ಹುಬ್ಬಳ್ಳಿ-ಧಾರವಾಡ ಸುದ್ದಿ
3 ವಚನ ಬೆಳಕು:   ಆವ ಕಾಯಕವಾದಡೂ ಸ್ವಕಾಯಕವ ಮಾಡು

3 ವಚನ ಬೆಳಕು: ಆವ ಕಾಯಕವಾದಡೂ ಸ್ವಕಾಯಕವ ಮಾಡು

ಆವ ಕಾಯಕವಾದಡೂ ಸ್ವಕಾಯಕವ ಮಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮ.

-ಲದ್ದೆಯ ಸೋಮಣ್ಣ

ಬಸವಣ್ಣನವರ ಸಮಕಾಲೀನ ಶರಣ ಸೋಮಣ್ಣ ಈಗಿನ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲದ್ದೆ (ಲಾಧಾ) ಗ್ರಾಮದವನು. ಲದ್ದೆ ಎಂದರೆ ಹೊರೆ ಎಂಬ ಅರ್ಥವೂ ಇದೆ. ಲದ್ದೆ ಗ್ರಾಮದಿಂದ ಹುಲ್ಲಿನ ಹೊರೆಯನ್ನು ಹೊತ್ತು, ಸಮೀಪದ ಬಸವಕಲ್ಯಾಣ ತಾಲ್ಲೂಕಿನ ಹುಲಸೂರಿನಲ್ಲಿ ಮಾರುವ ಕಾಯಕವನ್ನು ಕೈಕೊಂಡಿದ್ದ ಶರಣ ಲದ್ದೆಯ ಸೋಮಣ್ಣನ ವ್ಯಕ್ತಿತ್ವ ಅನುಕರಣೀಯವಾಗಿದೆ. ಸೋಮಣ್ಣನ ಒಂದೇ ಒಂದು ವಚನ ಸಿಕ್ಕಿದೆ. ಇದು ಆತನ ಉತ್ಸಾಹದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ.
ಯಾವುದೇ ಕಾಯಕವಾದರೂ ತಲ್ಲೀನವಾಗಿ ಮಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಶರಣಸಂಕುಲ (ಗುರು ಲಿಂಗ ಜಂಗಮ)ಕ್ಕೆ ಅರ್ಪಿಸು. ಪ್ರಸಾದವನ್ನು ಬಯಸು. ಅರ್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ, ಇದಕ್ಕೆ ಆ ದೇವರ ಹಂಗೇಕೆ? ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ.
ಆತ್ಮಗೌರವ, ಕಾಯಕನಿಷ್ಠೆ, ಶರಣಸಂಕುಲಕ್ಕೆ ನಿಷ್ಠೆ, ದೇವರ ಹಂಗಿನಲ್ಲಿ ಕೂಡ ಇರಬಾರದೆಂಬ ಛಲ ಮತ್ತು ಜನನದಂತೆ ಮರಣ ಕೂಡ ಜೈವಿಕ ಪ್ರಕ್ರಿಯೆಯಗಿರುವುದರಿಂದ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂಬ ಮಹತ್ವದ ನಿಲುವುಗಳನ್ನು ಲದ್ದೆಯ ಸೋಮಣ್ಣ ಈ ವಚನದಲ್ಲಿ ತಾಳಿದ್ದಾನೆ.
ಜನ ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಡಿದರೆ ಕಾಯಕದ ಆನಂದವನ್ನು ಪಡೆಯಲಾರರು. ಇಂಥ ಸ್ಥಿತಿಯಲ್ಲಿ ಅವರು ಅನಾಥಪ್ರಜ್ಞೆಯಿಂದ ಬಳಲುತ್ತಾರೆ. ಅನೇಕ ಮಂತ್ರಿಗಳು ತಮಗೆ ಸರಿಯದ ಖಾತೆ ಸಿಕ್ಕಿಲ್ಲ ಎಂದು ಕೊರಗುತ್ತಾರೆ. ಅನೇಕ ಅಧಿಕಾರಿಗಳು ತಮಗೆ ಸರಿಯದ ಹುದ್ದೆ ಸಿಕ್ಕಿಲ್ಲ ಎಂದು ಬಳಲುತ್ತಾರೆ. ಆದರೆ ಲದ್ದೆಯ ಸೋಮಣ್ಣ ಹುಲ್ಲು ಮಾರುವುದರ ತೃಪ್ತಿಪಟ್ಟು ನಮ್ಮೆಲ್ಲರಿಗೆ ಗುರು ಸ್ಥಾನದಲ್ಲಿ ನಿಲ್ಲುತ್ತಾನೆ.
ದುಡಿಯುವುದು ಸ್ವಾಭಿಮನದ ಪ್ರತೀಕ. ಬೇಡುವುದು ಅಪಮನದ ಪ್ರತೀಕ ಎಂದು ಆತ ಸೂಚಿಸಿದ್ದಾನೆ. ಹುಲಸೂರಿನಲ್ಲಿ ಲದ್ದೆಯ ಸೋಮಣ್ಣನ ಗುಡಿ ಇದೆ. ಇವನ ಆರಾಧ್ಯದೈವ ಸೋಮೇಶ್ವರನ ಗುಡಿ ಲದ್ದೆ ಗ್ರಾಮದಲ್ಲಿದೆ. ‘ಭಾಪು ಲದ್ದೆಯ ಸೋಮಾ’ ಎಂಬ ಅವನ ವಚನಾಂಕಿತದಲ್ಲಿ ಸ್ವಾಭಿಮಾನದ ಉತ್ಸಾಹ ಮತ್ತು ದೇವರ ಜೊತೆಗಿನ ಸಲುಗೆಯ ಭಾವ ಎದ್ದು ಕಾಣುತ್ತದೆ.

ವಚನ – ನಿರ್ವಚನ : ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *