ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ತಾ ಮಿಥ್ಯನಾದ

ವಚನ ಬೆಳಕು; ತಾ ಮಿಥ್ಯನಾದ

ತಾ ಮಿಥ್ಯನಾದ

ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ.
ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ.
ಅಂಗೈಯಲ್ಲಿ ಹಿಡಿದು ಕೈದು ನೋಡದೆ
ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ,
ತನ್ನ ತಾ ಮರೆದು ಅನ್ಯರ ದೆಸೆಯಿಂದ ತನ್ನ ಕೇಳುವನಂತಾಗದೆ
ಅರಿ ನಿಜದರಿವ ಮರೆಯದಂತೆ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.
                                                                                                 -ಕೀಲಾರದ ಭೀಮಣ್ಣ
ಕೀಲಾರ ಎಂದರೆ ಗೋಶಾಲೆ. ಕೀಲಾರದ ಭೀಮಣ್ಣ ಕಲ್ಯಾಣದಲ್ಲಿ ಗೋವಳಿಗನಾಗಿ ಜೀವನ ಸಾಗಿಸುತ್ತ ಆ ಅನುಭವದ ಮೂಲಕವೇ ಮಾರ್ಮಿಕ ವಚನಗಳನ್ನು ಬರೆದಿದ್ದಾನೆ. ‘ಗೋವಿಂಗೆ ಹಲವು, ಹಾಲಿಂಗೆ ಏಕ ವರ್ಣ’ ಎಂದು ಆತ ಬೇರೊಂದು ವಚನದಲ್ಲಿ ಹೇಳಿದ್ದಾನೆ. ಆ ಮೂಲಕ ಮಾನವ ಏಕತೆಯನ್ನು ಸೂಚಿಸಿದ್ದಾನೆ. ಮಾನವರು ತಮ್ಮ ಮೂಲವನ್ನು ಅರಿಯಬೇಕು ಮತ್ತು ಬದುಕಿನಲ್ಲಿ ಏಕತೆಯನ್ನು ಸಾಧಿಸಬೇಕು ಎಂಬುದು ಈತನ ಆಶಯವಾಗಿದೆ. ಕೀಲಾರದ ಭೀಮಣ್ಣನ ಸೂಕ್ಷ್ಮ ಚಿಂತನೆಗಳಿಗೆ ಅನುಭವದ ಮೆರುಗಿದೆ. ಧ್ವನಿಪೂರ್ಣವಾದ ಆತನ ವಚನಗಳು ಅನುಭಾವದ ಆನಂದವನ್ನು ನೀಡುತ್ತವೆ.
ನಮ್ಮ ಒಳಲೋಕದಂತೆ ಹೊರ ಲೋಕವಿರುತ್ತದೆ. ಒಳ್ಳೆಯವರ ಕಣ್ಣಿಗೆ ಒಳ್ಳೆಯವರೇ ಬೀಳುತ್ತಾರೆ. ‘ಒಳ್ಳೆಯದರ ಪ್ರತೀಕವಾಗಿರುವ ಧರ್ಮರಾಜನಿಗೆ ಲೋಕದಲ್ಲಿ ಕೆಟ್ಟವರು ಕಾಣುವುದೇ ಇಲ್ಲ. ಕೆಟ್ಟದ್ದರ ಪ್ರತೀಕವಾಗಿರುವ ದುರ್ಯೋಧನನಿಗೆ ಒಳ್ಳೆಯವರು ಕಾಣುವುದೇ ಇಲ್ಲ’ ನಾವು ಹೇಗೆ ಇರುವೆವೊ ಹಾಗೆಯೆ ಜಗತ್ತು ಕಾಣುವುದು.
ಒಳ್ಳೆಯವರು ಒಳ್ಳೆಯದನ್ನೇ ಬಯಸುತ್ತಾರೆ. ಅದಿಲ್ಲದ ಕಡೆಗಳಲ್ಲಿ ಅಂಥದನ್ನು ಸೃಷ್ಟಿಸಲು ಇಷ್ಟಪಡುತ್ತಾರೆ. ನಾವು ಸುಳ್ಳುಗಾರರಾಗಿದ್ದರೆ ಇಡೀ ಜಗತ್ತೇ ಸುಳ್ಳಿನ ಆಗರವಾಗಿ ಕಾಣುತ್ತದೆ. ನಾವು ಸತ್ಯವಂತರಾಗಿದ್ದರೆ ಇಡೀ ಜಗತ್ತೇ ಸತ್ಯ ಎಂಬುದರ ಅರಿವಾಗುತ್ತದೆ. ಆಯುಧವನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿ ತೀರ್ಮಾನಕ್ಕೆ ಬರಬೇಕು. ಅದೆಲ್ಲ ಬಿಟ್ಟು ದೂರದಿಂದಲೇ ನೋಡಿ ಖಡ್ಗ ಸರಿಯಿಲ್ಲ ಎಂದು ತೀರ್ಮಾನಿಸಿ ಕೊರಗುವವರ ಹಾಗೆ ನಮ್ಮ ಪರಿಸ್ಥಿತಿ ಆಗಬಾರದು. ಈ ಬದುಕು ಸಕಾರಾತ್ಮಕ ಚಿಂತನೆಯಿಂದ ಕೂಡಿರಬೇಕು. ಅದಕ್ಕಾಗಿ ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿ, ನಮ್ಮ ಯೋಗ್ಯತೆ ಏನು ಎಂದು ಅರಿಯುವುದು ಅವಶ್ಯವಾಗಿದೆ. ನಮ್ಮನ್ನು ನಾವೇ ಮರೆತು ಬೇರೆಯವರು ನಮ್ಮ ಬಗ್ಗೆ ಹೇಳುವುದರ ಮೂಲಕವೇ ನಮ್ಮನ್ನು ಅರ್ಥೈಸಿಕೊಳ್ಳುವುದು ಬದುಕಿನ ದುರಂತವಾಗಿದೆ. ನಿಜವಾದ ಅರಿವನ್ನು ಪಡೆದ ನಂತರ ಅದನ್ನು ದೈನಂದಿನ ಬದುಕಿನ ತೀವ್ರತೆಗಳಲ್ಲಿ ಮರೆಯದೆ ಕಾಪಾಡಿಕೊಂಡು ಬರಬೇಕಾಗಿದೆ. ಆ ಮೂಲಕ ಬದುಕನ್ನು ಅರ್ಥೈಸಿಕೊಳ್ಳಬೇಕಾಗಿದೆ. ಹೀಗೆ ತನ್ನ ತಾ ಅರಿತು ಬದುಕನ್ನು ಸಕಾರಾತ್ಮಕವಾಗಿ, ಕ್ರಿಯಾಶೀಲವಾಗಿ ಮತ್ತು ಆನಂದಮಯವಾಗಿ ನೋಡುವುದರಲ್ಲೇ ಮಾನವಜನ್ಮದ ಸಾರ್ಥಕತೆ ಇದೆ. ಕಾಲಾತೀತ ಮತ್ತು ಕರ್ಮಾತೀತವಾದ ಇಷ್ಟಲಿಂಗದಲ್ಲಿ ಆಶ್ರಯ ಪಡೆದವನು ಈ ರೀತಿ ಬದುಕುವ ಕಲೆಯನ್ನು ಕಲಿತಿರುತ್ತಾನೆ ಎಂದು ಕೀಲಾರದ ಭೀಮಣ್ಣ ಹೇಳುತ್ತಾನೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *