ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಧಿಯ ಹಂಗೇಕಯ?
ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ
ಚೆನ್ನಮಲ್ಲಿಕಾರ್ಜುನಾ.
-ಅಕ್ಕ ಮಹಾದೇವಿ
ಉಸುರಿಗೆ ಪರಿಮಳವಿಲ್ಲದ ಕಾರಣ ನಾವು ಹೂವಿನ ಸುವಾಸನೆ ಬಯಸುತ್ತೇವೆ. ಒಂದು ವೇಳೆ ಉಸುರೇ ಪರಿಮಳವಾದರೆ ಅದು ಅಘಟಿತ ಘಟನೆಯಗುವುದು. ಇಂಥ ಘಟನೆಗಳು ಕಾವ್ಯಲೋಕದಲ್ಲಿ ಘಟಿಸುತ್ತವೆ. ಪರಿಶುದ್ಧ ಮಾನವರ ಉಸಿರು ಪರಿಮಳದ ಹಾಗೆ ಎಂದು ಅನುಭಾವಿಗಳು ಹೇಳುತ್ತಾರೆ. ಅಕ್ಕಮಹಾದೇವಿಯ ವಚನಗಳು ಕಾವ್ಯಶಕ್ತಿಯಿಂದ ಅನುಪಮವಾಗಿವೆ. ಎಲ್ಲಕ್ಕೂ ಹೆಚ್ಚಾಗಿ ಬದುಕಿನ ಕಾಳಜಿಯಿಂದ ಮಹತ್ವಪೂರ್ಣವಾಗಿವೆ. ಅಕ್ಕಮಹಾದೇವಿ ವೀರವಿರಾಗಿಣಿಯಾದರೂ ಸಂಸಾರವನ್ನು ಆನಂದಮಯಗೊಳಿಸುವ ಛಲ ಹೊತ್ತವಳು. ಆದರ್ಶ ಸತಿ-ಪತಿ ಹೇಗಿರಬೇಕೆಂಬುದನ್ನು ತನ್ನ ಮತ್ತು ಚೆನ್ನಮಲ್ಲಿಕಾರ್ಜುನ ದೇವರ ಸಂಬಂಧದಿಂದ ಸೂಚಿಸಿದವಳು. ಪವಿತ್ರ ಬದುಕನ್ನು ಹೊಂದುವ ಮೂಲಕ ಆಧ್ಯಾತ್ಮಿಕ ಅನುಭವ ಮತ್ತು ಲೌಕಿಕ ಅನುಭವದ ಮಧ್ಯದ ಅಂತರವನ್ನು ಕಳೆದವಳು. ಪಾವಿತ್ರ್ಯದ ಸಾಕಾರ ರೂಪವಾಗಿ ಕಂಡವಳು.
ಏಕಾಂತ ಮತ್ತು ಪರಮನಂದದ ಸ್ಥಿತಿಯನ್ನು ಅನುಭವಿಸುವುದು ಅಧ್ಯಾತ್ಮಜೀವಿಗಳ ಆಶಯವಾಗಿರುತ್ತದೆ. ಆದರೆ ಅದಕ್ಕಾಗಿ ಬದುಕಿನಿಂದ ಪಲಾಯನ ಮಾಡಬೇಕಿಲ್ಲ ಎಂದು ಅಕ್ಕ ಸೂಚಿಸುತ್ತಾಳೆ. ಎಲ್ಲವನ್ನೂ ತೊರೆದು ಬದುಕನ್ನು ಪ್ರೀತಿಸುವ ಕಲೆಯನ್ನು ಕಲಿಸುತ್ತಾಳೆ. ಕ್ಷಮಾಗುಣ, ಇಂದ್ರಿಯಗಳ ಮೇಲೆ ಹಿಡಿತ, ಶಾಂತಭಾವ ಮತ್ತು ಸಹನಶಕ್ತಿಯುಳ್ಳವರು ಸಂಸಾರದಲ್ಲಿದ್ದರೂ ಸ್ಥಿತಪ್ರಜ್ಞರಾಗೇ ಇರುತ್ತಾರೆ. ಅಂಥವರು ಸಮಾಧಿ ಸ್ಥಿತಿಯನ್ನು ಹೊಂದಲು ಹಿಮಾಲಯಕ್ಕೆ ಹೋಗಬೇಕಿಲ್ಲ. ಅವರು ಸಂಸಾರದಲ್ಲಿದ್ದುಕೊಂಡೇ ಸದ್ಗತಿಯನ್ನು ಹೊಂದುತ್ತಾರೆ.
ಅದೇ ರೀತಿ ಜಗದ ಜಂಜಾಟದಿಂದ ದೂರ ಉಳಿಯುವುದಕ್ಕಾಗಿ ಏಕಾಂತಕ್ಕೆ ಪಲಾಯನ ಮಾಡುವವರೂ ಉಂಟು. ಆದರೆ ಜಗದ ನೋವನ್ನು ತಮ್ಮ ನೋವಾಗಿಸಿಕೊಂಡ ಶರಣರು ಜನರ ಮಧ್ಯೆ ಇದ್ದುಕೊಂಡು, ಅವರ ಅನುಭವವನ್ನು ಗೌರವಿಸುತ್ತಲೇ ಅವರಿಗೆ ಹೊಸ ಬದುಕಿನ ಅರಿವನ್ನು ಕೊಡುತ್ತ ಸಾಗಿದವರು. ಲೋಕವೇ ತಾವಾದವರು. ಕ್ಷಮೆ, ದಮೆ, ಶಾಂತಿ ಮತ್ತು ಸೈರಣೆಯಿಂದ ಇದ್ದವರು. ಹೀಗಾಗಿ ಶರಣರಿಗೆ ಸಮಾಧಿಯ ಮತ್ತು ಏಕಾಂತದ ಹಂಗು ಇರಲಿಲ್ಲ. ಅವರು ಜನರ ಜೊತೆಗೇ ಇದ್ದು ಸಮಾಜ ಪರಿವರ್ತನೆಯಲ್ಲಿ ತೊಡಗಿದ್ದರು. ಸರ್ವಸಮತ್ವದ ಸಮಾಜಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ್ದರು. ಇಂಥ ಶರಣಸಂಕುಲದಲ್ಲಿ ಕಂಗೊಳಿಸುವ ಅಕ್ಕಮಹಾದೇವಿಯ ಈ ವಚನ ಜೀವಪರ ಧೋರಣೆಯ ಪ್ರತೀಕವಾಗಿದೆ. ಅಕ್ಕಮಹಾದೇವಿ ಈ ವಚನದಲ್ಲಿ ‘ಸಮಾಧಿ’ ಮತ್ತು ‘ಏಕಾಂತ’ದ ಅರ್ಥವಿಸ್ತಾರ ಮಾಡಿದ್ದಾಳೆ. ವ್ಯಷ್ಟಿ ಪ್ರಜ್ಞೆಯ ಈ ಪದಗಳು ಅಕ್ಕನ ವಚನದಲ್ಲಿ ಸಮಷ್ಟಿ ಪ್ರಜ್ಞೆಯ ಪ್ರತೀಕವಾಗಿ ಮಾನವೀಯ ಚಿಂತನೆಗೆ ಹಚ್ಚುತ್ತವೆ.
ವಚನ – ನಿರ್ವಚನ: ರಂಜಾನ್ ದರ್ಗಾ