ಹುಬ್ಬಳ್ಳಿ-ಧಾರವಾಡ ಸುದ್ದಿ
ಜುಲೈ 27ಕ್ಕೆ ಪಾಲಿಕೆ ಚುನಾವಣೆ?

ಜುಲೈ 27ಕ್ಕೆ ಪಾಲಿಕೆ ಚುನಾವಣೆ?

ನಿಗದಿಯಂತೆ ಮತದಾರರ ಪಟ್ಟಿಗೆ ಆಯೋಗ
ಹುಬ್ಬಳ್ಳಿ: ಹೈಕೋರ್ಟ ಸೂಚಿಸಿರುವ ಕಾಲಮಿತಿಯೊಳಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುವುದರಿಂದ ದಿ.14-06-2021ರಂದು ನೀಡಿರುವ ಕಾರ್ಯಕ್ರಮ ಪಟ್ಟಿಯಂತೆ ಮತದಾರರ ಪಟ್ಟಿಯನ್ನು ಜುಲೈ 9ರಂದು ಪ್ರಕಟಿಸಬೇಕೆಂದು ರಾಜ್ಯ ಚುನಾವಣಾ ಆಯೋಗ ಇಂದು ಸ್ಪಷ್ಟವಾಗಿ ಹೇಳಿದ್ದು ಜುಲೈ 30ರೊಳಗೆ ಚುನಾವಣೆ ನಡೆಯುವುದು ಖಚಿತವಾಗಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 82 ವಾರ್ಡುಗಳ ಮೀಸಲಾತಿ ಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು ಮತದಾರರ ಪಟ್ಟಿ ಅಂತಿಮಕ್ಕೆ ಆಯೋಗ ಸೂಚಿಸಿದ್ದರೂ 6 ತಿಂಗಳ ಕಾಲ ಎಲ್ಲ ಚುನಾವಣೆ ಮುಂದೂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದಿ.19ರಂದು ಮತದಾರರ ಪಟ್ಟಿ ಕಾರ್ಯ ಕೈಗೊಳ್ಳಬೇಕೋ ಸದ್ಯಕ್ಕೆ ಸ್ಥಗಿತಗೊಳಿಸಬೇಕೋ ಎಂದು ಕೋರಿದ್ದ ಸ್ಪಷ್ಟನೆಗೆ ಇಂದು ಆಯೋಗ ನಿಗದಿಯಂತೆ ಪಟ್ಟಿ ಪೂರ್ತಿಗೊಳಿಸಲು ಸೂಚಿಸಿದೆ.
ಹು-ಧಾ ಪಾಲಿಕೆ ಚುನಾವಣೆ ಸಂಬಂಧ ಹೈಕೋರ್ಟನಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆ (ಡಬ್ಲು ಪಿ ನಂ 49814/2019 ಸಿ/ಡಬ್ಲು ಡಬ್ಲು ಪಿ ನಂ 245 /2020)ರ ಪ್ರಕರಣದಲ್ಲಿ ದಿ.17-12-2020 ಆದೇಶದಂತೆ ಜುಲೈ 30ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿದ್ದು ಮತದಾರರ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆಯೇ ಚುನಾವಣೆ ವೇಳಾ ಪಟ್ಟಿ ಪ್ರಕಟಗೊಳ್ಳುವುದು ನಿಶ್ಚಿತವಾಗಿದೆ.ಮತದಾರರ ಪಟ್ಟಿ ಪ್ರಕಟಗೊಂಡ 17ದಿನಗಳೊಳಗೆ ಮತದಾನವೂ ಮುಗಿಯಬೇಕಿದೆ.
ನಂಬಲರ್ಹ ಮೂಲಗಳ ಪ್ರಕಾರ ಮಹಾನಗರಪಾಲಿಕೆಗೆ ಜುಲೈ 27ರಂದು ಮತದಾನ ನಡೆಯಲಿದ್ದು ಜುಲೈ 29ರಂದು ಮತ ಎಣಿಕೆ ನಡೆಯಲಿದೆ.
ಈಗಾಗಲೇ ವಾರ್ಡುಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ ವ್ಯಾಪ್ತಿಯ ಮತದಾರರ ಕರಡುಪಟ್ಟಿ 28-06-2021ರಂದು ಪ್ರಕಟಿಸಲಿದ್ದು ಆಕ್ಷೇಪಣೆಗಳನ್ನು ಸಲ್ಲಿಸಲು 01-07-2021ರಂದು ಅಂತಿಮ ದಿನವಾಗಿದೆ.
