ಹುಬ್ಬಳ್ಳಿ-ಧಾರವಾಡ ಸುದ್ದಿ

ಸಾರ್ವಜನಿಕ ಸ್ನೇಹಿ ವಾತಾವರಣಕ್ಕೆ ಸೂಚನೆ  ಉಪನೋಂದಣಾಧಿಕಾರಿ ಕಚೇರಿಗೆ ಡಿಸಿ ದಿಢೀರ್ ಭೇಟಿ

ಧಾರವಾಡ: ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು ಬೆಳಿಗ್ಗೆ ದೀಢಿರ್ ಭೇಟಿ ನೀಡಿ ಕಚೇರಿಯ ಕಾರ್ಯನಿರ್ವಹಣೆ ಪರಿಶೀಲಿಸಿ, ಸಾರ್ವಜನಿಕ ಸ್ನೇಹಿಯಾದ ವಾತಾವರಣ ನಿರ್ಮಿಸಲು ಸೂಚಿಸಿದರು.
ಸರಕಾರಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ಆದಾಯ ತರುವ ಇಲ್ಲಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿನ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಕುರಿತಂತೆ ಸಾರ್ವಜನಿಕರು ಕಳೆದ ಕೆಲವು ದಿನಗಳಿಂದ ತೀವ್ರ ಆಕ್ರೋಷವ್ಯಕ್ತಪಡಿಸಿದ್ದರು. ಅಲ್ಲದೇ ಕಚೇರಿಯಲ್ಲಿನ ಅನಾನುಕೂಲತೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು.


ಮಿನಿವಿಧಾನಸೌಧದ ನೆಲಮಹಡಿಯಲ್ಲಿ ನೋಂದಣಿ ಸರದಿಯ ಟೋಕನ್ ಪಡೆದಿರುವ ಸಾರ್ವಜನಿಕರಿಗಾಗಿ ಕಲ್ಪಿಸಿರುವ ಆಸನ ವ್ಯವಸ್ಥೆಗಳನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಜನರೊಂದಿಗೆ ಮಾತನಾಡಿ, ಬಂದಿರುವ ಕಾರ್ಯದ ಕಾರಣ, ಕಚೇರಿಯಿಂದ ಅವರಿಗೆ ದೊರೆತಿರುವ ಸ್ಪಂದನೆಯ ಕುರಿತು ಮಾಹಿತಿ ಪಡೆದರು.
ಮೊದಲ ಮಹಡಿಯಲ್ಲಿರುವ ಕಚೇರಿಗೆ ತೆರಳಿದ ಜಿಲ್ಲಾಧಿಕಾರಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಅವರ ಕಾರ್ಯವಿಧಾನಗಳ ವಿವರ ಪಡೆದರು. ನೋಂದಣಿಗೆ ಆಗಮಿಸುವ ಸಾರ್ವಜನಿಕರು, ಜನಸಾಮಾನ್ಯರಿಗೆ ಸುಲಭವಾಗಿ ಮಾರ್ಗದರ್ಶನ ನೀಡುವ ಏರ್ಪಾಡುಗಳನ್ನು ಮಾಡಬೇಕು. ನೋಂದಣಿಗೆ ಅಗತ್ಯವಿರುವ ದಾಖಲೆಗಳ ಮಾಹಿತಿಯ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು. ಸಾರ್ವಜನಿಕರಿಂದ ದಾಖಲೆಗಳನ್ನು ಸ್ವೀಕರಿಸಿ, ಪರಿಶೀಲಿಸುವ ಕೌಂಟರ್‌ನ್ನು ಕಚೇರಿಯ ಕಿಟಕಿ ಬಳಿಯೇ ತೆರೆಯಬೇಕು. ಸರದಿ ಅನುಸಾರ ಬರಲು ಅಲ್ಲಿಯೂ ಕ್ರಮವಾಗಿ ಟೋಕನ್‌ಗಳನ್ನು ನೀಡಬೇಕು. ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ನೋಂದಣಾಧಿಕಾರಿಗಳ ಕಚೇರಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಒದಗಿಸಲು ಸೂಚಿಸಿದರು.
ನಿಯಮಿತವಾಗಿ ವಿವಿಧ ಇಲಾಖೆಗಳ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ನೋಂದಣಾಧಿಕಾರಿ ಕೆ.ಅಶೋಕ, ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಉಪನೋಂದಣಾಧಿಕಾರಿ ಜಿ.ಐ.ಅರಮನಿ ಮತ್ತಿತರರು ಇದ್ದರು.
ಎಲ್ಲ ದಾಖಲೆಗಳನ್ನು ಸಲ್ಲಿಸಿ ಮಾರ್ಟ್‌ಗೇಜ್ ನೋಂದಣಿ ಕಾರ್ಯಕ್ಕೆ ಆಗಮಿಸಿದ್ದ ಸಾರ್ವಜನಿಕರೊಬ್ಬರ ದಾಖಲೆಗಳನ್ನು ತಮ್ಮ ಸಮ್ಮುಖದಲ್ಲಿಯೇ ಪರಿಶೀಲಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಸ್ವತಃ ನೋಂದಣಿ ಟೋಕನ್ ವಿತರಿಸಿದ್ದು ವಿಶೇಷವಾಗಿತ್ತು.

administrator

Related Articles

Leave a Reply

Your email address will not be published. Required fields are marked *