ಹುಬ್ಬಳ್ಳಿ-ಧಾರವಾಡ ಸುದ್ದಿ

’ಜೇಮ್ಸ್’ಗೆ ಅವಳಿನಗರದಲ್ಲಿ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ/ ಧಾರವಾಡ : ಇಂದು ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ’ಜೇಮ್ಸ್’ಗೆ ಅವಳಿನಗರದಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಹುಬ್ಬಳ್ಳಿಯ ಸುಧಾ ಮತ್ತು ಅಪ್ಸರಾ ಥಿಯೇಟರ್‌ಗಳಲ್ಲಿ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಯಿತು.
ಥಿಯೇಟರ್ ಬಳಿ ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅಭಿಮಾನಿಗಳು, ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.


ಕಟೌಟ್‌ಗಳಿಗೆ ಹೂವಿನ ಹಾರ ಹಾಕುವ ಜೊತೆಗೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ನೆಚ್ಚಿನ ನಟನ ನೆನೆದು ಭಾವುಕರಾದರು. ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿದರು.
ಎರಡೂ ಥಿಯೇಟರ್‌ಗಳಲ್ಲಿ ಬೆಳಿಗ್ಗೆ 8.50 ಮತ್ತು 9 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭಗೊಂಡಿರುವುದರಿಂದ, ಪುನೀತ್ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಥಿಯೇಟರ್‌ಗಳ ಮುಂದೆ ಟಿಕೆಟ್‌ಗಾಗಿ ಜಮಾಯಿಸಿದ್ದರು. ನೆಚ್ಚಿನ ನಟನ ಭಾವಚಿತ್ರವನ್ನು ಕೈಯಲ್ಲಿಡಿದು ’ಅಪ್ಪು ಅಮರ’ ಮತ್ತು ’ಸ್ಟಾರ್ ಸ್ಟಾರ್, ಪವರ್ ಸ್ಟಾರ್’ ಘೋಷಣೆ ಕೂಗಿದರು.
ತಮಟೆ ಬಡಿತಕ್ಕೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಪುನೀತ್ ನಟನೆಯ ಚಿತ್ರಗಳ ಹಾಡುಗಳು ಅಬ್ಬರ ಥಿಯೇಟರ್ ಬಳಿ ಮುಗಿಲು ಮುಟ್ಟಿತು. ಸಿನಿಮಾ ವೀಕ್ಷಣೆಗೆ ಬಂದವರಿಗೆ ಅಭಿಮಾನಿಗಳು ಉಪ್ಪಿಟ್ಟು ಮತ್ತು ಕೇಸರಿ ಬಾತ್ ವಿವರಿಸಿದರು.


ಪೇಡೆನಗರಿಯ ಪದ್ಮಾ ಮತ್ತು ವಿಜಯಾ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಸಿದ್ಧವಾದ ಮೊದಲ ಶೋ ಭರ್ಜರಿ ಓಪನಿಂಗ್ ಪಡೆದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯ ಮೇಲೆ ನೋಡಿ ಕಣ್ಮಣ ತುಂಬಿಕೊಂಡರು.
ಚಿತ್ರಮಂದಿರದ ಆವರಣದಲ್ಲಿ ಅಪ್ಪು ಅಭಿಮಾನಿಗಳು ಜಮಾಯಿಸಿ ಸಂಭ್ರಮಿಸಿದರು. ಚಿತ್ರಮಂದಿರದ ಆವರಣದಲ್ಲಿ ಹಾಕಲಾಗಿರುವ ಅಪ್ಪು ಕಟೌಟ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಭರ್ಜರಿಯಾಗಿಯೇ ’ಜೇಮ್ಸ್’ ನನ್ನು ಸ್ವಾಗತಿಸಿದರು. ಪ್ರದರ್ಶನ ಆರಂಭವಾಗುವ ಎರಡು ಗಂಟೆ ಮುಂಚಿತವಾಗಿ ಟಿಕೆಟ್‌ಗಳು ಮಾರಾಟವಾಗಿದ್ದವು.
ಕೊರತೆ-ವಾಗ್ವಾದ : ನಗರದ ಪದ್ಮಾ ಚಿತ್ರಮಂದಿರಲ್ಲಿ ಜೇಮ್ಸ್ ಚಿತ್ರದ ಸಂಭ್ರಮಾಚಾರಣೆಗೆ ಬಂದಿದ್ದ ಅಪ್ಪು ಅಭಿಮಾನಿಗಳಿಗೆ ಚಿತ್ರ ಮಂದಿರದ ಮಾಲಿಕರು ಅಗತ್ಯ ಸಹಕಾರ ನೀಡಲಿಲ್ಲ ಎಂಬ ಕಾರಣದಿಂದ ಕೆಲವು ಅಭಿಮಾನಿಗಳು ಅಸಮಾಧಾನ ಕೂಡ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
ಈ ಸಂದರ್ಭದಲ್ಲಿ ಚಿತ್ರಮಂದಿರದ ಮಾಲಿಕರು ಅಭಿಮಾನಿಗಳು ಜೊತೆ ಅನುಚಿತವಾಗಿ ವರ್ತಿಸುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿರುವುದು ನಡೆದಿದೆ.
ಇನ್ನೊಂದೆಡೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಕುಡಿಯಲು ನೀರು ಒದಗಿಸದ ಮಾಲಿಕರ ಬಗ್ಗೆ ಪ್ರೇಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಭಾವುಕರಾದ ಅಭಿಮಾನಿಗಳು

ಹುಬ್ಬಳ್ಳಿ: ನಟ ಪುನೀತ್ ರಾಜಕುಮಾರ್ ಅಭಿನಯದ ’ಜೇಮ್ಸ್’ ಸಿನಿಮಾ ಬಿಡುಗಡೆ ಹಾಗೂ ಜನ್ಮ ದಿನದ ಪ್ರಯುಕ್ತ ಇಲ್ಲಿನ ಸುಧಾ ಮತ್ತು ಅಪ್ಸರಾ ಥಿಯೇಟರ್ ಬಳಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.


ಪುನೀತ್ ಅಭಿಮಾನಿ ಹಾಗೂ ಜೈ ರಾಜವಂಶ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘು ವದ್ದಿ ಅವರು, ಸುಧಾ ಥಿಯೇಟರ್ ಎದುರು ಮೂವತ್ತಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಎಲ್ಲರಿಗೂ ಪುನೀತ್ ಭಾವಚಿತ್ರಗಳನ್ನು ಉಚಿತವಾಗಿ ವಿತರಿಸಿದರು.
ಬಳಿಕ ಮಾತನಾಡಿದ ಅವರು, ’ಅಪ್ಪು ಅಣ್ಣನ ಅನುಪಸ್ಥಿತಿಯಲ್ಲಿ ಅವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ. ಅಮರರಾಗಿರುವ ಅವರು ನಮ್ಮೊಂದಿಗೆ ಸದಾ ಇರಲಿದ್ದಾರೆ. ಹಾಗಾಗಿ, ಅವರ ಜನ್ಮದಿನದ ಅಂಗವಾಗಿ ಹಿರಿಯ ನಾಗರಿಕರನ್ನು ಸನ್ಮಾನಿಸಿ, ಫೋಟೋಗಳನ್ನು ವಿತರಿಸಿದ್ದೇನೆ. ಎಲ್ಲರ ಮನೆ-ಮನದಲ್ಲೂ ಅಪ್ಪು ಶಾಶ್ವತವಾಗಿ ನೆಲೆಸಲಿದ್ದಾರೆ” ಎಂದು ಭಾವುಕರಾದರು.

administrator

Related Articles

Leave a Reply

Your email address will not be published. Required fields are marked *