28ರಂದು ವಾರ್ಡವಾರು ತಯಾರಿಸಲಾದ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ಪ್ರಚುರ ಪಡಿಸಿದ ನಂತರ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಿ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟನಲ್ಲಿ ಅಪಲೋಡ ಮಾಡಲಿದೆ.
ಈಗಾಗಲೇ ಬಿಜೆಪಿಯಲ್ಲಿ ಸದ್ದಿಲ್ಲದೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದ್ದು ಕಾಂಗ್ರೆಸ್‍ನಲ್ಲಿ ಸಹ ನಿಟ್ಟಿನಲ್ಲಿ ಯತ್ನ ನಡೆದಿದೆ.ಚುನಾವಣೆ ಮುಂದೂಡಬಹುದೆಂಬ ಲೆಕ್ಕಾಚಾರವೀಗ ತಲೆಕೆಳಗಾಗಿದ್ದಿ ಇನ್ನು 34 ದಿನದೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು ಈ ಬಾರಿ ಹಿಂದೆಂದಿಗಿಂತ ಪೈಪೋಟಿ ಜೋರಾಗುವುದರಲ್ಲಿ ಸಂಶಯವಿಲ್ಲ.
ಮತ್ತೊಮ್ಮೆ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಕಸರತ್ತು ನಡೆಸಿದ್ದು ಆದರೆ ಒಂದೊಂದು ವಾರ್ಡಗೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ತುರ್ತಾಗಿ ಚುನಾವಣೆ ಬಂದಿರುವುದು ಅನುಕೂಲವಾಗಿ ಪರಿಣಮಿಸಿದೆ.ಕಾಂಗ್ರೆಸ್‍ನಲ್ಲೂ ತೀವ್ರ ಪೈಪೋಟಿಯಿದ್ದು ಆಪ್ ಮತ್ತು ಎಐ ಎಂಐಎಂ ಸಹ ಈ ಬಾರಿ ಕೆಲ ವಾರ್ಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗಳಿಗೆ ಕಾಡುವುದು ಖಚಿತವಾಗಿದೆ. ಅನೇಕ ಆಕಾಂಕ್ಷಿಗಳು ಚುನಾವಣೆ ಲಕ್ಷ್ಯದಲ್ಲಿಟ್ಟುಕೊಂಡು ಕೋವಿಡ್ ನೆರವಿನ ಕಿಟ್‍ಗಳ ಹಂಚಿಕೆಯಲ್ಲಿ ತೊಡಗಿದ್ದವರು ಮುಂದೂಡುವ ಸಾಧ್ಯತೆ ಹಿನ್ನೆಲೆಯಲ್ಲಿ ತಟಸ್ಥರಾಗಿದ್ದು ಈಗ ಮತ್ತೆ ಚುರುಕುಗೊಳ್ಳುವುದು ಖಚಿತ.
ಕಳೆದ 27 ತಿಂಗಳುಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದಿರುವ ಮಹಾನಗರ ಪಾಲಿಕೆಗೆ ಅಗಸ್ಟನಲ್ಲಿ ಹೊಸಬರ ಆಗಮನ ಖಚಿತವಾಗಿದೆ.

 

administrator

Related Articles

Leave a Reply

Your email address will not be published. Required fields are marked *