ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿಗೆ ಕಗ್ಗಂಟಾದ ವಿಪಕ್ಷ ನಾಯಕ ಸ್ಥಾನ!

ಬಿಜೆಪಿಗೆ ಕಗ್ಗಂಟಾದ ವಿಪಕ್ಷ ನಾಯಕ ಸ್ಥಾನ!

ಲಿಂಗಾಯತರಿಗೊ – ಒಬಿಸಿಗೋ

ಪ್ರಸನ್ನಕುಮಾರ ಹಿರೇಮಠ
ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ತಿಂಗಳು ಕಳೆದು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ, ಉಸ್ತುವಾರಿಗಳ ನೇಮಕ ಎಲ್ಲಾ ಮುಗಿಸಿ ಬಜೆಟ್ ಅಧಿವೇಶನಕ್ಕೆ ತಯಾರಿ ನಡೆಸುತ್ತಿದೆ. ಅಲ್ಲದೇ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನವೂ ಜಾರಿಯಾಗುತ್ತಿದ್ದರೂ ಆದರೆ ಬಿಜೆಪಿಗೆ ಮಾತ್ರ ಇದುವರೆಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.


ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವೂ ನೆನೆಗುದಿಗೆ ಬಿದ್ದಿದ್ದು,ನಡೆದ ಆತ್ಮಾವಲೋಕನ ಸಭೆಯಲ್ಲೂ ಯಾವುದೇ ನಿರ್ಧಾರ ಕೈಗೊಳ್ಳಲಾಗದೇ ಕೈ ಚೆಲ್ಲಿದೆ. ಜುಲೈ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಲು ಸಿಎಂ ಸಿದ್ದರಾಮಯ್ಯನವರು ಸಿದ್ಧತೆ ನಡೆಸಿದ್ದಾರೆ.ಅಷ್ಟರೊಳಗೆ ವಿಪಕ್ಷ ನಾಯಕನ ಆಗಬೇಕಿದೆ.

ಯಾರಾಗಲಿದ್ದಾರೆ ವಿಪಕ್ಷ ನಾಯಕ?: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸುನೀಲ್ ಕುಮಾರ್ ಹಾಗೂ ಅರವಿಂದ್ ಬೆಲ್ಲದ್ ಅವರ ಹೆಸರು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿವೆ.
ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬೊಮ್ಮಾಯಿಯವರ ಅಸಮರ್ಥತೆ ಮತ್ತು ಸರಿಯಾದ ಆಡಳಿತ ನಡೆಸದಿರುವುದು ಕಾರಣ ಎಂಬ ಮಾತಿದೆ. ಹಾಗಾಗಿ ಮತ್ತೆ ಅವರ ಮುಂದಾಳತ್ವದಲ್ಲಿ ಹೋಗಬೇಕೆ ಎಂಬುದು ಬಿಜೆಪಿಯನ್ನು ಕಾಡುತ್ತಿದೆ. ಈ ನಡುವೆ ಸ್ವತಃ ಬೊಮ್ಮಾಯಿ ಅವರೇ ತಾವು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬಹಿರಂಗವಾಗಿ ಹೇಳಿದ್ದರೂ ಅವರ ವರ್ತನೆ ಅನಧಿಕೃತ ವಿಪಕ್ಷ ನಾಯಕನಂತಿದೆ.

ಇನ್ನು ಲಿಂಗಾಯತ ಕೋಟಾದ ಅಡಿಯಲ್ಲಿ ಮುಂದಿನ ಆಯ್ಕೆ ಬಸನಗೌಡ ಪಾಟೀಲ ಯತ್ನಾಳ್. ಆದರೂ ಅವರನ್ನು ಜವಾಬ್ದಾರಿಯುತ ಸ್ಥಾನದಲ್ಲಿ ಕೂರಿಸಿದರೆ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಬದಲಿಗೆ ವಿಪಕ್ಷ ಬಿಜೆಪಿಯೇ ಮುಜುಗರಕ್ಕೊಳಗಾಗಬಹುದು ಎಂಬ ಆತಂಕವಿದೆ. ಹೀಗಾಗಿ ಮುಂದಿನ ಆಯ್ಕೆ ಅರವಿಂದ್ ಬೆಲ್ಲದ್. ಆದರೆ, ವಿಪಕ್ಷ ಸ್ಥಾನವನ್ನು ಅವರು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು? ಎಂಬ ಅನುಮಾನ ಹೈಕಮಾಂಡ್ಗೆ ಇದೆ. ಅಲ್ಲದೆ, ಕಳೆದ ಬಾರಿ ಸಿಎಂ ಸ್ಥಾನವನ್ನು ಲಿಂಗಾಯತ ನಾಯಕರಿಗೆ ನೀಡಿರುವ ಕಾರಣ ಈ ಬಾರಿ ವಿಪಕ್ಷ ನಾಯಕನ ಸ್ಥಾನವನ್ನು ಇತರೆ ಹಿಂದುಳಿದ ಸಮುದಾಯಗಳ (ಓಬಿಸಿ) ನಾಯಕರಿಗೆ ನೀಡಬೇಕು ಎಂಬ ಲೆಕ್ಕಾಚಾರವೂ ಚರ್ಚೆಯಲ್ಲಿದೆ.


