ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು; ಗೋವು ಮೊದಲು ಚತುಃಪಾದಿ ಜೀವಂಗಳು

ವಚನ ಬೆಳಕು; ಗೋವು ಮೊದಲು ಚತುಃಪಾದಿ ಜೀವಂಗಳು

ಗೋವು ಮೊದಲು ಚತುಃಪಾದಿ ಜೀವಂಗಳು

ಗೋವು ಮೊದಲು ಚತುಃಪಾದಿ ಜೀವಂಗಳು
ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ
ಬೀಡಿಂಗೆ ಹೋಹಂತೆ,
ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.
ಬಂದುದ ಮರೆದ ಬಂಧಜೀವಿಗ ನಾನಾಗಿ
ಜೀವಕಾಯದ ಸಂದ ಬಿಡಿಸು.
ಬಿಂದು ನಿಲುವ ಅಂದವ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
                                                                                -ಕೋಲ ಶಾಂತಯ್ಯ
ವೇತ್ರಧರ ಎಂದರೆ ವೇತ್ರ (ಬೆತ್ತ)ದ ಕೋಲನ್ನು ಹಿಡಿದಿರುವ ದ್ವಾರಪಾಲಕ. ಈ ಕಾಯಕದವನಿಗೆ ಕಟ್ಟಿಗೆಕಾರ ಮತ್ತು ದಂಡಧರ ಎಂದೂ ಕರೆಯುತ್ತಾರೆ. ಕಲ್ಯಾಣದ ಪ್ರಧಾನಿ ಬಸವಣ್ಣನವರ ಸಭೆ, ಸಮಾರಂಭ ಮುಂತಾದ ಕಡೆಗಳಲ್ಲಿ ಜನರನ್ನು ನಿಯಂತ್ರಿಸುತ್ತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಈತನ ಕಾಯಕ. ಕೋಲ ಶಾಂತಯ್ಯ ಈ ಕಾಯಕದ ಶರಣನಾಗಿದ್ದ. ಅಲ್ಲದೆ ಮೂಲತಃ ಪಶುಪಾಲನೆಯ ಅನುಭವವನ್ನೂ ಹೊಂದಿದ್ದ. ಅಂತೆಯೆ ಪ್ರಾಣಿಗಳು ಮತ್ತು ಜನರ ಮಧ್ಯದ ಅಂತರವನ್ನು ಸೂಕ್ಷ್ಮವಾಗಿ ಅರಿಯುವಲ್ಲಿ ಆತ ಸಫಲನಾಗಿದ್ದಾನೆ.
ಆಕಳು ಮೊದಲಾದ ಪ್ರಾಣಿಗಳು ತಮ್ಮ ಕೊಟ್ಟಿಗೆಯಿಂದ ಅಡವಿಗೆ ಮೇಯಲು ಹೋಗುತ್ತವೆ. ಗುಡ್ಡ ಬೆಟ್ಟ ಸುತ್ತುತ್ತವೆ. ‘ಮಲೆನಾಡುಗಿಡ್ಡ’ ಎಂಬ ತಳಿಯ ಕುಳ್ಳಹಸುಗಳು ದುರ್ಗಮ ಬೆಟ್ಟದ ತುದಿಯಲ್ಲೂ ಮೇಯಲು ಹೋಗುತ್ತವೆ. ಆದರೆ ಗೋಧೂಳಿ ಸಮಯದಲ್ಲಿ ಮನೆಯ ಹಾದಿ ಹಿಡಿಯುತ್ತವೆ. ಆ ಬೆಟ್ಟ ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಕಳೆದುಕೊಳ್ಳದೆ ತಮ್ಮ ಕೊಟ್ಟಿಗೆಯಲ್ಲಿ ಬಂದು ನಿಲ್ಲುತ್ತವೆ. ಹೀಗೆ ಬರಲಿಕ್ಕೆ ಅವುಗಳಿಗೆ ಸಾಧ್ಯ ಹೇಗಾಗುವುದೆಂದರೆ, ಅವು ಹೋಗುವಾಗಲೇ ತಮ್ಮ ದಾರಿಯನ್ನು ಮೂಸಿ ನೋಡುತ್ತ ಗುರುತಿಸಿಕೊಂಡಿರುತ್ತವೆ. ಮರಳಿ ಬರುವಾಗ ಆ ಅರಿವಿನಿಂದಲೇ ಸರಿಯಾಗಿ ಬಂದು ಮನೆ ಸೇರುತ್ತವೆ. ಮಾನವರಿಗೆ ಈ ಪರಿಜ್ಞಾನವಿಲ್ಲ. ಪಶುವಿಗೆ ಇರುವಷ್ಟು ಕೂಡ ಬುದ್ಧಿಯ ಆಧಾರ ಅವರಿಗಿಲ್ಲ. ನಾವು ಈ ಭೂಮಿಗೆ ಬಂದ ದಾರಿಯನ್ನು ಮರೆತಿದ್ದೇವೆ. ವಸ್ತುಮೋಹದಿಂದ ಕೂಡಿದ ಇಹದ ಬಂಧನಕ್ಕೊಳಗಾದ ಜೀವಿಗಳಾಗಿದ್ದೇವೆ. ಮಾನವರು ಈ ಗೊಂದಲದಿಂದ ಪಾರಾಗಲೇ ಬೇಕಾಗಿದೆ. ಆದ್ದರಿಂದ ದೇವರೇ ಈ ಜೀವ ಮತ್ತು ದೇಹದ ತೊಡಕನ್ನು ಬಿಡಿಸು. ಈ ಸೃಷ್ಟಿಕ್ರಿಯೆಯ ರೀತಿಯನ್ನು ತಿಳಿಸು ಎಂದು ದೇವರಲ್ಲಿ ಕೋಲ ಶಾಂತಯ್ಯ ಬೇಡಿಕೊಳ್ಳುತ್ತಾನೆ.
ಕೋಲ ಶಾಂತಯ್ಯನಂಥ ಜನಸಾಮಾನ್ಯರು ಬಸವಣ್ಣನವರ ಪರಿಸರದಲ್ಲಿ ಅನುಭಾವಿಗಳಾಗಿ ಬೆಳೆದು ವಚನ ರಚನೆ ಮಾಡಿದ್ದು ಅನುಪಮ ಘಟನೆಯಾಗಿದೆ. ಬಸವಣ್ಣನವರು ಎಲ್ಲ ಮಾನವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರಿಸಿದರು. ಪ್ರತಿಯೊಬ್ಬರಲ್ಲಿ ಆಶಾವಾದ ಪಲ್ಲವಿಸುವಂತೆ ಮಾಡಿದರು. ತಮ್ಮ ಅನುಭವದ ಮೂಲಕವೇ ಬದುಕನ್ನು ಅರ್ಥೈಸಿಕೊಳ್ಳುವುದನ್ನು ಕಲಿಸಿದರು. ಜೀವಕಾರುಣ್ಯದಿಂದ ಕೂಡಿದ ಸ್ವಾಭಿಮಾನವನ್ನು ಬೆಳೆಸಿದರು.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *