ಹುಬ್ಬಳ್ಳಿ-ಧಾರವಾಡ ಸುದ್ದಿ
(5) ವಚನ ಬೆಳಕು:  ಗುಮ್ಮಡಿಯಂತಪ್ಪ ತಾಯಿ

(5) ವಚನ ಬೆಳಕು: ಗುಮ್ಮಡಿಯಂತಪ್ಪ ತಾಯಿ

ಗುಮ್ಮಡಿಯಂತಪ್ಪ ತಾಯಿ ನೋಡೆನಗೆ,
ಕಲಕೇತನಂತಪ್ಪ ತಂದೆ ನೋಡೆನಗೆ,
ಮೋಟನಂತಪ್ಪ ಗಂಡ ನೋಡೆನಗೆ,
ಮರಗಾಲಲಟ್ಟಟ್ಟಿ ಸದೆದ ನೋಡಯ್ಯಾ.
ಇಂದೆನ್ನ ಒಕ್ಕತನ ಹೋದಡೆ ಹೋಗಲಿ
ಮರಗಾಲ ಬಿಟ್ಟಡೆ, ಸಂಗಾ ನಿಮ್ಮಾಣೆ.
-ಬಸವಣ್ಣ

ಮೆಕವೆಲ್ಲಿಯ (1469-1527) `ಮಾಡರ್ನ್ ಪ್ರಿನ್ಸ್’ ಜನರಲ್ಲಿ ಆತ್ಮವಿಶ್ವಾಸ ತುಂಬಿ, ಅವರನ್ನು ಸಂಘಟಿಸಿ, ಅವರ ಆಶಯಗಳನ್ನು ಸಾಮೂಹಿಕ ನಿರ್ಧಾರಗಳಾಗುವಲ್ಲಿ ಸಹಾಯ ಮಾಡುತ್ತಾನೆ. ಆತ ಕಾಯಕಜೀವಿಗಳ ಸಾಮೂಹಿಕ ಅಭಿವ್ಯಕ್ತಿಯಾಗಿದ್ದಾನೆ. ಹೊಸ ರಾಜ್ಯ ಮತ್ತು ಸಮಾಜ ನಿರ್ಮಾಣವಾಗಬೇಕಾದರೆ ವೈಜ್ಞಾನಿಕ ಮನೋಭಾವದಿಂದ ಕೂಡಿದ ವಾದಗಳೊಂದಿಗೆ ವ್ಯವಸ್ಥಿತವಾಗಿ ಬೆಳೆಯಬೇಕೆನ್ನುತ್ತಾನೆ. ಜನಸಮುದಾಯದ ಪ್ರಜ್ಞೆಯಾಗಿ, ಧ್ವನಿಯಾಗಿ, ಜನರ ಆಶೋತ್ತರಗಳ ಪ್ರತಿನಿಧಿಯಾಗಿ ನಿಲ್ಲÄತ್ತಾನೆ. 15ನೇ ಶತಮಾನದಲ್ಲಿ ಮೆಕವೆಲ್ಲಿ ಕಲ್ಪಿಸಿದ ನವೀನ ರಾಜಕುಮಾರನಿಗಿಂತ 12ನೇ ಶತಮಾನದಲ್ಲಿ ನಮ್ಮ ಹಾಗೆ ಜನಿಸಿ ನಮಗೆ ಕಲಿಸಿದ ಬಸವಣ್ಣನವರು ಮುಂದುವರಿದವರಾಗಿದ್ದಾರೆ.
ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರಿಗೆ ಜನಹಿತ ಮಹತ್ವದ್ದಾಗಿತ್ತು. ಜನರ ಹಿತಾಸಕ್ತಿಯ ಪ್ರಕಾರ ಬಿಜ್ಜಳ ರಾಜನ ಹಿತಾಸಕ್ತಿಗಳು ಬದಲಾಗಬೇಕು ಎಂಬುದು ಅವರ ನಿಲುವಾಗಿತ್ತು. (ಈ ಕಾರಣಕ್ಕಾಗಿಯೇ ಅವರು ಕೊನೆಗೆ ಪ್ರಧಾನಿ ಪದವಿಯನ್ನೂ ತ್ಯಾಗ ಮಾಡಿದರು.) ಅಂದಿನ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಜೊತೆ ಅವರು ತನು ಮನ ಧನಗಳೊಂದಿಗೆ ಗುರುತಿಸಿಕೊಂಡರು. ಜನಸಮುದಾಯವನ್ನು ತೀವ್ರವಾಗಿ ಪ್ರೀತಿಸಿದರು. ಅವರು ಜನಸಮುದಾಯಕ್ಕೆ ಸ್ಪಂದಿಸಿದAತೆ ಜಗತ್ತಿನ ಯಾವ ಪ್ರಧಾನಿಯೂ ಸ್ಪಂದಿಸಿಲ್ಲ!
ಅಪಮಾನಕ್ಕೊಳಗಾದವರು, ಅಂಗವಿಕಲರು, ಅಸಹಾಯಕರು ತಮ್ಮ ತಂದೆ, ತಾಯಿ ಮತ್ತು ಒಡೆಯರು ಎಂದು ಈ ವಚನದಲ್ಲಿ ಬಸವಣ್ಣನವರು ಕರೆಯುತ್ತಾರೆ. ಅವರ ಜೊತೆ ಹೀಗೆ ರಕ್ತಸಂಬAಧ ಬೆಳೆಸಿಕೊಳ್ಳುತ್ತಾರೆ. ಮೊಲೆ ಮೂಗು ಕೊಯ್ಸಿಕೊಂಡು ಅಪಮಾನಕ್ಕೆ ಒಳಗಾದ ಜೋಗಿತಿ ತಮ್ಮ ತಾಯಿ ಎಂದು ಹೇಳುತ್ತಾರೆ. ಅಂಥ ತಾಯಂದಿರ ಕಣ್ಣೀರನ್ನು ಒರೆಸಿ ಹೊಸ ಬದುಕು ಕೊಡುವುದು ಅವರ ಮಗನಾದ ತಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸುತ್ತಾರೆ. ಕಲ್ಲಿನಿಂದ ಎದೆಗೆ ಬಡಿದುಕೊಂಡು ಭಿಕ್ಷೆ ಕೇಳುವ ಕಲಕೇತಯ್ಯಗಳು ತಮ್ಮ ತಂದೆ ಎಂದು ಗೌರವಿಸುತ್ತಾರೆ. ಅಂಥವರನ್ನು ದುಃಖದಿಂದ ಮೇಲೆತ್ತುವುದು ಅವರ ಮಗನಾದ ತಮ್ಮ ಕರ್ತವ್ಯ ಎಂದು ನಿರ್ಧರಿಸುತ್ತಾರೆ. ಕೈ ಇಲ್ಲದ ಅಸಹಾಯಕರು ತಮ್ಮ ಒಡೆಯ ಎಂದು ಸಾರುತ್ತಾರೆ. ಅಂಥ ಒಡೆಯರಿಗೆ ತಾವು ಅಧೀನರಾಗಿರುವುದಾಗಿ ಘೋಷಿಸುತ್ತಾರೆ. ಕಾಲಿಲ್ಲದ ಒಡೆಯರು ಮರಗಾಲಿನಿಂದ ಒದೆಯುತ್ತಾರೆ ಎಂದು ಹೇಳುವ ಮೂಲಕ ಜನರ ಅಸಹಾಯಕ ಮನಸ್ಥಿತಿಯ ವಿರಾಟ್ ಸ್ವರೂಪದ ದರ್ಶನ ಮಾಡಿಸುತ್ತಾರೆ. `ನನ್ನ ಪ್ರಧಾನಿ ಹುದ್ದೆಯ ನಂಟುತನ ಹೋದರೂ ಹೋಗಲಿ ದೇವರೇ ಮರಗಾಲ ಬಿಡುವುದಿಲ್ಲ ನಿಮ್ಮಾಣೆ’ ಎಂದು ಪ್ರತಿಜ್ಞೆ ಮಾಡುತ್ತಾರೆ. ಅಂದರೆ ತಾವು ಎಂಥದೇ ಪ್ರಸಂಗದಲ್ಲಿ ಅಸಹಾಯಕರ ಪರವಾಗಿಯೇ ಇರುವುದಾಗಿ ತಿಳಿಸುತ್ತಾರೆ.

 

ವಚನ – ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *