಜನಸಮುದಾಯವನ್ನು ವಿಮೋಚನೆಗೊಳಿಸುವುದೇ ಬಸವಣ್ಣನವರ ಮುಖ್ಯ ಉದ್ದೇಶವಾಗಿತ್ತು. ಆದರೆ ಇನ್ನೂ ಸಾಂಪ್ರದಾಯಿಕ ಸಮಾಜ, ಅದರಿಂದ ಸ್ವಲ್ಪವೂ ಹೊರಬರಲು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ವೈಚಾರಿಕವಾದ ಮಾನಸಿಕ ಸಿದ್ಧತೆಗೆ ಸಮಾಜವನ್ನು ಅಳವಡಿಸುವುದು ಬಸವಣ್ಣನವರ ತುರ್ತು ಕ್ರಮವಾಗಿತ್ತು. ಅದಕ್ಕಾಗಿ ಹೊಸ ಚಿಂತನೆಗಳನ್ನು ಸಮಾಜದ ಎಲ್ಲಡೆ ಪ್ರಸಾರ ಮಾಡುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕಜೀವಿಗಳನ್ನು ವಿಮೋಚನೆಯ ಶರಣರನ್ನಾಗಿ ಸಿದ್ಧಗೊಳಿಸಿದರು.
ಹೊಸ ವಿಚಾರಗಳ ಪ್ರಸಾರವನ್ನೇ ಕಾಯಕವಾಗಿಸಿಕೊಂಡ ಶರಣರಿಗೆ ತತ್ತ್ವಜಂಗಮರೆಂದು ಕರೆಯಲಾಯಿತು. ಆ ಶರಣರು ಮನೆಮಾರು ಬಿಟ್ಟು ಹಳ್ಳಿ ಪಟ್ಟಣಗಳೆನ್ನದೆ ನಿರಂತರ ಮೌಢ್ಯವಿರೋಧಿ ಮತ್ತು ಸಮಾನತೆಯ ಪರವಾದ ತತ್ತ್ವಪ್ರಸಾರದಲ್ಲಿ ತೊಡಗಿದರು. ಹೀಗಾಗಿ ಒಂದು ತಲೆಮಾರಿನ ಅವಧಿಯಲ್ಲೇ ಈ ಹೊಸಬೆಳಕು ಸಹಸ್ರಾರು ವರ್ಷಗಳ ಅಂಧಃಕಾರವನ್ನು ಹೊಡೆದೋಡಿಸತೊಡಗಿತು. ಆದರೆ ಸಾಮಾಜಿಕ ವೈರುಧ್ಯಗಳನ್ನು ಎದುರಿಸುತ್ತಲೇ ಈ ಸಾಧನೆಯನ್ನು ಸಾಧಿಸಬೇಕಾಯಿತು.
ಹೊಸ ಚಿಂತನೆಯ ಆರಂಭದ ಕಾಲಘಟ್ಟದಲ್ಲಿ ಬಸವಣ್ಣನವರು ಬರೆದ ವಚನವಿದು. ಸಂಪ್ರದಾಯಗಳಿಗೆ ಒಗ್ಗಿ ಹೋಗಿದ್ದ ಜನರು ಸಹಜವಾಗಿಯೇ ಹೊಸದನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಹೊಸ ತತ್ತ್ವ ಪ್ರಸಾರಕರ ಬಗ್ಗೆ ಉದಾಸೀನ ತಾಳುತ್ತಿದ್ದರು. ಈ ಹೊಸ ವಿಚಾರಗಳಿಗೆ ಮನಸ್ಸನ್ನು ಒಡ್ಡದವರು ಕಲ್ಲು ತಾಗಿದ ಮಣ್ಣಿನ ಹೆಂಟೆಯಂತಾಗುವರು ಎಂದಿದ್ದಾರೆ. ಹೀಗೆ ನಿಷ್ಪ್ರಯೋಜಕವಾಗದೆ ಬದುಕಲು ಕಲಿಯಲು ಬಸವಣ್ಣನವರು ಸೂಚಿಸುತ್ತಾರೆ.

***

ವಚನ – ನಿರ್ವಚನ : ರಂಜಾನ್ ದರ್ಗಾ

 

 

administrator

Related Articles

Leave a Reply

Your email address will not be published. Required fields are marked *