ಹಾಗಾದಲ್ಲಿ ಸುನೀಲ್‌ಕುಮಾರ್ ಕಾರ್ಕಳ ಅವರಿಗೆ ಈ ಸ್ಥಾನ ಅನಾಯಾಸವಾಗಿ ಹುಡುಕಿಕೊಂಡು ಬರಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಇಂಧನ ಸಚಿವರಾಗಿ ಉತ್ತಮ ಕೆಲಸಗಳ ಮೂಲಕ ಹೆಸರು ಮಾಡಿದ್ದಾರಲ್ಲದೇ ಆರ್‌ಎಸ್‌ಎಸ್ ಕೇಡರ್ ಹಿನ್ನೆಲೆ ಇರುವ ನಾಯಕ. ಬಿಜೆಪಿ ಮಟ್ಟಿಗೆ ಆರ್‌ಎಸ್‌ಎಸ್ ಕೇಡರ್ ನಾಯಕರಿಗೆ ವಿಶೇಷ ಗೌರವ ಮತ್ತು ಹೆಚ್ಚಿನ ಆದ್ಯತೆ ಇದ್ದು, ಈ ಆಧಾರದಲ್ಲಿ ಸುನೀಲ್ ಕುಮಾರ್ ಅವರು ವಿಪಕ್ಷ ನಾಯಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎನ್ನಲಾಗುತ್ತಿದೆ.
ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು, ಅವರ ಮಗ ಬಿವೈ ವಿಜಯೇಂದ್ರ ಅವರ ಹೆಸರು ಸಹ ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅವರಿಗೆ ಸದ್ಯಕ್ಕೆ ಆ ಸಾಧ್ಯತೆ ಕಡಿಮೆ

ರಾಜ್ಯಾಧ್ಯಕ್ಷ ಸ್ಥಾನ ಬದಲಾಗುವುದೇ?

ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕಳೆದ ವರ್ಷ ಆಗಸ್ಟ್‌ನಲ್ಲಯೇ ಕೊನೆಗೊಂಡಿದೆ. ವಿಧಾನಸಭಾ ಚುನಾವಣೆಯ ಕಾರಣದಿಂದ ಅವರ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಬಿಜೆಪಿಯ ಹೀನಾಯ ಸೋಲಿನ ನಂತರೆ ರಾಜ್ಯಾಧ್ಯಕ್ಷರನ್ನು ಬದಲಾಯಿಸುವ ಮಾತುಗಳು ಮುನ್ನೆಲೆಗೆ ಬಂದಿದೆ.


ರಾಜ್ಯದಾದ್ಯಂತ ಸುತ್ತಿ ಬಿಜೆಪಿ ಪಕ್ಷ ಬಲಪಡಿಸುವ ಮುಖ ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ನಳೀನ್‌ಕುಮಾರ ಅವರನ್ನೆ ಮತ್ತೊಂದು ಅವಧಿಗೆ ಮುಂದುವರೆಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಈ ನಡುವೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಅಶ್ವಥ್‌ನಾರಾಯಣ ಅವರ ಹೆಸರು ಮುಂಚೂಣಿಯಲ್ಲಿದ್ದು, ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಒಕ್ಕಲಿಗ ಸಮುದಾಯವನ್ನು ಬಿಜೆಪಿ ಕಡೆ ಸೆಳೆಯಲು ಮುಂದಾಗುವ ಸಾಧ್ಯತೆಗಳು ಇಲ್ಲದಿಲ್ಲ.

administrator

Related Articles

Leave a Reply

Your email address will not be published. Required fields are marked *