ಲಂಚವಂಚನಕ್ಕೆ ಕೈಯಾನದ ಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
-ಸತ್ಯಕ್ಕ
ಕಸಗುಡಿಸುವ ಕಾಯಕದ ಶರಣೆ ಸತ್ಯಕ್ಕ ಆತ್ಮಗೌರವದ ಪ್ರತೀಕವಾಗಿದ್ದಾಳೆ. ಬಹುಪತ್ನಿತ್ವದ ಹಿನ್ನೆಲೆಯಲ್ಲಿ ಶಿವನನ್ನು ಕೂಡ ಪ್ರಶ್ನಿಸುವಂಥ ವಚನಗಳನ್ನು ಬರೆದ ಕೀರ್ತಿ ಆಕೆಗೆ ಸಲ್ಲುತ್ತದೆ. ಶರಣಸಂಕುಲದ ಕಾಯಕಜೀವಿಗಳು ಸ್ವತಂತ್ರರು ಎಂಬುದನ್ನು ಸತ್ಯಕ್ಕ ಎತ್ತಿತೋರಿಸಿದ್ದಾಳೆ. ಕಾಯಕದ ಮಹತ್ವವನ್ನು ಅರಿತವರ ಸ್ವಾವಲಂಬಿ ಬದುಕು ಆನಂದಮಯವಾಗಿರುತ್ತದೆ. ಅವರು ನಾಳೆಗಾಗಿ ಚಿಂತಿಸುವವರಲ್ಲ. ಪರಿಶುದ್ಧ ಬದುಕಿಗಾಗಿ ಚಿಂತನೆ ಮಾಡುವವರು. ಅಸತ್ಯದಿಂದ ದೂರವಿರುವವರು. ಸರಳ ಸಹಜ ಬದುಕಿನಲ್ಲಿ ನೆಮ್ಮದಿ ಕಾಣುವವರು.
ಭ್ರಷ್ಟಾಚಾರದ ಬದುಕು ಎಲ್ಲ ಕಾಲದಲ್ಲಿಯೂ ಇದೆ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಸಂತರ ಹೆಸರಿನಲ್ಲಿ, ಸಮಜದ ಹೆಸರಿನಲ್ಲಿ ಮತ್ತು ಅಧಿಕಾರದ ಹೆಸರಿನಲ್ಲಿ ಭ್ರಷ್ಟಾಚಾರ ತನ್ನ ಕರಾಳ ಸ್ವರೂಪವನ್ನು ತೋರಿಸುತ್ತಲೇ ಇರುತ್ತದೆ. ಜನರು ಎಲ್ಲವನ್ನೂ ಸಹಿಸಿಕೊಳ್ಳುತ್ತ ಜೀವನ ಸಾಗಿಸುತ್ತಿರುತ್ತಾರೆ. ಇದೆಲ್ಲ ಬದುಕಿನ ಭಾಗವೆಂದು ಸಹಿಸಿಕೊಳ್ಳುತ್ತಾರೆ. ಸಮಯ ಬಂದಾಗ ಅನೇಕರು ಅದೇ ದಾರಿಯಲ್ಲಿ ಮುನ್ನಡೆಯುತ್ತಾರೆ. ಆದರೆ ಸತ್ಯಕ್ಕ ‘ನಾನು ಅನ್ಯಾಯದ ಧನದಿಂದ ದೂರವಿದ್ದೇನೆ’ ಎಂದು ಎದೆತಟ್ಟಿ ಹೇಳುತ್ತಾಳೆ. ಅಷ್ಟೇ ಅಲ್ಲ, ಕಸಗುಡಿಸುವ ಕಾಯಕದ ಸಂದರ್ಭದಲ್ಲಿ ಬೆಲೆಯುಳ್ಳ ವಸ್ತುಗಳಾದ ಬಂಗಾರದ ಆಭರಣ, ರೇಷ್ಮೆವಸ್ತ್ರ ಮುಂತಾದವು ಬೀದಿಯಲ್ಲಿ ಬಿದ್ದಿದ್ದರೂ ಕಾಲಕಸದಂತೆ ನೋಡುತ್ತ, ಅವುಗಳನ್ನು ಮುಟ್ಟುವುದಿಲ್ಲ ಎಂದು ಹೇಳುತ್ತಾಳೆ. ಇವೆಲ್ಲವನ್ನೂ ಪ್ರತಿಜ್ಞಾವಿಧಾನದಲ್ಲಿ ತಿಳಿಸುತ್ತಾಳೆ. ತನಗೊಂದು ಪರಂಪರೆ ಇದೆ. ಅದುವೇ ಪ್ರಮಥರ ಪರಂಪರೆ. ಅಂಥ ಶರಣರ ಆಣೆ ಮಾಡುತ್ತ ದೃಢನಿಶ್ಚಯದಿಂದ ನುಡಿಯುತ್ತಾಳೆ. ತನ್ನ ಕಾಯಕದ ಮೂಲಕವೇ ಬದುಕುವುದಾಗಿ ವಚನ ನೀಡುತ್ತಾಳೆ.
ತನಗೆ ಈ ಶಕ್ತಿ ಹೇಗೆ ಬಂದಿತೆಂಬುದನ್ನು ಕೂಡ ಸತ್ಯಕ್ಕ ಮಾರ್ಮಿಕವಾಗಿ ತಿಳಿಸಿದ್ದಾಳೆ. ಪರಮಾತ್ಮನಲ್ಲಿ ಮತ್ತು ಕಾಯಕದಲ್ಲಿ ಅಚಲ ನಂಬಿಕೆ ಇದ್ದವರಿಗೆ ನಾಳಿನ ಭಯ ಇರುವುದಿಲ್ಲ ಎಂದು ಸೂಚಿಸಿದ್ದಾಳೆ. ಹೀಗೆ ನಂಬಿಕೆ ಇಲ್ಲದವರು ದುರ್ಬಲ ಮನದವರಾಗುತ್ತಾರೆ. ಭವಿಷ್ಯದ ಬಗ್ಗೆ ಹೆದರುತ್ತಾರೆ. ಹೇಗಾದರೂ ಮಡಿ ಸಂಗ್ರಹಿಸಿಡಬೇಕು ಎಂಬ ಭಾವ ತಾಳುತ್ತಾರೆ. ‘ನಾನು ಈ ರೀತಿ ಆಸೆಬುರುಕಿಯದರೆ ನನ್ನನ್ನು ನರಕಕ್ಕೆ ಅಟ್ಟಿ ನನ್ನಿಂದ ದೂರ ಹೋಗು ಎಂದು ದೇವರಿಗೆ ನಿರ್ಭಿಡೆಯಿಂದ ಹೇಳುತ್ತಾಳೆ. ಹಾಗೆ ಹೇಳುವುದರ ಮೂಲಕ ನಮ್ಮೊಳಗಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುತ್ತಾಳೆ.