ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;   ಉದಯದ ಮಾಗಿಯ ಬಿಸಿಲು

ವಚನ ಬೆಳಕು; ಉದಯದ ಮಾಗಿಯ ಬಿಸಿಲು

 ಉದಯದ ಮಾಗಿಯ ಬಿಸಿಲು

ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು;
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕಠಿಣವಾಗಿತ್ತು;
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು;
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾಯಿತ್ತು;
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.
-ಬಸವಣ್ಣ
ಚಾಂದ್ರಮಾನದ ಹನ್ನೊಂದನೆಯ ತಿಂಗಳಾದ ಮಾಗಿ (ಮಾಘ) ಶಿಶಿರ ಋತುವಿನಲ್ಲಿ ಬರುವುದು. ಚಳಿಗಾಲದಿಂದ ಬೇಸಗೆಗೆ ಹೋಗುವ ಸಂದರ್ಭವಿದು. ಚಳಿ ಹಿಡಿಯುವ ಈ ಮಾಘ ಮಾಸದಲ್ಲಿ ಬೆಳಗಿನ ಹೂಬಿಸಿಲು ನಮ್ಮ ಮೈಮನಗಳಿಗೆ ಮುದ ನೀಡುತ್ತದೆ. ಆದರೆ ಮಧ್ಯಾಹ್ನದ ಚುರುಗುಟ್ಟುವ ಬಿಸಿಲು ಶರೀರಕ್ಕೆ ತೀರ ಕಿರಿಕಿರಿ ಉಂಟುಮಾಡುತ್ತದೆ. ಮಾಗಿಯ ದಿನಗಳಲ್ಲಿ ಬೆಳಗಿನಿಂದ ಹಾಗೇ ಬಿಸಿಲು ಕಾಯಿಸುತ್ತ ಕೂಡುವ ಕೆಲವರಿಗೆ ಬಿಸಿಲೇರುತ್ತಿದ್ದಂತೆ ಜ್ವರ ಬಂದಂತಾಗುತ್ತದೆ.
ಬಸವಣ್ಣನವರು ಈ ವಚನದಲ್ಲಿ ಮಾಗಿಯ ಬಿಸಿಲಿನ ಎರಡು ಕಾಲಘಟ್ಟಗಳ ಹಿನ್ನೆಲೆಯಲ್ಲಿ ಲಿಂಗಭಕ್ತಿ ಮತ್ತು ಜಂಗಮಭಕ್ತಿಯ ಬಗ್ಗೆ ಇರುವ ಭಕ್ತರನೇಕರ ಮನಸ್ಥಿತಿಯ ಕುರಿತು ತಿಳಿಸಿದ್ದಾರೆ. ಮಾಗಿಯ ಬಿಸಿಲು ಏರಿದಂತೆ, ಮನಸ್ಸಿನಲ್ಲಿ ಮೂಡಿದ ಹಿತಭಾವ ಮಾಯವಾಗಿ ಕಿರಿಕಿರಿ ಆಗತೊಡಗುತ್ತದೆ. ಅದೇರೀತಿ ಲಿಂಗಭಕ್ತಿಯು ವೈಯಕ್ತಿಕ ಆನಂದದ ನೆಲೆಯಿಂದ ಸಾಮಾಜಿಕ ಜವಾಬ್ದಾರಿಯ ಪ್ರತೀಕವಾದ ಜಂಗಮಭಕ್ತಿಯ ಕಡೆಗೆ ಮುನ್ನಡೆಯಬೇಕೆಂಬ ಲಿಂಗತತ್ತ್ವ ಭಕ್ತರ ಮನಸ್ಸಿನಲ್ಲಿ ಮೂಡತೊಡಗುತ್ತದೆ. ಆಗ ದುರ್ಬಲ ಮನಸ್ಸಿನ ಭಕ್ತರನೇಕರು ಗಾಬರಿಗೊಳ್ಳುತ್ತಾರೆ. ಅವರಿಗೆ ಹೂ ಪತ್ರೆ, ಜಲ, ವಿಭೂತಿ ಮುಂತಾದ ಪೂಜಾ ಪರಿಕರಗಳಿಂದ ಮಾಡುವ ಇಷ್ಟಲಿಂಗ ಪೂಜೆಯಿಂದ ದೊರೆಯುವ ಮನಃಶಾಂತಿಯಷ್ಟೇ ಮುಖ್ಯವಾಗುತ್ತದೆ. ನಂತರ ಎಲ್ಲರಂತೆ ದೈನಂದಿನ ಐಹಿಕ ಬದುಕಿನ ವ್ಯವಹಾರದಲ್ಲಿ ತೊಡಗಿ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿಬಿಡುತ್ತಾರೆ. ಆದರೆ ಬರಿ ಲಿಂಗಭಕ್ತಿ ಮಾಡುವವರು ಲಿಂಗವಂತರಾಗುವುದಿಲ್ಲ. ಅವರ ಮುಂದೆ ಜಂಗಮಭಕ್ತಿಯ ಜವಾಬ್ದಾರಿ ಇದೆ. ಕಾಯಕ ನಿಷ್ಠೆ, ಪ್ರಸಾದ ಪ್ರಜ್ಞೆ ಮತ್ತು ದಾಸೋಹದ ಹೊಣೆಗಾರಿಕೆಯಿಂದ ಜಂಗಮಭಕ್ತಿ ಮಾಡಬೇಕಾಗುತ್ತದೆ.
ಇಷ್ಟಲಿಂಗ ತತ್ತ್ವದಲ್ಲಿ ನಂಬಿಕೆ ಇಟ್ಟವನು ಕಾಯಕದ ಮೂಲಕವೇ ಬದುಕಬೇಕು ಮತ್ತು ಸಮಾಜ ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕಾಯಕದಿಂದ ಬಂದುದನ್ನು ದೇವರು ಕೊಟ್ಟ ಪ್ರಸಾದವೆಂದು ಭಾವಿಸಬೇಕು. ಆ ಮೂಲಕ ‘ನಾನು ಕಷ್ಟಪಟ್ಟು ಗಳಿಸಿದ್ದೇನೆ’ ಎಂಬ ಅಹಂಭಾವದಿಂದ ಮುಕ್ತರಾಗಬೇಕು. ಕಾಯಕದ ಮೂಲಕ ಬರುವ ಹಣದಿಂದ ಸ್ವಾವಲಂಬಿ ಜೀವನ ಸಾಗಿಸುವುದರ ಜೊತೆಗೆ ದಾಸೋಹ ಭಾವದಿಂದ ಸಮಾಜಸೇವೆ ಮಾಡಬೇಕು. ಅಂದಾಗ ಮನ, ಮನೆ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುವುದು. ಆದರೆ ಇಂಥ ಶಾಂತಿಯನ್ನು ಪಡೆಯುವುದಕ್ಕೆ ಮುಂದಾಗದವರು ಲೆಕ್ಕಾಚಾರದಲ್ಲಿ ಮುಳುಗುತ್ತಾರೆ. ಸಮಾಜ ಸೇವೆ ಎಂಬ ಜಂಗಮಭಕ್ತಿಯು ನಮಗೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಇಷ್ಟಲಿಂಗ ಪೂಜೆ ಮಾತ್ರ ಎಂದು ಹೇಳುವವರ ಬಗ್ಗೆ ದೇವರಿಗೆ ಗೊತ್ತಿರುವ ಕಾರಣದಿಂದಲೇ ಆತ ಅಂಥ ಭಕ್ತರು ಬೇಡ ಎಂದು ಹೇಳುತ್ತಾನೆಂದು ಬಸವಣ್ಣನವರು ತಿಳಿಸಿದ್ದಾರೆ.

ವಚನ – ನಿರ್ವಚನ: ರಂಜಾನ್ ದರ್ಗಾ
administrator

Related Articles

Leave a Reply

Your email address will not be published. Required fields are marked *